Advertisement
ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ದೂರದೂರುಗಳಿಂದ ಬರುವ ವಾಹನಗಳು ರಸ್ತೆಯಲ್ಲೇ ರಾತ್ರಿ ಕಳೆಯುವಂತಾಗಿದೆ. ತುರ್ತು ಸಂಚಾರಕ್ಕಾಗಿ ಮಿನಿ ಬಸ್ ಓಡಾಟ ನಡೆಸುವ ಅವಕಾಶವಿದ್ದರೂ ಚಿಕ್ಕಮಗಳೂರು ಮತ್ತು ದ.ಕ. ಜಿಲ್ಲಾಧಿಕಾರಿಗಳು ಮೌನ ವಹಿಸಿರುವ ವಿರುದ್ಧ ಸಾರ್ವಜನಿಕರಿಂದ ಅಸಮಾಧಾನದ ಮಾತು ಕೇಳಿಬರುತ್ತಿದೆ.ಧರ್ಮಸ್ಥಳ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಮಿನಿ ಬಸ್ ಓಡಾಟ ಆರಂಭಿಸುವ ನಿರೀಕ್ಷೆ ಇತ್ತಾದರೂ ಅದು ಈಡೇರಿಲ್ಲ.
ಮಂಗಳೂರು ಹೊರತುಪಡಿಸಿ ಧರ್ಮಸ್ಥಳ, ಪುತ್ತೂರು, ಬಿ.ಸಿ. ರೋಡ್, ಚಿಕ್ಕಮಗಳೂರು ಸೇರಿದಂತೆ ಯಾವುದೇ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಮಿನಿ ಬಸ್‌ಗಳಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ಅಧಿಕಾರಿಗಳು ಶಿವಮೊಗ್ಗ ಡಿಪೋ ಸಹಾಯದಿಂದ ಮಿನಿ ಬಸ್ ತರಿಸಿ ನ.19ರಂದು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದರು. ಪ್ರಾಯೋಗಿಕ ಸಂಚಾರ
ರಾ.ಹೆ. ಅಧಿಕಾರಿಗಳ ಉಪಸ್ಥಿತಿಯಲ್ಲಿ ಈಚೆಗೆ 35 ಸೀಟರ್‌ನ ಬಸ್ ಮೂಡಿಗೆರೆಯಿಂದ ಅಣ್ಣಪ್ಪ ಬೆಟ್ಟದವರೆಗೆ ಸುಮಾರು 13 ಕಿ.ಮೀ. ದೂರ ಪ್ರಾಯೋಗಿಕ ಸಂಚಾರ ನಡೆಸಿದೆ. ಸಂಚಾರ ಭದ್ರತೆ ಅನುಗುಣವಾಗಿ ರಾ.ಹೆ. ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಸಮಕ್ಷಮ ಒಪ್ಪಿಗೆ ಸಿಕ್ಕಲ್ಲಿ ಮೂಡಿಗೆರೆಯಿಂದ ಉಜಿರೆಯ ವರೆಗೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಆವಶ್ಯಕತೆಗೆ ಅನುಗುಣವಾಗಿ ಮಿನಿ ಬಸ್ ಓಡಾಟ ನಡೆಸಲು ಸಿದ್ಧರಿರುವುದಾಗಿ ಚಿಕ್ಕಮಗಳೂರು ಡಿಪೋ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಆದೇಶ ಇನ್ನೂ ಸಿಕ್ಕಿಲ್ಲ.
Related Articles
ದಕ್ಷಿಣ ಕನ್ನಡ, ಉಡುಪಿಯ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಮಾತ್ರವಲ್ಲದೆ ಆಸ್ಪತ್ರೆಗೆ ದಾಖಲಾಗು ವಂತಹ ತುರ್ತು ಸಂದರ್ಭ ಗಳಲ್ಲಿ ಕೂಡ ರಾತ್ರಿ 6ರ ಬಳಿಕ ತೆರಳಲು ಅವಕಾಶ ಇಲ್ಲದಿರುವುದರಿಂದ ಚಾರ್ಮಾಡಿ ಆರಂಭ ಮತ್ತು ಕೊಟ್ಟಿಗೆರೆ ಚೆಕ್‌ಪೋಸ್ಟ್ ಗಳಲ್ಲಿ ವಾಹನಗಳು ಸರತಿಯ ಸಾಲಿನಲ್ಲಿ ಉಳಿಯುತ್ತಿವೆ. ಶನಿವಾರ ಬೆಳಗ್ಗೆ ಕೊಟ್ಟಿಗೆಹಾರದಲ್ಲಿ ಸುಮಾರು 200ಕ್ಕೂ ಅಧಿಕ ವಾಹನಗಳು ಕಂಡುಬಂದಿದ್ದವು. ಇತ್ತ ಸಂಜೆ 6ರ ಬಳಿಕ ಲಘುವಾಹನ ಓಡಾಟಕ್ಕೂ ಜಿಲ್ಲಾಡಳಿತ ಅವಕಾಶ ನೀಡದಿರುವುದರಿಂದ ಶೌಚಾಲಯ ಸೇರಿದಂತೆ ವಸತಿ ಸೌಲಭ್ಯವಿಲ್ಲದೆ ಕಾಡಿನ ಮಧ್ಯೆ ದಿನ ಕಳೆಯುವಂತಾಗಿದೆ. ಡಿಸಿಗಳು ತುರ್ತು ಕ್ರಮಕ್ಕೆ ಮುಂದಾದಲ್ಲಿ ಜನರ ವನವಾಸ ತಪ್ಪಲಿದೆ.
Advertisement