“ಕೆಜಿಎಫ್-2′ ಸಿನಿಮಾದ ಬಳಿಕ ತೆರೆಗೆ ಬರುತ್ತಿರುವ ಕನ್ನಡದ ಮತ್ತೂಂದು ಬಹುನಿರೀಕ್ಷಿತ “777 ಚಾರ್ಲಿ’ ಸಿನಿಮಾದ ಕಡೆಗೆ ಸಿನಿಮಂದಿಯ ಚಿತ್ತ ನೆಟ್ಟಿದೆ. ರಕ್ಷಿತ್ ಶೆಟ್ಟಿ ನಿರ್ಮಾಣ ಹಾಗೂ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ “777 ಚಾರ್ಲಿ’ ಸಿನಿಮಾ ಇದೇ ಜೂನ್ 10ಕ್ಕೆ ದೇಶಾದ್ಯಂತ ತೆರೆಗೆ ಬರಲಿದ್ದು, ಸದ್ಯ “777 ಚಾರ್ಲಿ’ ಯ ರಿಲೀಸ್ ಗೆ ಕೌಂಟ್‌ಡೌನ್ ಶುರುವಾಗಿದೆ.
ಇನ್ನು ಕನ್ನಡದ ಜೊತೆಗೆ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ “777 ಚಾರ್ಲಿ’ ತೆರೆಗೆ ಬರುತ್ತಿರುವುದರಿಂದ, ಎಲ್ಲಾ ಭಾಷೆಗಳಲ್ಲೂ ದೊಡ್ಡಮಟ್ಟದಲ್ಲಿಯೇ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಸಾಮಾನ್ಯವಾಗಿ ಯಾವುದೇ ಭಾಷೆಯ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳು ಬಿಡುಗಡೆಗೂ ಮೊದಲು ಎರಡು ಅಥವಾ ಮೂರು ಕಡೆಗಳಲ್ಲಿ ಪ್ರೀಮಿಯರ್ ಶೋ ನಡೆಸುವುದನ್ನು ನೀವು ಕೇಳಿರುತ್ತೀರಿ. ಆದರೆ, ಇದೇ ಮೊದಲ ಬಾರಿಗೆ “777 ಚಾರ್ಲಿ’ ಸಿನಿಮಾ ಭಾರತದ 21 ಪ್ರಮುಖ ಮಹಾನಗರಗಳಲ್ಲಿ ತನ್ನ ಪ್ರೀಮಿಯರ್ ಶೋ ಆಯೋಜಿಸಲು ಮುಂದಾಗಿದೆ. ಅದಕ್ಕೆ ಕಾರಣ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು.
ಇದನ್ನೂ ಓದಿ:ಇಂದು ಉಪ್ಪಿ ನಿರ್ದೇಶನದ ಚಿತ್ರಕ್ಕೆ ಮುಹೂರ್ತ: ಕುತೂಹಲ ಹೆಚ್ಚಿಸಿದ ಪೋಸ್ಟರ್
ಅಂದಹಾಗೆ, ಹೈದರಾಬಾದ್, ಚೆನ್ನೈ, ದೆಹಲಿ, ಪುಣೆ, ಅಹಮದಾಬಾದ್, ಕೊಚ್ಚಿನ್, ಲಕ್ನೋ, ತ್ರಿವೇಂಡ್ರಂ, ಬರೋಡಾ, ನಾಗಪುರ, ಸೋಲ್ಹಾಪುರ, ವಾರಣಾಸಿ, ಅಮೃತ್‌ಸರ, ಜೈಪುರ, ಸೂರತ್, ಕೊಲ್ಕತ್ತಾ, ಮುಂಬೈ, ವಿಜಾಗ್, ಕೊಯಂಬತೂರ್, ಮಧುರೈ, ಪಂಜಿಮ್ ಕಡೆಗಳಲ್ಲಿ “777 ಚಾರ್ಲಿ’ ಸಿನಿಮಾದ ಪ್ರೀಮಿಯರ್ ಶೋ ನಡೆಯಲಿದೆ. ಸುಮಾರು ಒಂದು ವಾರಗಳ ಕಾಲ ನಡೆಯಲಿರುವ “777 ಚಾರ್ಲಿ’ ಸಿನಿಮಾದ ಪ್ರೀಮಿಯರ್ ಶೋ ಜೂನ್ 2 ರಂದು ದೆಹಲಿಯಲ್ಲಿ ಆರಂಭವಾಗಲಿದ್ದು, ಜೂನ್ 9ಕ್ಕೆ ಸೂರತ್ ಹಾಗೂ ನಾಗಪುರದಲ್ಲಿ ಕೊನೆಯಾಗಲಿದೆ.
ಮತ್ತೂಂದೆಡೆ “777 ಚಾರ್ಲಿ’ ಬಿಡುಗಡೆಗೂ ಮುನ್ನ ಚಿತ್ರತಂಡ ತನ್ನ ಪ್ರಮೋಷನ್‌ನಲ್ಲಿ ಬಿಝಿಯಾಗಿದ್ದು ಉತ್ತರದಿಂದ ದಕ್ಷಿಣದವರೆಗೂ ಬಹುತೇಕ ಎಲ್ಲ ಮಹಾನಗರಗಳನ್ನೂ ತಲುಪುವಂತೆ ತನ್ನ ಪ್ರಚಾರ ಕಾರ್ಯ ಕೈಗೊಂಡಿದೆ. ಇತ್ತೀಚೆಗೆ ನಡೆದ ಹೈದರಬಾದ್ ಪ್ರಮೋಷನ್‌ನಲ್ಲಿ “ಬಾಹುಬಲಿ’ಯ ಬಲ್ಲಾಳದೇವ ರಾಣಾ ದಗ್ಗುಬಾಟಿ ಚಿತ್ರತಂಡಕ್ಕೆ ಸಾಥ್ ನೀಡಿದ್ದರು.
ಮುಂಗಡ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್: ಇನ್ನು “777 ಚಾರ್ಲಿ’ ಸಿನಿಮಾದ ಬಿಡುಗಡೆಗೆ ಹತ್ತು ದಿನಗಳು ಬಾಕಿಯಿರುವಾಗಲೇ ಚಿತ್ರತಂಡ ಸಿನಿಮಾದ ಮುಂಗಡ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿದೆ. ಜೂ. 1ರಿಂದಲೇ ಆನ್‌ಲೈನ್‌ನಲ್ಲಿ “777 ಚಾರ್ಲಿ’ಯ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ ದಿನವೇ ಸಿನಿಪ್ರಿಯರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ಪರಂವಾ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಜಿ. ಎಸ್ ಗುಪ್ತಾ ಜಂಟಿಯಾಗಿ ನಿರ್ಮಿಸಿರುವ “777 ಚಾರ್ಲಿ’ ಸಿನಿಮಾಕ್ಕೆ ಕಿರಣ್‌ರಾಜ್ ನಿರ್ದೇಶನವಿದೆ.