Advertisement

ಚಾರ್‌ಕೋಪ್‌ ಕನ್ನಡಿಗರ ಬಳಗ: ಕಾರಂತೋತ್ಸವ, ದತ್ತಿ ಉಪನ್ಯಾಸ ಕಾರ್ಯಕ್ರಮ

02:27 PM Feb 20, 2019 | |

ಮುಂಬಯಿ: ಮನುಷ್ಯ ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಕಾರಂತರ ಅದ್ವಿತಿಯ ಸಾಧನೆ  ನಿದರ್ಶನವಾಗಿದ್ದಾರೆ. ಗಂಡು ಹೆಣ್ಣಿನ ಮನಸ್ಸುಗಳ ಸಂಬಂಧದ ರಹಸ್ಯವನ್ನು ಓರ್ವ ಚಿಂತಕನ ನಿಲುವಿನಲ್ಲಿ ಶೋಧಿಸಲು ಯತ್ನಿಸಿದ್ದಾರೆ. ಕಾರಂತರು ವೈವಾಹಿಕ  ಜೀವನದಲ್ಲಿ ಅಗತ್ಯವೆಂದು ಪ್ರತಿಪಾದಿಸುವ ಸಾಮರಸ್ಯವನ್ನು  ಜೀವಂತವಾಗಿಸುವಲ್ಲಿ ಮುಂದಾ ಗಿದ್ದರು ಎಂಬುದನ್ನು ಅವರ ಕಾದಂಬರಿಗಳಿಂದ ತಿಳಿಯಬಹುದು. ಈ ನಿಟ್ಟಿನಲ್ಲಿ ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿಯು ಇಂದಿಗೂ ಪ್ರಸ್ತುತವೆನಿಸುತ್ತದೆ ಎಂದು ಲೇಖಕಿ ಮತ್ತು ವಿಮರ್ಶಕಿ ಡಾ| ಮಮತಾ ರಾವ್‌ ತಿಳಿಸಿದರು.

Advertisement

ಫೆ. 17ರಂದು ಚಾರ್‌ಕೋಪ್‌ ಕನ್ನಡಿಗರ ಬಳಗ ಕಾಂದಿವಲಿ ಸಂಸ್ಥೆಯ ವತಿಯಿಂದ  ಕಾಂದಿವಲಿ ಪಶ್ಚಿಮದ ಪೊಯಿಸರ್‌ ಜಿಮಾVನದ ಸಭಾಗೃಹದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ| ಶಿವರಾಮ ಕಾರಂತ ಇವರ ಸಂಸ್ಮರಣೆ ಮತ್ತು ರಂಗತಜ್ಞ  ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಚಿತ್ರಕಲಾ  ಸ್ಪರ್ಧೆಗಳನ್ನೊಳಗೊಂಡು “ಕಾರಂತೋತ್ಸವ’ ಸಂಭ್ರಮದಲ್ಲಿ ಕಾರಂತರ ಕುರಿತು  ಉಪನ್ಯಾಸ ನೀಡಿದ ಅವರು, ಚಾರ್‌ಕೋಪ್‌ ಕನ್ನಡಿಗರ ಬಳಗದ ಸಾಹಿತ್ಯ ಸೇವೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಈ ಅರ್ಥಪೂರ್ಣ  ದತ್ತಿ ನಿಧಿಯ ಪ್ರಾಯೋಜಿಸಿದ ಸದಾನಂದ ಸುವರ್ಣರ ಸಾಹಿತ್ಯಕ ಸಾಧನೆ  ಅಭಿನಂದನೀಯವಾಗಿದೆ ಎಂದರು.

ಬಳಗದ ಅಧ್ಯಕ್ಷ  ಎಂ. ಕೃಷ್ಣ ಎನ್‌. ಶೆಟ್ಟಿ ಅವರು ಅಧ್ಯಕ್ಷತೆ  ವಹಿಸಿ ಮಾತನಾಡಿ, ಶಿವರಾಮ ಕಾರಂತರ ಬಗ್ಗೆ ನಾವು ಭವಿಷ್ಯತ್ತಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಸದಾನಂದ ಸುವರ್ಣ ಅವರು ನಮ್ಮ ಸಂಘದಲ್ಲಿ ದತ್ತಿನಿಧಿಯನ್ನು  ಸ್ಥಾಪಿಸಿ ಇಂತಹ ಮಹತ್ವದ ಕಾರ್ಯ ಹಮ್ಮಿಕೊಳ್ಳುವಂತೆ ಮಾಡಿದ್ದಾರೆ. ಇಂದಿನ ಕಾರಂತರ ನೆನಪಿನಲ್ಲಿ ಚಿತ್ರ ಬಿಡಿಸುವ ಕಾರ್ಯದಲ್ಲಿ ಹೆಚ್ಚಿನ ಮಕ್ಕಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಕಾರಣರಾಗಿದ್ದಾರೆ ಎಂದು ನುಡಿದು ಶುಭಹಾರೈಸಿದರು.

ಸಾಮಾಜಿಕ ಧುರೀಣ ಡಾ| ಹರೀಶ್‌ ಬಿ. ಶೆಟ್ಟಿ ದಹಿಸರ್‌ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ,ಯಕ್ಷಗಾನ, ಲೇಖನ, ಕಾದಂಬರಿ, ನಾಟಕ ಇತ್ಯಾದಿಗಳ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ ಕಾರಂತರು ಎಂದು ವಿವಾದಾತ್ಮಕ ವ್ಯಕ್ತಿಯಲ್ಲ. ಅವರೋರ್ವ ಮಾನವತಾವಾದಿ ಎಂದು ನುಡಿದು, ಚಾರ್‌ಕೋಪ್‌ ಕನ್ನಡಿಗರ ಬಳಗದ ಸಿದ್ಧಿ- ಸಾಧನೆಗಳನ್ನು ಅಭಿನಂದಿಸಿದರು.

ಗಣ್ಯರು ದೀಪ ಹಚ್ಚಿ ಕಾರಂತರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು  ತ್ರಿವಳಿ ಕಾರ್ಯಕ್ರಮಗಳಿಗೆ  ಚಾಲನೆ ನೀಡಿದರು. ಹಿರಿಯ ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಉಪಸ್ಥಿತರಿದ್ದು ಚಿತ್ರಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿ ಅಭಿನಂದಿಸಿದರು.

Advertisement

ಸಾಹಿತಿ ಬಾಬು ಶಿವ ಪೂಜಾರಿ ಇವರು ಮಾತನಾಡಿ, ಕಾರಂತರ ಮೈಮನಸ್ಸುಗಳ ಸುಳಿಯಲ್ಲಿ ಒಂದು ವಿಶಿಷ್ಟ ಕಾದಂಬರಿ. ಅದೊಂದು ಬರೀ ಕಾದಂಬರಿ ಅಲ್ಲ ಅದ್ವೀತಿಯ ಸಾಹಿತ್ಯ ಭಂಡರವೂ ಹೌದು. ಹೆಣ್ಣೊಬ್ಬಳ ಬಾಳನ್ನು ಸುಧಾರಿಸಲು ಯತ್ನಿಸಿದರಲ್ಲದೆ ಯಕ್ಷಗಾನಕ್ಕೆ ವಿಶ್ವರಂಗ ಮಂಟಪದಲ್ಲಿ  ಅಪೂರ್ವವಾದ ಸ್ಥಾನ ದೊರಕಿಸಿ ಕೊಟ್ಟವರು ಕಾರಂತರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಚಾರ್‌ಕೋಪ್‌ ಕನ್ನಡಿಗರ ಬಳಗದ ಟ್ರಸ್ಟಿ ಜಯ ಸಿ. ಶೆಟ್ಟಿ,, ಚಂದ್ರಶೇಖರ್‌ ಶೆಟ್ಟಿ, ಹರೀಶ್‌ ಶೆಟ್ಟಿ ಎರ್ಮಾಳ್‌, ಪಿ. ಎಸ್‌. ಕಾರಂತ ವಾಪಿ, ಸಾ. ದಯಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಜನಿ ಶೆಟ್ಟಿ, ಶುಭಾ ಸುವರ್ಣ, ಜಯಲಕ್ಷ್ಮೀ ಶೆಟ್ಟಿ ಪ್ರಾರ್ಥನೆಗೈದರು. ಸಾಹಿತ್ಯ ಮತ್ತು ಸಾಂಸ್ಕೃತಿಕ  ಉಪ ಸಮಿತಿಯ ಸಂಚಾಲಕ ಭಾಸ್ಕರ್‌ ಸರಪಾಡಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ರಘುನಾಥ್‌ ಎನ್‌.ಶೆಟ್ಟಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹೆಗಾರ ಗೋಪಾಲ ತ್ರಾಸಿ ಕಾರ್ಯಕ್ರಮ ನಿರೂಪಿಸಿದರು. ಲತಾ ಬಂಗೇರಾ ಮತ್ತು  ಶಿವಯೋಗಿ ಸಂಗಮನಿ ಚಿತ್ರಕಲಾ ಸ್ಪರ್ಧೆ ನಡೆಸಿಕೊಟ್ಟರು.  ಜೊತೆ ಕಾರ್ಯದರ್ಶಿ ಆಶಾ ಶೆಟ್ಟಿ ವಂದಿಸಿದರು. 

ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next