ಕಾಪು: ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ 20ನೇ ವರುಷದ ಕ್ರೋಧಿ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ ಸಮಾರಂಭವು ಪಡುಕುತ್ಯಾರು ಮೂಲಮಠದ ಶ್ರೀ ಸರಸ್ವತೀ ಸತ್ಸಂಗ ಮಂದಿರಲ್ಲಿ ಸೆ. 18ರಂದು ಸಂಪನ್ನಗೊಂಡಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕಾಳಹಸ್ತೇಂದ್ರ ಶ್ರೀಗಳು ಆಶೀರ್ವಚನ ನೀಡಿ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ, ಸಂಸ್ಕೃತಿ, ಸಂಸ್ಕಾರಗಳ ರಕ್ಷಣೆಗಾಗಿ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅಗತ್ಯ ಇದೆ. ವಿಶ್ವಬ್ರಾಹ್ಮಣ ಸಮಾಜವು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮಠದ ವತಿಯಿಂದ ವಿಶ್ವಕರ್ಮ ಮ್ಯೂಸಿಯಂ ಸ್ಥಾಪಿಸಿ ಅಲ್ಲಿ ಪಾರಂಪರಿಕ ಶಿಲ್ಪ, ಆಧುನಿಕ ಶಿಲ್ಪ ಕಲೆಗಳ ಅಧ್ಯಯನ ಮತ್ತು ಸಂಶೋಧನೆಗೆ ಅವಕಾಶ ಮಾಡಿಕೊಡುವ ಚಿಂತನೆಯಿದೆ ಎಂದರು.
ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್ ಮುಖ್ಯ ಅತಿಥಿಗಳಾಗಿದ್ದರು. ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ಆಸ್ಥಾನ ವಿದ್ವಾಂಸ ವೇದಬ್ರಹ್ಮ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ ಧಾರ್ಮಿಕ ಉಪನ್ಯಾಸ ನೀಡಿದರು. ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ನ ಸಂಸ್ಥಾಪಕ ಜಿ. ರಾಮಕೃಷ್ಣ ಆಚಾರ್ಯ ಮೂಡುಬಿದಿರೆ ದಿಕ್ಸೂಚಿ ಭಾಷಣ ಮಾಡಿದರು.ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ| ಬಿ. ಎಂ. ಉಮೇಶ್ ಕುಮಾರ್, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್. ಆರ್. ಹರೀಶ್ ಆಚಾರ್ಯ ಜಲಕದಕಟ್ಟೆ, ರಥ ಶಿಲ್ಪಿ ರಾಜಗೋಪಾಲ ಆಚಾರ್ಯ, ಪ್ರತಿಷ್ಠಾuನದ ಗೌರವಾಧ್ಯಕ್ಷ ಪಿ. ವಿ. ಗಂಗಾಧರ ಆಚಾರ್ಯ ಉಡುಪಿ, ಬಿಜೆಪಿ ಮುಖಂಡ ಸಂಜಯ್ ಪ್ರಭು, ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ವಿಶ್ವಕರ್ಮ ಸಮಾಜದ ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ಪ್ರತಿಷ್ಠಾನದ ವಿವಿಧ ಸಮಿತಿಗಳ ಅಧ್ಯಕ್ಷರು, ವಿಶ್ವಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ವಂದಿಸಿದರು. ಗೀತಾ ಚಂದ್ರ ಆಚಾರ್ಯ ಕಾರ್ಕಳ, ಕೆ. ಎಂ. ಗಂಗಾಧರ್ ಆಚಾರ್ಯ, ಮೌನೇಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.