Advertisement

ಕಮಿಷನ್‌ ಆರೋಪ; ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

06:12 PM Apr 18, 2022 | Nagendra Trasi |

ವಿಜಯಪುರ: ಗುತ್ತಿಗೆದಾರರಿಂದ ಕಮಿಷನ್‌ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಪ್ರಮುಖರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

Advertisement

ರವಿವಾರ ನಗರದ ಮಹಾತ್ಮ ಗಾಂಧಿಧೀಜಿ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಪ್ರತಿಭಟನಾ ರ್ಯಾಲಿ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು, ನಂತರ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ಪ್ರತಿಭಟನಾ ಸಮಾವೇಶ ನಡೆಸಿದರು. ಸಮಾವೇಶದಲ್ಲಿ ಪ್ರಮುಖರ ಭಾಷಣದ ಬಳಿಕ ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ-ಪಂಚಾಯತ ರಾಜ್‌ ಖಾತೆ ಸಚಿವರಾಗಿದ್ದ ಸಂದರ್ಭದಲ್ಲಿ ಕೆ.ಎಸ್‌. ಈಶ್ವರಪ್ಪ ಅವರು ಶೇ. 40 ಪರ್ಸೆಂಟೇಸ್‌ ರೂಪದಲ್ಲಿ ಗುತ್ತಿದಾರರ ಸಂತೋಷ ಪಾಟೀಲ ಇವರಿಗೆ ಲಂಚಕ್ಕಾಗಿ ಕಿರುಕುಳ ನೀಡಿದ್ದೇ ಅವರ ಆತ್ಮಹತ್ಯೆಗೆ ಕಾರಣ. ಹೀಗಾಗಿ ಈಶ್ವರಪ್ಪ ಅವರ ಮೇಲೆ ಕೊಲೆ ಹಾಗೂ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈಶ್ವರಪ್ಪ ಅವರನ್ನು ಕೂಡಲೇ ಬಂಧಿ ಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಭ್ರಷ್ಟ ಬಿಜೆಪಿ ಸರಕಾರ ಕೇವಲ ಈಶ್ವರಪ್ಪ ಅವರ ರಾಜೀನಾಮೆ ಪಡೆದು, ಬಳಿಕ ಅವರ ರಕ್ಷಣೆಗೆ ನಿಂತಿರುವುದು ನಾಚಿಕೆ ಸಂಗತಿ. ಕೇವಲ ಈಶ್ವರಪ್ಪ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದರೆ ಸಾಲದು, ಕೂಡಲೇ ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ಶೇ. 10 ಸರಕಾರ ಎಂದು ಜರಿದಿದ್ದ ಪ್ರಧಾನಿ ಮೋದಿ ಅವರು, ಇದೀಗ ಇದೇ ಕರ್ನಾಟಕದಲ್ಲಿ ತಮ್ಮದೇ ಪಕ್ಷದ ಸರ್ಕಾರ ಶೇ. 40 ಕಮಿಷನ್‌ ರೂಪದ ಲಂಚದಲ್ಲಿ ತೊಡಗಿರುವ ಕುರಿತು ಮೌನ ವಹಿಸಿರುವುದು ಏಕೆ ಎಂದು ಕುಟುಕಿದರು.

Advertisement

ರಾಜ್ಯ ಬಿಜೆಪಿ ಸರ್ಕಾರ ಗುತ್ತಿಗೆದಾರರಿಗೆ ಶೇ. 40ಕಮಿಷನ್‌ ರೂಪದ ಲಂಚ ಕೊಡುವಂತೆ ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದೆ. ಇದರಿಂದ ರೋಷಿಹೋದ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಿಖೀತ ರೂಪದಲ್ಲಿ ದೂರು ನೀಡಿದರೂ ಚಕಾರ ಎತ್ತಿಲ್ಲ. ಈ ಮೌನಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತಿರುವ ಲಂಚದ ಪಾಲೆಷ್ಟು ಎಂದು ಪ್ರಶ್ನಿಸಿದರು.

ಗುತ್ತಿಗೆದಾರ ಸಂತೋಷ ಪಾಟೀಲ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ರ್ಯಾಲಿಯ ನಂತರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರ ಸಭೆಯನ್ನು ನಡೆಸಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದರು.

ಮಾಜಿ ಸಚಿವರಾದ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಸಚಿವರಾಗಿದ್ದ ಈಶ್ವರಪ್ಪ ಅವರೊಂದಿಗೆ ಲಂಚದ ಕಮಿಷನ್‌ ಕೊಡುವ ವಿಷಯದಲ್ಲೇ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ ತೆಗೆಸಿಕೊಂಡ ಫೋಟೋ ಇದೆ, ಆಡಿಯೋ ಇವೆ. ಹೀಗಾಗಿ ರಾಜೀನಾಮೆ ಕೊಡುವುದರಿಂದ ಕಾನೂನು ಪಾಲನೆ ಮಾಡಿದಂತಲ್ಲ, ಕಾನೂನು ಪ್ರಕಾರ ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಶಾಸಕ ಸುನೀಲಗೌಡ ಪಾಟೀಲ, ಮಾಜಿ ಸಚಿವ ಸಿ.ಎಸ್‌. ನಾಡಗೌಡ, ಮಾಜಿ ಶಾಸಕ ವಿಠಲ ಕಟಕದೊಂಡ, ರಾಜು ಆಲಗೂರ, ಮಾಜಿ ಸಂಸದ ಐ.ಜಿ. ಸನದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ್‌ ಸನದಿ, ಕಾಂತಾ ನಾಯಕ, ಕೆ.ಎಫ್‌. ಅಂಕಲಗಿ, ಅಶೋಕ ಮನಗೂಳಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಅಬ್ದುಲ್‌ ಹಮೀದ ಮುಶ್ರೀಪ್‌, ಶ್ರೀದೇವಿ ಉತ್ಲಾಸರ, ಸುನೀಲ ಉಕ್ಕಲಿ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಷ್‌ ಕಾಲೇಬಾಗ, ಆಜಾದ ಪಟೇಲ್‌, ಮಹ್ಮದ್‌ ರಫೀಕ ಟಪಾಲ, ವಿಶ್ವನಾಥ ಮಠ, ಮಹಾದೇವಿ ಗೋಕಾಕ, ಸಂಗನಗೌಡ ಹರನಾಳ, ಸುಭಾಷ್‌ ಛಾಯಾಗೋಳ, ಹಾಸಿಂಪೀರ್‌ ವಾಲೀಕಾರ, ಎಸ್‌.ಎಂ. ಪಾಟೀಲ ಗಣಿಹಾರ, ವಿನೋದ ವ್ಯಾಸ, ವಸಂತ ಹೊನಮೊಡೆ, ಜಮೀರ್‌ ಅಹ್ಮದ ಭಕ್ಷಿ, ಆರತಿ ಶಹಾಪುರ, ಗುರುನಾಥ ತಾರನಾಳ, ಬಾಳನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಇಲಿಯಾಸ್‌ ಬೋರಾಮಣಿ, ಶಹಾಜಹಾನ್‌ ಮುಲ್ಲಾ, ಇರ್ಫಾನ್‌ ಶೇಖ್‌ ಸೇರಿದಂತೆ ಇತರರು
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next