ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದರ ಒಂದು ಭಾಗವಾಗಿ ಮೈಸೂರಿನ ಅರ್ಧದಷ್ಟು ಸೋಂಕು ಪ್ರಕರಣಗಳಿರುವ ಎನ್.ಆರ್. ಕ್ಷೇತ್ರದ ಲಾಕ್‌ಡೌನ್ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರದಲ್ಲಿ ಕಳೆದ 15 ದಿನಗಳಿಂದ ಕೋವಿಡ್ ಸೋಂಕು ಏರಿಕೆಯಾಗುತ್ತಲೇ ಇದೆ. ಸೋಂಕು ಹರಡುವಿಕೆ ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ಎನ್.ಆರ್.ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಕ್ಷೇತ್ರದ ಹಲವು ಬಡಾವಣೆಗಳ ಲಾಕ್‌ಡೌನ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಚೇಸಿಂಗ್ ದಿ ವೈರಸ್: ಮೈಸೂರಿನಲ್ಲಿ ಚೇಸಿಂಗ್ ದಿ ವೈರಸ್ ಶೀರ್ಷಿಕೆಯಡಿ ಕಾರ್ಯಾಚರಣೆ ಮೂಲಕ ಕೊರೊನಾ ತಡೆಗಟ್ಟಲು ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಈಗಾಗಲೇ ಸ್ಥಳೀಯ ಮುಖಂಡರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಾಲಿಕೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ ನಡುವೆ ಎನ್‌ಆರ್ ಕ್ಷೇತ್ರದಲ್ಲಿ ಸೋಂಕು ಹೆಚ್ಚಾಗಿದ್ದು, ಸೋಂಕಿನಿಂದ ಮೃತಪಟ್ಟವರ ಪ್ರಮಾಣದಲ್ಲೂ ಎನ್.ಆರ್ ಕ್ಷೇತ್ರಕ್ಕೆ ಸಿಂಹಪಾಲಿದೆ. ಈ ನಿಟ್ಟಿನಲ್ಲಿ ಎನ್.ಆರ್. ಕ್ಷೇತ್ರದ ಉದಯಗಿರಿ, ಕಲ್ಯಾಣಗಿರಿ, ಮಂಡಿ ಮೊಹಲ್ಲಾ, ಸುಭಾಷ್ ನಗರವನ್ನು ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಬಗ್ಗೆ ಶುಕ್ರವಾರ ಅಥವಾ ಶನಿವಾರ ಸ್ಪಷ್ಟ ನಿರ್ಧಾರ ಹೊರ ಬೀಳಲಿದೆ.
ಧಾರಾವಿ ಮಾದರಿ ಪ್ರಯೋಗ: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಮುಂಬೈನ ಧಾರಾವಿ ಮಾದರಿಯ ಪ್ರಯೋಗ ಮಾಡಲು ಜಿಲ್ಲಾಧಿಕಾರಿ ಮುಂದಾಗಿದ್ದು, ಮನೆ ಮನೆ ಸರ್ವೆ ನಡೆಸಿ ವೈರಸ್ ನಿಯಂತ್ರಿಸಲು ಯೋಜನೆ ರೂಪಿಸಿದ್ದಾರೆ. ಇನ್ನು ರೋಗ ಲಕ್ಷಣವಿದ್ದರೂ ಜನ ಆಸ್ಪತ್ರೆಗೆ ಬರುತ್ತಿಲ್ಲ. ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರವೂ ಇಲ್ಲದೇ ಜನ ನಿರ್ಲಕ್ಷ್ಯ ವಹಿಸುತ್ತಿದ್ದು, ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಲಾಕ್‌ಡೌನ್ ಶಿಕ್ಷೆ ನೀಡಲು ಚಿಂತನೆ ನಡೆಸಿದ್ದಾರೆ
ಸಾಮಾಜಿಕ ಅಂತರ ತಿಳಿಸುವ ಡಿವೈಸ್ : ಮಹಾಮಾರಿ ಕೋವಿಡ್ ವೈರಸ್ ಸೋಂಕಿನಿಂದ ದೂರ ಉಳಿಯಲು ಮಾಸ್ಕ್, ಸ್ಯಾನಿಟೈಸರ್‌ನಷ್ಟೇ ಸಾಮಾಜಿಕ ಅಂತರ ಅತ್ಯುತ್ತಮ ಮಾರ್ಗವಾಗಿದ್ದು, ಇದಕ್ಕೆ ಸಹಾಯ ಮಾಡುವ ಸಲುವಾಗಿಯೇ ಮೈಸೂರಿನ ಸಂಶೋಧಕರ ತಂಡವೊಂದು ಸೋಷಿಯಲ್ ಡಿಸ್ಟೆನ್ಸ್ ಎಂಬ ಡಿವೈಸ್‌ನ್ನು ಕಂಡು ಹಿಡಿದಿದೆ. ಈ ಡಿವೈಸ್ ನಮ್ಮ ಸುತ್ತಮುತ್ತಲಿನ ಸೋಂಕಿತ ವ್ಯಕ್ತಿಗಳಿದ್ದರೆ ನಮಗೆ ಮಾಹಿತಿ ನೀಡುತ್ತದೆ. ನಮ್ಮಿಂದ 6 ಅಡಿಗಳ ಅಂತರದಲ್ಲಿರುವ ಅತೀವ ಜ್ವರ ಇರುವ ವ್ಯಕ್ತಿಗಳಿದ್ದರೆ ಸೌಂಡ್ ಮೂಲಕ ಈ ಸಾಧನ ನಮಗೆ ಮಾಹಿತಿ ನೀಡುತ್ತದೆ. ಕೈಯಲ್ಲಿ ಹಿಡಿದುಕೊಳ್ಳುವಷ್ಟು ಸುಲಭವಾಗಿ ಈ ಡಿವೈಸ್ ಇದ್ದು, ಕೆಲ ಪ್ರದೇಶಗಳು ಮತ್ತು ಸಮುದಾಯಗಳಲ್ಲಿ ಕೊರೊನಾ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಆರೋಗ್ಯವಂತ ವ್ಯಕ್ತಿಗಳಿಂದ ಸೋಂಕಿತ ರೋಗಿಗಳನ್ನು ಪ್ರತ್ಯೇಕಿಸಲು ಈ ಸಾಧನ ಉಪಯುಕ್ತವಾಗಿದೆ. ಅಮೆರಿಕಾದಲ್ಲಿರುವ ಮೈಸೂರು ಮೂಲದ ರಾಹುಲ್ ರೆಡ್ಡಿ ನಾಡಿಕಟ್ಟು, ಸಿಕಂದರ್ ಮೋಯ್ಸಿದ್ದೀನ್ ಮೊಹಮದ್ ತಂಡ ಈ ಸಾಧನ ಕಂಡು ಹಿಡಿದಿದೆ.
ಕೋವಿಡ್ ಸೆಂಟರ್ ಸಿದ್ಧತೆ : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಗುರುವಾರ ಸ್ವತ್ಛತಾ ಕಾರ್ಯ ನಡೆಸಲಾಯಿತು. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಸೆಂಟರ್ ಸ್ಥಳಕ್ಕೆ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಜಾಗದಲ್ಲಿ 800ಕ್ಕೂ ಹೆಚ್ಚು ಬೆಡ್‌ಗಳನ್ನು ಹಾಕಲು ಸಿದ್ಧತೆ ಮಾಡಲಾಗಿದೆ.
ಅವ್ಯವಸ್ಥೆ ಸರಿಪಡಿಸಿ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಾ ಬೆಡ್ ಗಳು ಪೂರ್ಣಗೊಂಡ ಬಳಿಕ, ಸೋಂಕಿತರಿಗೆ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿ ಶುಚಿತ್ವಲ್ಲ, ಸರಿಯಾಗಿ ಔಷಧ ನೀಡುತ್ತಿಲ್ಲ, ವೈದ್ಯರು ಸರಿಯಾಗಿ ವಿಚಾರಿಸಿಕೊಳ್ಳುತ್ತಿಲ್ಲವೆಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಮಹಿಳೆಯೊಬ್ಬರು ವಿಡಿಯೋದಲ್ಲಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಿ, ಸರಿಯಾದ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ.