Advertisement

ನಿರ್ವಹಣೆಗಿಲ್ಲ ಕಾಳಜಿ: ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತ ಭೀತಿ

05:20 AM May 28, 2018 | Team Udayavani |

ಬೆಳ್ತಂಗಡಿ: ಬಂಟ್ವಾಳ- ವಿಲ್ಲುಪುರಂ ರಾ.ಹೆ.ಯ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಶಿರಾಡಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನಿರ್ಬಂಧ ಹೇರಲಾಗಿದ್ದು, ಚಾರ್ಮಾಡಿ ಘಾಟಿ ರಸ್ತೆ ಬೆಂಗಳೂರು ಮತ್ತಿತರ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಆದರೆ ಹಲವು ಕಡೆಗಳಲ್ಲಿ ಹೊಂಡಗಳಿದ್ದು, ರಸ್ತೆಯಲ್ಲಿ ಬಿರುಕು ಕಂಡುಬಂದಿದೆ. ಮಳೆ ಹಾಗೂ ವಾಹನ ದಟ್ಟಣೆಯಿಂದ ಭೂ ಕುಸಿತ ಸಾಧ್ಯತೆಗಳಿದ್ದು, ಕ್ರಮ ಕೈಗೊಳ್ಳಬೇಕಿದೆ.

Advertisement

ರಸ್ತೆ ಬ್ಲಾಕ್‌ ಸಮಸ್ಯೆ
ಸುಮಾರು 20 ತಿರುವುಗಳು, 12 ಹಿಮ್ಮುರಿ ತಿರುವುಗಳನ್ನು ಹೊಂದಿದೆ. ಹೆಚ್ಚಾಗಿ ಘನ ವಾಹನಗಳು, ಬಸ್‌ ಗಳು ತಿರುವು ತೆಗೆದುಕೊಳ್ಳುವ ವೇಳೆ ಸಮಸ್ಯೆ ಉಂಟಾಗುತ್ತಿದೆ. ವಾರದ ಹಿಂದೆ ಮಳೆ ಬಂದ ದಿನದಂದು ಘನ ವಾಹನ ಸಿಲುಕಿಕೊಂಡ ಪರಿಣಾಮ 3 ಗಂಟೆಗಳಿಗೂ ಹೆಚ್ಚುಕಾಲ ಸಂಜೆ ವೇಳೆ ಸಂಚಾರಕ್ಕೆ ತೊಡಕು ಉಂಟಾಗಿತ್ತು. ಇದೇ ದಿನ ಬೆಳಗ್ಗೆ ಖಾಸಗಿ ಬಸ್‌ ತಿರುವಿನಲ್ಲಿ ಸಿಲುಕಿ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಕೆಲವು ಪ್ರದೇಶಗಳಲ್ಲಿ ಎರಡು ವಾಹನಗಳು ಸರಿಯಾಗಿ ಚಲಿಸಲೂ ಸಾಧ್ಯವಿಲ್ಲ. ಮಳೆ ಬಂದಲ್ಲಿ ಬದಿಗೆ ಸರಿಯಲೂ ಸಾಧ್ಯವಾಗದೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆಯಿದೆ.


ರಸ್ತೆ ಬದಿ ಬೃಹತ್‌ ಹೊಂಡಗಳು

ರಸ್ತೆ ಡಾಮರು ಕೆಲವೆಡೆ ಕಿತ್ತು ಹೋಗಿದ್ದು, ಮಳೆ ನೀರು ರಸ್ತೆ ಬದಿ ಹರಿಯುತ್ತಿದೆ. ಇದರಿಂದ ಕಾರಿನಂತಹ ವಾಹನಗಳೂ ರಸ್ತೆಯಿಂದ ಕೆಳಗಿಳಿಸಲಾರದ ಪರಿಸ್ಥಿತಿ ಉಂಟಾಗಿದೆ. ಮುಖ್ಯವಾಗಿ ರಸ್ತೆ ಅಂಚುಗಳು ಸವೆದು ಬದಿಗಳು ಆಳವಾಗಿವೆ.

ರಸ್ತೆಯಲ್ಲಿ ಚರಂಡಿ ಮಣ್ಣು, ಕಸ
ರಾ.ಹೆ.ಯಾಗಿದ್ದರೂ ವ್ಯವಸ್ಥಿತ ಚರಂಡಿ ವ್ಯವಸ್ಥೆ ಎಲ್ಲೂ ಇಲ್ಲ. ಇರುವ ಚರಂಡಿಗಳನ್ನೂ ಸ್ವಚ್ಛತೆ ಹಾಗೂ ನಿರ್ವಹಣೆ ಮಾಡದ ಕಾರಣ ಕಸ, ಪ್ಲಾಸ್ಟಿಕ್‌ ಸಂಗ್ರವಾಗಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ವೇಳೆ ಚರಂಡಿಯ ಮಣ್ಣೂ ರಸ್ತೆಗೆ ಹರಡಿಕೊಂಡಿದೆ. ಇದು ದ್ವಿಚಕ್ರ, ಬಸ್‌ ಮೊದಲಾದ ವಾಹನನಗಳ ಸವಾರರಿಗೆ ಮಾರಕವಾದಂತೆ ತೋರುತ್ತಿದೆ.

ಕುಸಿಯುವ ಭೀತಿ
ರಸ್ತೆ ಬದಿ ಬೃಹತ್‌ ಹೊಂಡಗಳು ಇದ್ದು, ನಿರುಪಯುಕ್ತ ಗಿಡಗಳು ಬೆಳೆದಿರುವುದರಿಂದ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ರಸ್ತೆಯಲ್ಲೂ ಬಿರುಕು ಮೂಡಿರುವುದರಿಂದ ತುರ್ತು ಕಾಮಗಾರಿ ಕೈಗೊಳ್ಳುವುದು ಅಗತ್ಯವಾಗಿದೆ. ಕೆಲವೆಡೆ ನೀರು ಹರಿದು, ತಡೆಗೆ ಹಾಕಿದ್ದ ಕಲ್ಲುಗಳೂ ಬಿದ್ದಿವೆ. ಆದ್ದರಿಂದ ವಾಹನಗಳ ಓಡಾಟ ಹೆಚ್ಚಿದಲ್ಲಿ ರಸ್ತೆ ಕುಸಿಯುವ ಸಾಧ್ಯತೆಯೂ ಇದೆ.

Advertisement

ಮಳೆಗಾಲದಲ್ಲಿ ಮುಂಜಾಗರೂಕತೆ ಅಗತ್ಯ
ಮಳೆಗಾಲದಲ್ಲಿ ವಾಹನಗಳ ಚಾಲನೆಯಲ್ಲಿ ಸ್ವಲ್ಪ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಜತೆಗೆ ಇತರೆ ಯಾವುದಾದರೂ ದೊಡ್ಡ ವಾಹನ ಕೆಟ್ಟು ನಿಂತಲ್ಲಿ, ಮರ ಬಿದ್ದಲ್ಲಿ ಸಂಚಾರವೇ ದುಸ್ತರ ಆಗುವ ಸಂದರ್ಭಗಳೂ ಎದುರಾಗುವ ಸಾಧ್ಯತೆಗಳಿವೆ. ಅಪಘಾತಗಳು ಸಂಭವಿಸಿದರೆ ವಾಹನಗಳನ್ನು ಎತ್ತಲು ಕ್ರೆನ್‌ ನ ವ್ಯವಸ್ಥೆ ಇಲ್ಲ. ಆ್ಯಂಬುಲೆನ್ಸ್‌ ಸೌಲಭ್ಯವಿಲ್ಲ. ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಕನಿಷ್ಠ ಶಿರಾಡಿ ಘಾಟಿ ಸಂಚಾರ ಮುಕ್ತವಾಗುವವರೆಗೆ ನಿರ್ವಹಣ ತಂಡ ರಚಿಸಿದಲ್ಲಿ ಸಹಕಾರಿಯಾಗಲಿದೆ.

ಸೂಕ್ತ ಕ್ರಮ
ಶಿರಾಡಿಯಲ್ಲಿ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ವಾಹದಟ್ಟಣೆ ಹೆಚ್ಚಾಗಿರುವ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಚಾರ್ಮಾಡಿ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ವಾರದೊಳಗೆ ಸ್ಥಳ ಪರೀಲನೆ ಮಾಡಿ ಸಮರ್ಪಕ ಸಂಚಾರ ವ್ಯವಸ್ಥೆ ಹಾಗೂ ಹೆದ್ದಾರಿ ನಿರ್ವಹಣೆ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. 
– ಹರೀಶ್‌ ಪೂಂಜ, ಶಾಸಕ ಬೆಳ್ತಂಗಡಿ

— ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next