ಬೆಂಗಳೂರು : ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ’ ಚಿತ್ರದ ಟಾರ್ಚರ್ ಸಾಂಗ್ ಇಂದು (ಸೆ.9) ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.
ಚಿತ್ರದ ನಾಯಕ ರಕ್ಷಿತ್ ಶೆಟ್ಟಿಗೆ ನಾಯಿ ಚಾರ್ಲಿ ಮಾಡುವ ಕಿತಾಪತಿಗಳು, ತುಂಟ ತರಲೆಗಳಿಂದ ಸಿಕ್ಕಾಪಟ್ಟೆ ಟಾರ್ಚರ್ ಆಗುತ್ತದೆ. ಅದನ್ನು ಈ ಹಾಡಿನಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ. ಅಭಿನಯ ಕಿಚ್ಚ ಸುದೀಪ್ ಅವರಿಗೂ ಈ ಹಾಡು ತುಂಬಾ ಇಷ್ಟವಾಗಿದ್ದು, ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿ ವ್ಯಕ್ತಪಡಿಸಿದ್ದಾರೆ. ಈ ಹಾಡಿನಲ್ಲಿ ಯಾರೂ (ರಕ್ಷಿತ್ ಆ್ಯಂಡ್ ಚಾರ್ಲಿ) ಚೆನ್ನಾಗಿ ಅಭಿನಯಿಸಿದ್ದಾರೆ ಎಂಬುದನ್ನು ನಿರ್ಣಯಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಸುದೀಪ್.
ಇನ್ನೊಂದು ವಿಷಯವೆಂದರೆ “777 ಚಾರ್ಲಿ’ ಚಿತ್ರದ ಹಾಡಿಗೆ ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ತಮ್ಮ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿ ರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್ ಖಾನ್‌ಕ್ರಮವಾಗಿ ಆಯಾಯ ಭಾಷೆಗಳ ಅವತರಣಿಕೆಗಳನ್ನು ಹಾಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ “777 ಚಾರ್ಲಿ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರತಂಡ ಈಗ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದು ಡಿಸೆಂಬರ್ 31. 2021ರ ಕೊನೆಗೆ ರಕ್ಷಿತ್ ಶೆಟ್ಟಿ ಎಂಟ್ರಿಕೊಡಲಿದ್ದಾರೆ. ಈ ಮೂಲಕ ರಕ್ಷಿತ್ ಕೂಡಾ ಡಿಸೆಂಬರ್ ಮೇಲೆ ನಂಬಿಕೆ ಇಟ್ಟಿದ್ದಾರೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೂರನೇ ಸಿನಿಮಾ. ರಕ್ಷಿತ್ ನಟನೆಯ “ಕಿರಿಕ್ ಪಾರ್ಟಿ’ ಚಿತ್ರ 2016 ಡಿಸೆಂಬರ್ 30ರಂದು ತೆರೆಕಂಡರೆ, “ಅವನೇ ಶ್ರೀಮನ್ನಾರಾಯಣ’ ಚಿತ್ರ 2019 ಡಿಸೆಂಬರ್ 27ರಂದು ತೆರೆಗೆ ಬಂದಿತ್ತು. “777 ಚಾರ್ಲಿ’ ಕೂಡಾ ಡಿಸೆಂಬರ್‌ನಲ್ಲೇ ಬಿಡುಗಡೆಯಾಗುತ್ತಿದೆ.
ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಒಂದು ಪೂರ್ಣ ಪ್ರಮಾಣದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದೆ. ಸಂಗೀತಾ ಶೃಂಗೇರಿ ಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆ ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.