Advertisement
2019ರಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಬಂದಿದ್ದಾಗ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟಿ ಪ್ರದೇಶವು ಜರ್ಝರಿತ ಗೊಂಡಿತ್ತು. ಚಿಕ್ಕಮಗಳೂರು-ಮಂಗಳೂರು ಸಂಪರ್ಕವೇ ಕಡಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಚಿಕ್ಕಮಗಳೂರು ಭಾಗದ 6 ಕಡೆ ಸಂಪೂರ್ಣ ರಸ್ತೆ ಹಾಳಾಗಿತ್ತು. ಇದಾದ ಬಳಿಕ ಕಳೆದ ಮೂರು ವರ್ಷಗಳಲ್ಲಿ ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಇಲಾಖೆ ಸಮಕ್ಷಮದಲ್ಲಿ ಅನೇಕ ಸುತ್ತಿನ ಸಭೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಇಂದಿಗೂ ಏಕಮುಖ ಸಂಚಾರವನ್ನೇ ಅವಲಂಬಿಸಿದೆ. ಜತೆಗೆ ಭಾರೀ ವಾಹನ ಅಂದರೆ ರಾಜಹಂಸ ಸಹಿತ 6 ಚಕ್ರದಿಂದ ಮೇಲ್ಪಟ್ಟ ವಾಹನಗಳಿಗೆ ಇಂದಿಗೂ ನಿಷೇಧವಿದೆ.
ರಾ. ಹೆದ್ದಾರಿ ಚಾರ್ಮಾಡಿಯ ಮಂಗಳೂರು ವಿಭಾಗದಲ್ಲಿ ರಸ್ತೆಗಳು ಸದ್ಯ ಉತ್ತಮ ಸ್ಥಿತಿಯಲ್ಲಿವೆ. ಆದರೆ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಗಂಭೀರವಾಗಿ ಭೂ ಕುಸಿತಗೊಂಡ 3 ಕಡೆ ಏಕಮುಖ ಸಂಚಾರ ವಿದ್ದು ಉಳಿದ ಮೂರು ಕಡೆ ಅಪಾಯ ವಿಲ್ಲದಿದ್ದರೂ ಶಾಶ್ವತ ತಡೆಗೋಡೆ ಅನಿವಾರ್ಯವಿದೆ. ಇದಕ್ಕಾಗಿ ಈಗಾಗಲೇ 17.35 ಕೋ.ರೂ. ಗಳ ಟೆಂಡರ್ ಕರೆಯಲಾಗಿದೆ. ಈ ಪೈಕಿ 3 ಕಿ.ಮೀ. ರಸ್ತೆ ಅಂಚಿನ ತಡೆಗೋಡೆ ಕೆಲಸ ಪ್ರಗತಿಯಲ್ಲಿದೆ. ಮಳೆಗಾಲದಲ್ಲೂ ಕಾಮಗಾರಿ ಮುಂದುವರಿದಿದೆ. ಉಳಿದ 6 ಕಡೆ ಶಾಶ್ವತ ತಡೆಗೋಡೆ ಮಳೆಗಾಲದ ಬಳಿಕ ಆರಂಭಿಸಲಾ ಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಶಿರಾಡಿ ಘಾಟಿ ಪ್ರದೇಶದಲ್ಲಿ ಈಗಾಗಲೇ ಭೂ ಕುಸಿತಗೊಂಡಿದ್ದು ಕಾರು ಸಹಿತ ಮಿನಿ ಟೆಂಪೋಗಳಿಗೆ ಅವಕಾಶ ನೀಡಲಾಗಿದೆ. ಆದರೆ ರಾಜಹಂಸ ಸಹಿತ ಸಾರಿಗೆ ಬಸ್‌ಗಳು ಹಾಸನ ಬೇಲೂರಿನಿಂದ ಚಾರ್ಮಾಡಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ. ಆದರೆ ಇತ್ತ ಚಾರ್ಮಾಡಿಯಲ್ಲಿ ಗುರುವಾರದಿಂದ ಭಾರೀ ಮಳೆಯಾದ ಪರಿಣಾಮ ಸಣ್ಣ ಮಟ್ಟಿಗೆ ಕುಸಿತ ಉಂಟಾಗಿದೆ. ತತ್‌ಕ್ಷಣ ಮಣ್ಣು ತೆರವು ಕಾರ್ಯವಾದರೂ ರಾತ್ರಿ ಸಂಚಾರ ಅಪಾಯವೇ ಸರಿ. ಈ ಮಧ್ಯೆ ತುರ್ತು ಸ್ಪಂದನೆಗೆ ನಾಲ್ಕು ಜೆಸಿಬಿಗಳನ್ನು ನಿಯೋಜಿಸಲಾಗಿದೆ.
Advertisement
ಮುಂಜಾಗ್ರತೆ ವಹಿಸಲು ಸೂಚನೆಚಾರ್ಮಾಡಿ ಘಾಟಿ ಸುತ್ತಮುತ್ತ ಭಾರೀ ಮಳೆಯಾಗಿರುವ ಪರಿಣಾಮ ಕೆಲವೆಡೆ ಲಘು ಭೂಕುಸಿತವಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕೆಲವೆಡೆ ರಸ್ತೆ ಜಾರುವಂತಿದೆ. ಶಿರಾಡಿ ಘಾಟಿ ಮೇಲಿನ ನಿರ್ಬಂಧದಿಂದಾಗಿ ವಾಹನ ದಟ್ಟಣೆ ಕೂಡ ಹೆಚ್ಚಾಗಿದೆ. ಪರಿಣಾಮ ಪ್ರಯಾಣಿಕರು ಆದಷ್ಟು ಮುಂಜಾಗ್ರತೆ ವಹಿಸುವಂತೆ ಇಲಾಖಾ ಅಧಿಕಾರಿಗಳು ಸೂಚಿಸಿದ್ದಾರೆ. ಚಾರ್ಮಾಡಿ ರಸ್ತೆಯ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಈ ಹಿಂದೆ ಭೂ ಕುಸಿತಗೊಂಡ 6 ಕಡೆ ಕೆಳಭಾಗದಿಂದ ಪಿಲ್ಲರ್ ಅಳವಡಿಸಿ ತಡೆಗೋಡೆ ರಚಿಸಲು 17.35 ಕೋ.ರೂ. ವೆಚ್ಚದಲ್ಲಿ ಮಳೆಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಉಳಿದಂತೆ 3 ಕಿ.ಮೀ. ಗಾರ್ಡ್ ವಾಲ್ ಬಹುತೇಕ ನಿರ್ಮಾಣವಾಗಿದ್ದು, ಸದ್ಯವೇ ಪೂರ್ಣಗೊಳ್ಳಲಿದೆ.
– ಮುನಿರಾಜ್, ಎಇಇ, ರಾಷ್ಟ್ರೀಯ ಹೆದ್ದಾರಿ-73 ಚಿಕ್ಕಮಗಳೂರು ವಿಭಾಗ – ಚೈತ್ರೇಶ್ ಇಳಂತಿಲ