ಉಡುಪಿ: ಪುತ್ತಿಗೆ ಮಠದ ಅಮೆರಿಕದಲ್ಲಿ ಸ್ಥಾಪಿಸಿದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ಲೋಕ ಕಲ್ಯಾಣಕ್ಕಾಗಿ ಒಂಬತ್ತು ದಿನಗಳ ಕಾಲ ನಡೆದ ಸಂಹಿತಾ ಯಾಗ ರಥೋತ್ಸವ, ರಂಗಪೂಜೆಯೊಂದಿಗೆ ಸಮಾಪನಗೊಂಡಿತು.
ಶ್ರೀನಿವಾಸ ದೇವರಿಗೆ ಪ್ರಸನ್ನ ಕಲಶಾಭಿಷೇಕವನ್ನು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನೆರವೇರಿಸಿದರು. ಬಳಿಕ ಅನೇಕ ಭಕ್ತಜನರ ಸಮ್ಮುಖದಲ್ಲಿ ಸಹಸ್ರ ಗಣಪತ್ಯಥರ್ವ ಶೀರ್ಷ ಯಾಗ ಸಂಪನ್ನಗೊಂಡಿತು.
ಸಾಯಂಕಾಲ ಶ್ರೀನಿವಾಸದೇವರಿಗೆ ರಂಗಪೂಜೆ ರಥೋತ್ಸವ ನಡೆದು ಶ್ರೀನಿವಾಸನ ಉತ್ಸವ ಮೂರ್ತಿಯ ಅಟ್ಟೆ ಪಲ್ಲಕ್ಕಿ ಕುಣಿತ ಜನರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಈ ಉತ್ಸವದಲ್ಲಿ ಪ್ರಮುಖವಾಗಿ ವಾದನಸುತ್ತು, ಚೆಂಡೆ ಸುತ್ತು, ಹರಿಭಜನೆ ಸುತ್ತುಗಳ ನರ್ತನಗಳಿಂದ ಉಡುಪಿಯ ಭವ್ಯ ಉತ್ಸವ ಪರಂಪರೆಯನ್ನು ಈ ನೆಲದಲ್ಲಿ ಪರಿಚಯಿಸಿದಂತಾ ಯಿತು. ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಿದ ವಿದ್ವಾಂಸರನ್ನು ಶ್ರೀಪಾದರು ಶಾಲು ಹೊದಿಸಿ ಆಶೀರ್ವದಿಸಿದರು.