Advertisement

ಮಹತೋಭಾರ ಶ್ರೀ ಮುರುಡೇಶ್ವರ ದೇವರಿಗೆ ನೂತನ ಬ್ರಹ್ಮರಥ : ಪುರಪ್ರವೇಶಕ್ಕೆ ಸಕಲ ಸಿದ್ಧತೆ

04:13 PM Jan 05, 2022 | Team Udayavani |

ಭಟ್ಕಳ: ಪುರಾಣ ಪ್ರಸಿದ್ಧ ಮಹತ್ತೋಭಾರ ಶ್ರೀ ಮುರುಡೇಶ್ವರ ದೇವರಿಗೆ ನೂತನ ಬ್ರಹ್ಮರಥ ನಿರ್ಮಾಣ ಮಾಡಿದ್ದು ಜ.6ರಂದು ಸಂಜೆ ಪುರಪ್ರವೇಶದೊಂದಿಗೆ ಬ್ರಹ್ಮರಥಕ್ಕೆ ಅದ್ದೂರಿ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ನಾಗರೀಕ ಸೇವಾ ಸಮಿತಿಯ ಎಸ್. ಎಸ್. ಕಾಮತ್ ಹೇಳಿದರು.

Advertisement

ಮುರ್ಡೇಶ್ವರದ ಆರ್. ಎನ್. ಎಸ್. ವಿದ್ಯಾನಿಕೇತನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮುರುಡೇಶ್ವರ ದೇವರ ಬ್ರಹ್ಮರಥವು ಸುಮಾರು ನಾಲ್ಕುನೂರು ವರ್ಷಗಳ ಹಳೆಯದಾಗಿದ್ದು ಶಿಥಿಲವಾಗಿತ್ತು. ಹೊಸ ಬ್ರಹ್ಮರಥದ ನಿರ್ಮಾಣ ಮಾಡಬೇಕೆನ್ನುವ ಕನಸು ಕಂಡಿದ್ದ ಡಾ. ಆರ್. ಎನ್. ಶೆಟ್ಟಿಯವರ ಕನಸನ್ನು ಅವರ ಪುತ್ರ ಸುನಿಲ್ ಆರ್. ಶೆಟ್ಟಿ ಹಾಗೂ ಕುಟುಂಬಿಕರು ಪೂರ್ಣಗೊಳಿಸಿದ್ದಾರೆ.

ನೂತನ ಬ್ರಹ್ಮರಥವನ್ನು ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಇವರು ಅತ್ಯಾಕರ್ಷಕವಾಗಿ ನಿರ್ಮಾಣ ಮಾಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಈ ರಥ ನಿರ್ಮಾಣ ಕಾರ್ಯವನ್ನು ಮಾಡಿ ಮುಗಿಸಿದ ಅವರು ಶಾಸ್ತ್ರ ಸಮ್ಮತವಾಗಿ ನಿರ್ಮಾಣ ಮಾಡಿದ್ದಾರೆ. ನೂತನ ಬ್ರಹ್ಮರಥ ಸಾಂಪ್ರದಾಯ ಬದ್ಧವಾಗಿ 15 ಅಡಿ ಅಗಲ ಮತ್ತು 15 ಅಡಿ ಉದ್ದ ಹೊಂದಿದ್ದು, ರಥದಲ್ಲಿ ಆತ್ಮಲಿಂಗ ಕಥನ ಹಾಗೂ ರಾವಣನಿಂದ ಪಂಚಕ್ಷೇತ್ರವಾಗಿರುವುದು ಮತ್ತು ಮುರ್ಡೇಶ್ವರ ಕ್ಷೇತ್ರದ ಕುರಿತು ಪೌರಾಣಿಕವಾದ ವಿವಿಧ ಆಕರ್ಷಕ ಕಲಾಕೃತಿಯನ್ನು ಕೆತ್ತಲಾಗಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ : ಜಿಯೋ ಜೊತೆ ಜುಪಿ ಪಾಲುದಾರಿಕೆ : ಇದರಿಂದ ಗ್ರಾಹಕರಿಗೇನು ಲಾಭ, ಇಲ್ಲಿದೆ ಮಾಹಿತಿ..

ಜ. 6 ರಂದು ಗುರುವಾರ ಸಂಜೆ 4 ಗಂಟೆಗೆ ಕೋಟೇಶ್ವರದಿಂದ ಆಗಮಿಸುವ ಬ್ರಹ್ಮರಥಕ್ಕೆ ಮಹಾದ್ವಾರದ ಬಳಿ ಪೂಜೆ ಸಲ್ಲಿಸಿದ ಬಳಿಕ ಪುರಪ್ರವೇಶ ಮೆರವಣಿಗೆ ಜರುಗಲಿದೆ ಓಲಗ ಮಂಟಪದ ತನಕ ನಡೆಯುವ ಸ್ವಾಗತ ಕಾರ್ಯಕ್ರಮದಲ್ಲಿ ವಿವಿಧ ಟ್ಯಾಬ್ಲೋ, ವೇಷ ಭೂಷಣಗಳು ಇರಲಿವೆ ಎಂದರು. ಜ.9 ರಂದು 8 ಗಂಟೆಗೆ ದೇವಸ್ಥಾನದಲ್ಲಿ ದೇವರ ಪ್ರಾರ್ಥನೆ ಮಾಡಿ, ಗಣಹೋಮ, ಶತರುಧ್ರ, ವಿಶೇಷ ಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ರಥದ ಬಳಿ ಸಂಸ್ಕಾರ ಪೂಜೆ ಮತ್ತಿತರ ಕಾರ್ಯಕ್ರಮಗಳು ಜರುಗಲಿದೆ. ಜ.14 ರಂದು ಬೆಳಿಗ್ಗೆ ರಥದ ಎದುರು ಗಣಹವನ, ರಥಾಂಗ ದೇವತಾ ಆಹ್ವಾಹನೆ ಹವನ ರಥಪೂಜೆ ನಡೆಯಲಿದ್ದು, ನಂತರ ರಥಸಮರ್ಪಣೆ ಮಹಾ ಅನ್ನ ಸಂತರ್ಪಣೆ ಜರುಗಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆರ್.ಎನ್. ಆಸ್ಪತ್ರೆಯ ನಾಗರಾಜ ಶೆಟ್ಟಿ, ಶಿವಾನಂದ, ಆರೆನ್ನೆಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಸಂತೋಷ, ಆರೆನ್ನೆಸ್ ಪದವಿ ಕಾಲೇಜಿನ ಪ್ರಾಂಶುಪಾಲ ಮಾಧವ ಪಿ, ಆರೆನ್ನೆಸ್ ವಿದ್ಯಾನಿಕೇತನದ ಪ್ರಾಂಶುಪಾಲ ಡಾ. ಸುರೇಶ ಶೆಟ್ಟಿ, ಸತೀಶ ಶೆಟ್ಟಿ, ಶಂಕರ ದೇವಡಿಗ, ರಾಮಚಂದ್ರ ಹರಿಕಾಂತ, ರಾಘವೇಂದ್ರ ಹರಿಕಾಂತ, ಗೋವಿಂದ ಹರಿಕಾಂತ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next