ಬೆಂಗಳೂರು: ದೇಶದ ಸಾಮಾನ್ಯ ನಾಗರಿಕನೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂಬ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಪ್ರಾದೇಶಿಕ ಸಂಪರ್ಕ ಯೋಜನೆಯಾದ (ಆರ್‌ಸಿಎಸ್) “ಉಡಾನ್’ನಲ್ಲಿ ಪಾಲ್ಗೊಳ್ಳುವ ಸಂಬಂಧ ರಾಜ್ಯ ಸರ್ಕಾರವು ಗುರುವಾರ ಕೇಂದ್ರ ವಿಮಾನಯಾನ ಸಚಿವಾಲಯ ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತು.
ಪ್ರಾದೇಶಿಕ ಮಟ್ಟದಲ್ಲಿ ಒಂದೇ ರಾಜ್ಯದ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಮತ್ತು ನೆರೆಯ ರಾಜ್ಯದ ಗಡಿ ಭಾಗದ ಪ್ರದೇಶಗಳಿಗೆ ವಿಮಾನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಈ “ಉಡಾನ್’ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ದೇಶಾದ್ಯಂತ 400 ವಿಮಾನ ನಿಲ್ದಾಣಗಳ ಪೈಕಿ ಮೊದಲ ಹಂತದಲ್ಲಿ 45 ವಿಮಾನ ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಅದರಲ್ಲಿ ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕರ್ನಾಟಕದ ನಾಲ್ಕು ವಿಮಾನ ನಿಲ್ದಾಣಗಳಿಗೆ ಮೊದಲ ಹಂತದಲ್ಲಿ ವಿಮಾನಯಾನ ಸಂಸ್ಥೆಗಳಿಂದ ಬಿಡ್ ಮೂಲಕ ಪ್ರಸ್ತಾವನೆಗಳು ಬಂದಿವೆ.
ವಿಧಾನಸೌಧದಲ್ಲಿ ಗುರುವಾರ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ ನಾರಾಯಣ ಚೌಬೆ ಸಮ್ಮುಖದಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಶ್ರೀವಿಧ್ಯಾ ಮತ್ತು ಕೇಂದ್ರ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಟೀಲ್ ಇವರಿಬ್ಬರು “ಉಡಾನ್’ ಯೋಜನೆಯ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷಚಂದ್ರ್ ಖುಂಟಿಯಾ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಚಿವ ಆರ್.ವಿ. ದೇಶಪಾಂಡೆ, ಪ್ರಾದೇಶಿಕ ಸಂಪರ್ಕ ಯೋಜನೆ “ಉಡಾನ್’ನ ಮೊದಲ ಹಂತದಲ್ಲಿ ಕರ್ನಾಟಕದ ಬೆಂಗಳೂರು, ಮೈಸೂರು, ವಿದ್ಯಾನಗರ (ಬಳ್ಳಾರಿ) ಮತ್ತು ಬೀದರ್ ವಿಮಾನ ನಿಲ್ದಾಣಗಳಿಂದ ರಾಜ್ಯದ ಬೇರೆ ಪ್ರದೇಶಗಳಿಗೆ ವಿಮಾನ ಹಾರಾಟ ಆರಂಭಿಸುವ ಕುರಿತು ವಿವಿಧ ವಿಮಾನಯಾನ ಸಂಸ್ಥೆಗಳಿಂದ ಬಿಡ್ ಮೂಲಕ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮವಾಗಿ 80:20ರ ಅನುಪಾತದಲ್ಲಿ ಹಣಕಾಸಿನ ನೆರವು ಒದಗಿಸಲಿದೆ ಎಂದರು.
ತೆರಿಗೆ ವಿನಾಯ್ತಿ: ಉಡಾನ್‌ನ ಪ್ರಾದೇಶಿಕ ಸಂಪರ್ಕ ಯೋಜನೆಯ ರಾಜ್ಯದ ವಿಮಾನ ನಿಲ್ದಾಣಗಳಿಂದ ರಾಜ್ಯದ ಇತರ ಪ್ರದೇಶಗಳಿಗೆ ವಿಮಾನ ಸಂಚಾರ ನಿರ್ವಹಿಸುವ ವಿಮಾನಯಾನ ಸಂಸ್ಥೆಗಳಿಗೆ ಮಾರಾಟ ತೆರಿಗೆಯಲ್ಲಿ ಶೇ. 1ರಷ್ಟು ಕಡಿತ ಅಥವಾ ವಿಮಾನಯಾನ ಟರ್ಬೈನ್ ಇಂಧನನಲ್ಲಿ ವಿನಾಯ್ತಿ ನೀಡಲಾಗುವುದು. ಅಲ್ಲದೇ ಅವಶಕ್ಯತೆ ಇದ್ದಲ್ಲಿ ಉಚಿತ ಭೂಮಿ, ವಿದ್ಯುತ್, ನೀರು ಸೇರಿದಂತೆ ಇತರ ಮೂಲಸೌಕರ್ಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ದೇಶಪಾಂಡೆ ತಿಳಿಸಿದರು.
ಏಪ್ರಿಲ್ 27ಕ್ಕೆ ಚಾಲನೆ: ಇದೇ ವೇಳೆ ಮಾತನಾಡಿದ ಕೇಂದ್ರ ವಿಮಾನಯಾನ ಕಾರ್ಯದರ್ಶಿ ರಾಜೀವ ನಾರಾಯಣ ಚೌಬೆ, ಉಡಾನ್ ಯೋಜನೆಗೆ ಏ.27ರಂದು ಶಿಮ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ವೇಳೆ ಶಿಮ್ಲಾ-ದೆಹಲಿ, ನಾಂದೇಡ-ಹೈದರಬಾದ ಮತ್ತು ಕಡಪ-ಹೈದರಬಾದ ವಿಮಾನಯಾನ ಸಂಚಾರ ಮಾರ್ಗಗಳಿಗೆ ಹಸಿರು ನಿಶಾನೆ ಸಿಗಲಿದೆ. ವಿದ್ಯಾನಗರ-ಮೈಸೂರು ನಡುವೆ ಜುಲೈ ವೇಳೆಗೆ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಎರಡನೇ ಹಂತದ ಬಿಡ್ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ ಎಂದರು.
“ಅರ್ಥಿಕ ಪ್ರಗತಿಗೆ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ಮುಖ್ಯ. ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಸೇರಿದಂತೆ ಬೆಳಗಾವಿ, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿ ವಿಮಾನ ನಿಲ್ದಾಣಗಳ ತಾಂತ್ರಿಕ ಸಮಸ್ಯೆಗಳ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯದ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ’.
– ಆರ್.ವಿ. ದೇಶಪಾಂಡೆ, ಕೈಗಾರಿಕಾ ಹಾಗೂ ಮೂಲಸೌಕರ್ಯ ಸಚಿವ.