ಹುಬ್ಬಳ್ಳಿ: ಬಿಜೆಪಿಯಿಂದ ಟಿಕೆಟ್ ಕೊಡಿಸುವ ಹೆಸರಲ್ಲಿ ಉದ್ಯಮಿಯೊಬ್ಬರಿಂದ ಐದು ಕೋಟಿ ರೂ. ವಂಚಿಸಿರುವ ಚೈತ್ರಾ ಕುಂದಾಪುರನಂತಹ ವ್ಯಕ್ತಿಗಳು ಎಲ್ಲಾ ಪಕ್ಷಗಳಲ್ಲೂ ಇರುತ್ತಾರೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ. ಚೈತ್ರಾ ಅವರು ಬಿಜೆಪಿ ಪಕ್ಷಕ್ಕೆ ಸೇರಿದವರಲ್ಲ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.
ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಂದರ ಕಂಬ ಹಾಗೂ ಭಗವಧ್ವಜ ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಮಾಡುವುದು ಜನರಿಗೆ ಮೋಸ ಮಾಡುವುದನ್ನೇ ಕಾಯಕವಾಗಿಸಿಕೊಂಡ ಜನರು ಇರುತ್ತಾರೆ. ಅಂತವರ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದರು.
ಎಲ್ಲೆಲ್ಲೋ ದುಡ್ಡು ಮಾಡಿದವರು ಹಾಗೂ ರಾಜಕೀಯಕ್ಕೆ ಹೇಗೆ ಬರಬೇಕು ಎಂದು ತಿಳಿಯದವರು ಈ ರೀತಿ ಮೋಸ ಹೋಗುತ್ತಾರೆ. ಟಿಕೆಟ್ ಕೊಡಿಸುವುದಾಗಿ ನಂಬಿಸುವ ನಕಲಿ ವ್ಯಕ್ತಿಗಳಿಂದ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಇದನ್ನೂ ಓದಿ:BiggBoss Kannada; ಈ ಬಾರಿ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆಯುವುದಿಲ್ಲ ಬಿಗ್ ಬಾಸ್
ಚೈತ್ರಾ ಕುಂದಾಪುರ, ಬಿಜೆಪಿಯ ತತ್ವ ಸಿದ್ಧಾಂತಗಳ ಕುರಿತಾಗಿ ಮಾತನಾಡಿದ ಕೂಡಲೇ ಅವರು ಪಕ್ಷದವರು ಆಗುವುದಿಲ್ಲ. ಪಕ್ಷದಲ್ಲಿ ಟಿಕೆಟ್ ಪಡೆಯುವುದಕ್ಕೆ ಅದರದ್ದೇ ಆದ ನಿಯಮ, ಪದ್ಧತಿಗಳಿವೆ. ಅದರನ್ವಯ ಪಕ್ಷ ಟಿಕೆಟ್ ನೀಡುತ್ತದೆಯೇ ವಿನಃ ಯಾರೋ ಏನೇನು ಹೇಳಿಕೊಂಡಂತೆ ಟಿಕೆಟ್ ದೊರೆಯದು ಎಂಬುದು ಇಂತಹ ಪ್ರಕರಣಗಳಿಂದ ತಿಳಿಯುತ್ತದೆ. ಟಿಕೆಟ್ ನೆಪದಲ್ಲಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಯಾವುದೇ ರಾಜಕೀಯ ಪಕ್ಷವೂ ಚೈತ್ರಾ ಕುಂದಾಪುರ ರಂತವರನ್ನು ಪ್ರೋತ್ಸಾಹಿಸುವ ಇಲ್ಲವೇ ಬೆಳೆಸುವ ಕೆಲಸ ಮಾಡುವುದಿಲ್ಲ. ಟಿಕೆಟ್ ಬಯಸುವವರು ಮೊದಲು ಯಾರು ಏನು ಎಂಬುದನ್ನು ನೋಡಿಕೊಂಡು ಹೆಜ್ಜೆ ಇರಿಸಬೇಕೆಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಈಗ ಕಾಂಗ್ರೆಸ್ ನಲ್ಲಿದ್ದಾರೆ. ಕಾಂಗ್ರೆಸ್ ಬಗ್ಗೆ ಅವರು ಹೆಚ್ಚು ಯೋಚನೆ ಮಾಡುವುದು ಒಳ್ಳೆಯದು. ಅಲ್ಲಿದ್ದುಕೊಂಡು ಅವರು ಬಿಜೆಪಿ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎಂದರೆ ಅವರ ಮನಸ್ಸು ಇನ್ನು ಬಿಜೆಪಿಯಲ್ಲಿ ಇದೆ ಎಂದೆನಿಸುತ್ತದೆ. ಅವರ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.