ಬೆಂಗಳೂರು: ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರನ್ನು 2017ನೇ ಸಾಲಿನ “ಮಹಾವೀರ ಶಾಂತಿ ‘ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಹಿರಿಯ ಸಾಹಿತಿ ಜಿನದತ್ತ ದೇಸಾಯಿ ಅವರ ಅಧ್ಯಕ್ಷತೆಯ ಸಮಿತಿಯು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಯವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಯನ್ನು ಮಹಾವೀರ ಜಯಂತಿಯ ಸಂದರ್ಭದಲ್ಲಿ ಪ್ರದಾನ ಮಾಡಲಾಗು ವುದು. ಪ್ರಶಸ್ತಿಯು 10 ಲಕ್ಷ ನಗದು ಬಹುಮಾನ, ಸ್ಮರಣಿಕೆ ಹಾಗೂ ಫಲಕವನ್ನು ಒಳಗೊಂಡಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ಕಳೆದ 44 ವರ್ಷಗಳಿಂದ ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷರಾಗಿ ಜನಹಿತ ಮತ್ತು ಆಧ್ಯಾತ್ಮಿಕ ಕೈಂಕರ್ಯದಲ್ಲಿ ತೊಡಗಿರುವ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಶ್ರವಣಬೆಳಗೊಳದಲ್ಲಿ ಪ್ರಾಕೃತ ಅಧ್ಯಯನ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದು, ಅನ್ನದಾಸೋಹ ಮತ್ತು ಜ್ಞಾನ ದಾಸೋಹ ಎರಡನ್ನೂ ನಡೆಸುವ ಮೂಲಕ ಸಾಮಾಜಿಕ ಉನ್ನತಿಗೆ ಶ್ರಮಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಧಾರ್ಮಿಕ ಸಭೆಗಳ ಜತೆ ಸಾಹಿತ್ಯಿಕ ಸಭೆಗಳನ್ನೂ ಆಯೋಜಿಸುತ್ತಿದ್ದಾರೆ. ಮಠವನ್ನು ಸಮಾಜಮುಖೀಯಾಗಿ ನಡೆಸಲು ಶ್ರಮಿಸುತ್ತಿದ್ದಾರೆ.
ಜಾನಪದ ಶ್ರೀ ಪ್ರಶಸ್ತಿ 2ಕ್ಕೆ ಹೆಚ್ಚಳ: ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾಗುವ ಜಾನಪದ ಶ್ರೀ ಪ್ರಶಸ್ತಿಯನ್ನು ಪ್ರತೀ ವರ್ಷ ಒಬ್ಬರಿಗೆ ಮಾತ್ರ ನೀಡಲಾಗುತ್ತಿತ್ತು. ಜಾನಪದ ಕ್ಷೇತ್ರದ ವೈಶಾಲ್ಯತೆ ಗಮನದಲ್ಲಿರಿಸಿಕೊಂಡು ಈ ಪ್ರಶಸ್ತಿ ಸಂಖ್ಯೆಯನ್ನು ಪ್ರಸಕ್ತ ವರ್ಷದಿಂದ ಎರಡಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.
ವಿವಿಧ ಪ್ರಶಸ್ತಿ ಪ್ರದಾನ ಡಿ.11ಕ್ಕೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡಿ.11ಕ್ಕೆ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಅಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಮದು ಅವರು ತಿಳಿಸಿದ್ದಾರೆ.