Advertisement
ಸಾವಿರಾರು ಹೆಕ್ಟೇರ್ ಭೂ ಪ್ರದೇಶದಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಶ್ರೇಣಿಯ ನೂರಕ್ಕೂ ಅಧಿಕ ಸ್ಥಳಗಳಲ್ಲಿ ಕುಸಿತವಾಗಿರುವುದು ಮಾತ್ರವಲ್ಲ; ಈಗಲೂ ಅಲ್ಲಲ್ಲಿ ಸ್ಫೋಟ, ಕಂಪನದ ಅನುಭವಗಳಾಗುತ್ತಿವೆ. ಇದರ ಪ್ರತಿಧ್ವನಿ ಅಲ್ಲಿನ ನಿವಾಸಿಗಳ ಭಯದ ಏದುಸಿರಿನಲ್ಲಿ ಕೇಳಿಸುತ್ತಿದೆ.
ಚಾರ್ಮಾಡಿ -ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಆಗಿರುವ ಭೂಕುಸಿತದ ಪ್ರಮಾಣ ಈ ರಸ್ತೆಯ ಇತಿಹಾಸದಲ್ಲಿಯೇ ಅತಿ ದೊಡ್ಡದು. ಘಾಟಿ ಆರಂಭವಾಗುವಲ್ಲಿಂದ ಕೊಟ್ಟಿಗೆಹಾರದ ವರೆಗೆ ಸುಮಾರು 60ಕ್ಕೂ ಅಧಿಕ ಕಡೆ ರಸ್ತೆಯೇ ಕುಸಿದಿದೆ ಅಥವಾ ಅದರ ಮೇಲೆ ಗುಡ್ಡ ಬಿದ್ದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಾಗಿರುವುದು ಪ್ರವಾಹವಲ್ಲ; ಜಲಸ್ಫೋಟ ಅನ್ನುತ್ತಾರೆ ಪರಿಸರ ತಜ್ಞ ದಿನೇಶ್ ಹೊಳ್ಳ. ಮುನ್ನುಗ್ಗಿದ ನೀರಿನ ರಭಸಕ್ಕೆ ರಸ್ತೆಯ ಅಲ್ಲಲ್ಲಿ ಹೊಸ ಝರಿಗಳು ಸೃಷ್ಟಿಯಾಗಿವೆ. ನೀರಿನ ಒತ್ತಡವನ್ನು ತಾಳಲಾರದೆ ಘಟ್ಟದ ಮೇಲ್ಮೈ ಒಡೆದು ರಸ್ತೆಯ ಅಲ್ಲಲ್ಲಿ ಹೊಸ ದಾರಿ ಹುಡುಕಿ ಹರಿಯುತ್ತಿದೆ.
Related Articles
ಬಣಕಲ್ ಮತ್ತು ಚಾರ್ಮಾಡಿಯ ಮಧ್ಯ ಭಾಗದ 11ನೇ ತಿರುವಿನ ಝರಿ ಪ್ರದೇಶದಲ್ಲಿ ಬೃಹತ್ ಬಂಡೆ ಮೇಲಿನಿಂದ ಉರುಳಿ ಬಂದು ಅಪ್ಪಳಿಸಿದ್ದರಿಂದ ರಸ್ತೆ ಸುಮಾರು 20 ಅಡಿ ಆಳಕ್ಕೆ ಜಗ್ಗಿ ಛಿದ್ರವಾಗಿದೆ. ಬಂಡೆ ಅಪ್ಪಳಿಸಿದ ರಭಸಕ್ಕೆ ರಸ್ತೆಯ ಅಂಚಿನ ಮೋರಿಗಳ ಕಲ್ಲುಗಳೆಲ್ಲ ಕಳೆದು ಹೋಗಿವೆ. ಬಣಕಲ್ ವ್ಯಾಪ್ತಿಯ ಅಣ್ಣಪ್ಪ ಬೆಟ್ಟ ಮತ್ತು ಇತರೆಡೆಯೂ ಗಂಭೀರ ಹಾನಿಯಾಗಿದೆ.
Advertisement
-ಚೈತ್ರೇಶ್ ಇಳಂತಿಲ