ಹುಬ್ಬಳ್ಳಿ: ನೂತನ ಸಂಸತ್ ಭವನ ವಿಚಾರವಾಗಿ ರಾಷ್ಟ್ರಪತಿ ಹೆಸರಲ್ಲಿ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಅದು ಅದರ ಡಿಎನ್ ಎದಲ್ಲಿಯೇ ಅಡಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಶಿಬಿರ ಉದ್ಘಾಟನೆ ಬಳಿಕ ಸುದ್ದಿಗಾರರರು ಕೇಳಿದ, ನೂತನ ಸಂಸತ್ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದಲಿತರೆಂಬ ಕಾರಣಕ್ಕೆ ಆಹ್ವಾನಿಸಲಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ನವರು ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಯಾಕೆ ಬೆಂಬಲ ನೀಡಿರಲಿಲ್ಲ. ಸೋಲುತ್ತೇವೆಂದು ಗೊತ್ತಿದ್ದರೂ ಬೇರೆ ಅಭ್ಯರ್ಥಿ ಕಣಕ್ಕಿಳಿಸಿದ್ದರು. ಅದು ಚಿಲ್ಲರೆ ರಾಜಕಾರಣ ಎಂದು ಟೀಕಿಸಿದರು.
ಆಧುನಿಕ ವ್ಯವಸ್ಥೆಗೆ ತಕ್ಕಂತೆ ನೂತನ ಸಂಸತ್ ಭವನ ನಿರ್ಮಿಸಲಾಗಿದೆ. ಆದರೆ, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶರು ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಫ್ಲೆಕ್ಸ್ ಎಂಬ ಕ್ಷುಲಕ ಹೇಳಿಕೆ ನೀಡಿದ್ದಾರೆ. ವಿಶ್ವವೇ ಈ ಭವನ ಮೆಚ್ಚಿಕೊಳ್ಳುತ್ತಿದೆ. ಒಳ್ಳೆಯ ಕೆಲಸ ಕಾಂಗ್ರೆಸ್ ಸಹಿಸುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅವರ ಕೆಳಮಟ್ಟದ ಮನಸ್ಥಿತಿ ಏನೆಂಬುದು ಇದರಿಂದ ಅರ್ಥವಾಗುತ್ತದೆ. ಜನರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದರು.
2011ರಲ್ಲಿ ಕಾಂಗ್ರೆಸ್ ಸರ್ಕಾರ ಜಾತಿಗಣತಿ ಮಾಡಲಿಲ್ಲ. ಆದರೀಗ ರಾಹುಲ್ ಗಾಂಧಿ ಈ ಬಗ್ಗೆ ಮಾತನಾಡುತ್ತಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಾದರೂ ಪ್ರಧಾನಿ ಮೋದಿ ಅವರನ್ನು ಬಯ್ಯುತ್ತಾರೆ. ಅವರ ಜನಪ್ರಿಯತೆ ಸಹಿಸಿಕೊಳ್ಳಲಾಗದೆ ಕನಸಲ್ಲೂ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡಿ ಶೇ. 33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲಾಗುತ್ತದೆ. ಕಾಂಗ್ರೆಸ್ ಈ ಹಿಂದೆಯೂ ಮೀಸಲಾತಿ ಕಲ್ಪಿಸಿಲ್ಲ, ಮುಂದೆಯೂ ಕಲ್ಪಿಸುವುದಿಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಹಿಳಾ ಮೀಸಲಾತಿ ಜಾರಿ ನೂರಕ್ಕೆ ನೂರರಷ್ಟು ಖಚಿತ. ಸ್ವಲ್ಪ ಸಮಯ ಹಿಡಿಯುತ್ತದೆ ಎಂದರು.
ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ರಾಜಕೀಯ ಬೆಳವಣಿಯಾದಾಗ ಚರ್ಚೆ, ವಿಮರ್ಶೆಗಳು ನಡೆಯುವುದು ಸಹಜ. ಇದೆಲ್ಲದರಿಂದ ಕೊನೆಗೆ ಅಮೃತವೇ ಹೊರಬರುತ್ತೆ ಎಂಬ ನಂಬಿಕೆ ಇದೆ ಎಂದು ಸಚಿವ ಜೋಶಿ ವ್ಯಕ್ತಪಡಿಸಿದರು.