Advertisement

ಮೆಸೇಜ್‌ಗೆ ಮರುಳಾಗಿ ಮೋಸಹೋದರು!

11:43 AM Mar 16, 2018 | |

ಬೆಂಗಳೂರು: ವಿಕ್ರಂ ಇನ್‌ವೆಸ್ಟ್‌ಮೆಂಟ್‌ ವಂಚನೆ ಪ್ರಕರಣ ಅಗೆದಷ್ಟು ಆಳಕ್ಕೆ ಹೋಗುತ್ತಿದ್ದು, ವಂಚಕರು ವ್ಯಕ್ತಿಗೆ ತಕ್ಕಂತೆ ತಂತ್ರ ಹಣೆಯುತ್ತಿದ್ದ ವಿಷಯ ತನಿಖೆ ವೇಳೆ ಗೊತ್ತಾಗಿದೆ. ಕಂಪನಿ ಮಾಲೀಕ ರಾಘವೇಂದ್ರ ಶ್ರೀನಾಥ್‌ ಮತ್ತು ತಂಡ ಗ್ರಾಹಕನ ಆರ್ಥಿಕ ಸ್ಥಿತಿ ನೋಡಿ ಅದಕ್ಕೆ ತಕ್ಕ ಮೊಬೈಲ್‌ ಸಂದೇಶಗಳನ್ನು ಕಳುಹಿಸಿ ಆ ವ್ಯಕ್ತಿಯನ್ನು ವಂಚನೆ ಖೆಡ್ಡಾಗೆ ಕೆಡವುತ್ತಿತ್ತು. ಇದಕ್ಕಾಗಿಯೇ ಕೆಲ ಸಿಬ್ಬಂದಿ ನಿಯೋಜಿಸಲಾಗಿತ್ತು.

Advertisement

ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಪ್ರಹ್ಲಾದ್‌ ಹಾಗೂ ನಾಗರಾಜ್‌ ಕಂಪನಿಯಲ್ಲಿ ವೆಲ್ತ್‌ ಮ್ಯಾನೆಜರ್‌ಗಳಾಗಿದ್ದರೂ ಹೊರಗಡೆ ವಿಮಾ ಏಜೆಂಟ್‌ಗಳಾಗಿದ್ದರು. ತಮ್ಮ ಸಂಬಂಧಿಕರು ಹಾಗೂ ಪರಿಚಯಸ್ಥರ ಮೂಲಕ ಗ್ರಾಹಕರಿಗೆ ಬಲೆ ಬೀಸಿ, ಸ್ಕೀಂಗಳ ಮಾಹಿತಿ ನೀಡುತ್ತಿದ್ದರು.

ಕ್ರೀಡಾಪಟುಗಳು ಮತ್ತು ಸಿನಿಮಾ ನಟರು ಹಾಗೂ ಗಣ್ಯರು, ರಾಜಕೀಯ ಮುಖಂಡರನ್ನೇ ಗುರಿಯಾಗಿಸಿಕೊಂಡು ಪರಿಚಯಿಸಿಕೊಳ್ಳುತ್ತಿದ್ದ ವಂಚಕರು, ಕಂಪನಿ ನೀಡುವ ಲಾಭವನ್ನು ತಿಳಿಸುತ್ತಿದ್ದರು. ಬಳಿಕ ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಲಾಭ ಬರುತ್ತದೆ. ಯಾವ ಶೇರು ಖರೀದಿಸಿದರೆ ಎಷ್ಟು ಹಣ ಬರುತ್ತದೆ ಎಂದೆಲ್ಲ ಮಾಹಿತಿ ನೀಡುತ್ತಿದ್ದರು. ಬಳಿಕ ಗ್ರಾಹಕರ ಮೊಬೈಲ್‌ ನಂಬರ್‌ ಪಡೆದು, ಅವರ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ರೀನಾಥ್‌ಗೆ ಮಾಹಿತಿ ನೀಡುತ್ತಿದ್ದರು. ಬಳಿಕ ಶ್ರೀನಾಥ್‌ ಆ ವ್ಯಕ್ತಿಯ ನಿರೀಕ್ಷೆಯಂತೆ ವೈಯಕ್ತಿಕ ಸಂದೇಶ ಸಿದ್ಧಪಡಿಸಿ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಲಾಕ್‌ ಮನಿಗೂ ಸಂದೇಶ: ಒಂದು ವೇಳೆ ತಾವು ಸಂಪರ್ಕಿಸುವ ಗ್ರಾಹಕ ಕಪ್ಪು ಹಣ ಹೊಂದಿದ್ದಾನೆ ಎಂಬುದು ಖಚಿತವಾದರೆ ಆ ವ್ಯಕ್ತಿಯ ಹಿಂದೆ ಬೀಳುತ್ತಿದ್ದ ಆರೋಪಿಗಳು, ಅವರ ಮೊಬೈಲ್‌ಗೆ ಪ್ರತ್ಯೇಕ ಸಂದೇಶಗಳನ್ನು ನಿರಂತರವಾಗಿ ಕಳುಹಿಸುತ್ತಿದ್ದರು. ಆತನಿಗೆ ಇಲ್ಲದ ಆಮಿಷವೊಡ್ಡಿ ಕೋಟ್ಯಂತರ ರೂ. ಹೂಡಿಕೆ ಮಾಡಿಸುತ್ತಿದ್ದರು.

ಶೇ.60 ಲಾಭದ ಆಮಿಷ: ಸಾಫ್ಟ್ವೇರ್‌ ಎಂಜಿನಿಯರ್‌, ಸರ್ಕಾರಿ ನೌಕರರು, ವೈದ್ಯರು ಹಾಗೂ ಮಧ್ಯಮ ವರ್ಗದ ಮಂದಿಗೆ ಕಳುಹಿಸುತ್ತಿದ್ದ ಸಂದೇಶಗಳಲ್ಲಿ ಕನಿಷ್ಠ ಶೇ.50ರಿಂದ ಶೇ.60ಕ್ಕೂ ಅಧಿಕ ಲಾಭ ಬರುವ ರೀತಿಯಲ್ಲಿ ಸಂದೇಶ ಕಳುಹಿಸುತ್ತಿದ್ದರು. ನೂರಾರು ಮಂದಿ ಗ್ರಾಹಕರನ್ನು ಮೂರು ವರ್ಗಗಳನ್ನಾಗಿ(ಸಾಮಾನ್ಯ, ಮಧ್ಯಮ ಹಾಗೂ ಹೈಪ್ರೋಫೈಲ್‌) ಮಾಡಿಕೊಂಡು ಸಂದೇಶ ಕಳುಹಿಸುತ್ತಿದ್ದರು.

Advertisement

ಜಾಹಿರಾತು ಕೊಟ್ಟೆ ಇಲ್ಲ: 2008ರಲ್ಲಿ ಕಂಪೆನಿ ಆರಂಭಿಸಿದ ಶ್ರೀನಾಥ್‌ ಯಾವುದೇ ಮಾಧ್ಯಮದ ಮೂಲಕ ಜಾಹಿರಾತು ನೀಡಿಲ್ಲ. ಅಲ್ಲದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಿಲ್ಲ. ಕೇವಲ ಸಂದೇಶಗಳು ಹಾಗೂ ಏಜೆಂಟ್‌ರ್‌ಗಳ ಮೂಲಕ ಸರಪಣಿ(ಚೈನ್‌ಲಿಂಕ್‌) ಮಾದರಿಯಲ್ಲಿ ವ್ಯವಹಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಲ್‌ನಲ್ಲೇ ನೋಡಿದ್ದು: “ನಾನು ಖಾಸಗಿ ಆಸ್ಪತ್ರೆ ವೈದ್ಯ. ನನ್ನ ಸಂಬಂಧಿಯೊಬ್ಬರು ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಬಗ್ಗೆ ಮಾಹಿತಿ ನೀಡಿದರು. ಅವರ ಮಾತು ನಂಬಿ 3 ವರ್ಷ ಹಿಂದೆ ಆರಂಭದಲ್ಲಿ 60 ಲಕ್ಷ ಬಳಿಕ 53 ಲಕ್ಷ ಸೇರಿ 1.13 ಕೋಟಿ ರೂ. ಹೂಡಿಕೆ ಮಾಡಿದ್ದೆ. ಅಂತೆಯೇ ಲಾಭಾಂಶ ಕೂಡ ಕೊಟ್ಟರು. ಒಂದು ವರ್ಷದಿಂದ ಅಸಲು ಇಲ್ಲದೇ ಲಾಭವನ್ನೂ ನೀಡದೆ ಸಬೂಬು ಹೇಳುತ್ತಾ ದಿನ ದೂಡುತ್ತಿದ್ದರು.

ಶ್ರೀನಾಥ್‌ನನ್ನಾಗಲಿ, ಇತರೆ ಏಜೆಂಟ್‌ಗಳನ್ನಾಗಿ ನಾನು ನೋಡಿಯೇ ಇಲ್ಲ. ಒಮ್ಮೆ ನೋಡಲು ಹೊರಟಾಗ ನನ್ನ ಸಂಬಂಧಿಕರು ನರಸಿಂಹಮೂರ್ತಿ ನಂಬರ್‌ ಕೊಟ್ಟರು. ಶ್ರೀನಾಥ್‌ನ ಭೇಟಿಗೆ ಅವಕಾಶ ಕೇಳಿದಾಗ ಎಲ್ಲವನ್ನು ನಾವೇ ನಿರ್ವಹಿಸುತ್ತೇವೆ. ಅವರು ಚೆನ್ನೈನಲ್ಲಿ ಇದ್ದಾರೆ ಎಂದು ಹೇಳುತ್ತಿದ್ದರು. ಇದೀಗ ಎಲ್ಲರನ್ನು ಸೆಲ್‌ನಲ್ಲೇ ನೋಡಿದ್ದು,’ ಎಂದು “ಉದಯವಾಣಿ’ ಜತೆ ವೈದ್ಯರೊಬ್ಬರು ನೋವು ತೋಡಿಕೊಂಡರು.

ಇನ್‌ವೆಸ್ಟ್‌ ಟೆಕ್‌ ಕಂಪನಿ ಸಂಬಂಧ?: ಈ ಹಿಂದೆ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ “ಇನ್‌ವೆಸ್ಟ್‌ ಟೆಕ್‌’ ಕಂಪನಿ ಮಾಲೀಕ ಸುರೇಶ್‌ ಕೃಷ್ಣಮೂರ್ತಿಗೂ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿಗೂ ಸಂಬಂಧವಿರಬಹುದು ಎಂದು ಇನ್‌ವೆಸ್ಟ್‌ ಟೆಕ್‌ ಗ್ರಾಹಕರೊಬ್ಬರು ಬನಶಂಕರಿ ಠಾಣೆ ಪೊಲೀಸರಿಗೆ ಮೌಖೀಕ ದೂರು ನೀಡಿದ್ದಾರೆ.

“ಆರೋಪಿ ಸೂತ್ರಂ ಸುರೇಶ್‌, 2005ರಲ್ಲಿ ಸುರೇಶ್‌ ಕೃಷ್ಣಮೂರ್ತಿ ಎಂಬ ನಕಲಿ ಹೆಸರಿಟ್ಟುಕೊಂಡು ಇನ್‌ವೆಸ್ಟ್‌ ಟೆಕ್‌ ಕಂಪನಿ ಮೂಲಕ ವಂಚಿಸಿರುವ ಸಾಧ್ಯತೆಯಿದೆ. ಎರಡೂ ಕಂಪನಿಗಳು ಒಂದೇ ಮಾದರಿಯಲ್ಲಿ ವಂಚಿಸಿವೆ. ನಾನು ಮತ್ತು ನನ್ನ ಸಂಬಂಧಿಯೊಬ್ಬರು ಇನ್‌ವೆಸ್ಟ್‌ ಟೆಕ್‌ ಕಂಪನಿಯಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ದೆವು. ಇದುವರೆಗೂ ವಾಪಸ್‌ ಬಂದಿಲ್ಲ.

ವಂಚಿಸಿದ ಆರೋಪಿಯನ್ನು ಬಂಧಿಸಲಾಯಿತು. ಆದರೆ, ನಮಗೆ ಹಣ ಮಾತ್ರ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ನಮಗೂ ನ್ಯಾಯ ಕೊಡಿಸಬೇಕು,’ ಎಂದು ಮನವಿ ಮಾಡಿರುವುದಾಗಿ ದೂರು ನೀಡಲು ಬಂದಿದ್ದ ವ್ಯಕ್ತಿ “ಉದಯವಾಣಿ’ಗೆ ತಿಳಿಸಿದರು. ಆದರೆ, ಆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಂದೇಶದ ಸ್ಯಾಂಪಲ್‌(ವೈದ್ಯರಿಗೆ ಬಂದಿರುವ ಸಂದೇಶ)
ಟ್ರೇಡಿಂಗ್‌ ಫಲಿತಾಂಶ

-ಸಿಪಿಒ-ಹೂಡಿಕೆ 20 ಲಕ್ಷ -ಆರ್‌ಒಐ-14,02,327 (ಶೇ70.11)  
-ಜಿಂಕ್‌/ನಿಕ್‌-ಹೂಡಿಕೆ 15 ಲಕ್ಷ-ಆರ್‌ಒಐ-10,04,7759 (ಶೇ67)  
-ಟಿನ್‌-ಹೂಡಿಕೆ 30 ಲಕ್ಷ-ಆರ್‌ಒಐ-23,11,487(ಶೇ77.04)  
-ಚಿನ್ನ-ಹೂಡಿಕೆ 30 ಲಕ್ಷ-ಆರ್‌ಒಐ-13,11,642 (ಶೇ 43.72) 
-ಕ್ರೂಡ್‌-ಹೂಡಿಕೆ 50 ಲಕ್ಷ ಕ್ಕೆ -ಆರ್‌ಒಐ 31,22,126 ರೂ (ಶೇ 62.44)  
-ಕಾಪರ್‌-ಹೂಡಿಕೆ 20 ಲಕ್ಷ-ಆರ್‌ಒಐ-12,14,571 (ಶೇ 60.72)

Advertisement

Udayavani is now on Telegram. Click here to join our channel and stay updated with the latest news.

Next