Advertisement

ಭೂಗರ್ಭವನ್ನೇ ಬಗೆಯುತ್ತಿರುವ ಕರಿಕಲ್ಲು ಗಣಿಗಾರಿಕೆ

03:56 PM Sep 15, 2021 | Team Udayavani |

ಯಳಂದೂರು: ದೇಶದಲ್ಲೇ ಅತ್ಯುತ್ತಮ ಕರಿಕಲ್ಲಿನ ಪದರವನ್ನು ಹೊಂದಿರುವ ಖ್ಯಾತಿ ಗಡಿ ಜಿಲ್ಲೆ ಚಾಮರಾಜನಗರಕ್ಕಿದೆ. ಈ ಭಾಗದ ಬಿಳಿ ಗಿರಿ ರಂಗನ ಬೆಟ್ಟದ ತಪ್ಪಲಿನಲ್ಲಿ ಸಿಗುವ ಕರಿಕಲ್ಲೂ ಕೂಡ ಗುಣ ಮಟ್ಟದಲ್ಲಿ ವಿಶ್ವಖ್ಯಾತಿ ಪಡೆದಿದ್ದು ಇಲ್ಲಿಂದ ವಿದೇಶಕ್ಕೂ ಕರಿಕಲ್ಲು ರಫ್ತಾಗುತ್ತದೆ. ಆದರೆ, ಇದನ್ನು ತೆಗೆಯಲು ಹತ್ತಾರು ಮೀಟರ್‌ ಹಳ್ಳವನ್ನು ತೋಡಲಾಗುತ್ತಿದ್ದು ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ.

Advertisement

ಯಳಂದೂರು ತಾಲೂಕಿನ ಯರಗಂಬಳ್ಳಿಯಲ್ಲಿ ಕರಿಕಲ್ಲು ಗಣಿಗಾರಿಕೆಯ ಕ್ವಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಖಾಸಗಿ ವ್ಯಕ್ತಿಯೊಬ್ಬರು ಕ್ವಾರಿಯಿಂದ ಕೇವಲ 20 ಮೀಟರ್‌ ಅಂತರದಲ್ಲಿ ರೈತರ ಜಮೀನಿಗೆ ನೀರು ಪೂರೈಕೆ ಮಾಡುವ ಕಾಲುವೆ ಇದೆ ಎಂದು ದಾವೆ ಹೂಡಿದ್ದರು. ಹೀಗಾಗಿ ಹೈಕೋರ್ಟ್‌ ಇದಕ್ಕೆ ಕಮಿಷನರ್‌ ನೇಮಿಸಿ ಸ್ಥಳ ಪರಿಶೀಲನೆ ನಡೆಸಿದಾಗ ಸುಳ್ಳು ದಾಖಲೆ ಸೃಷ್ಟಿಸಿರುವುದು ಸಾಬೀತಾಗಿದೆ. ಇದೀಗ ಯರಗಂ ಬಳ್ಳಿಯಲ್ಲಿ ಕರಿಕಲ್ಲು ಗಣಿಗಾರಿಕೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಅಂತರ್ಜಲಕ್ಕೆ ಆಪತ್ತು: ತಾಲೂಕಿನ ಗುಂಬಳ್ಳಿ, ಯರಗಂಬಳ್ಳಿ ಗ್ರಾಮಗಳಲ್ಲಿಕರಿಕಲ್ಲಿನಕ್ವಾರಿಗಳು ಇವೆ. ಇವೆಲ್ಲವೂ ಕೆರೆಯ ಅಕ್ಕಪಕ್ಕ, ವಾಸದ ಮನೆಯ ಅನತಿ ದೂರದಲ್ಲಿ ಅಥವಾ ಕಾಲುವೆಗಳ ಬದಿಯಲ್ಲೇ ಇವೆ. ಕಳೆದ ಹತ್ತಾರು ವರ್ಷಗಳಿಂದಲೂ ಇಲ್ಲಿ ಗಣಿಗಾರಿಕೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ತೆಗೆಯಲು ಹತ್ತಾರು ಮೀಟರ್‌ ಆಳದ ಹಳ್ಳಗಳನ್ನು ತೋಡಲಾಗಿದೆ. ಆದರೆ, ಇದರ ಬದಿಯಲ್ಲೇ ಕೆರೆಕಟ್ಟೆಗಳು, ಕಾಲುವೆಗಳು ರೈತರು ವ್ಯವಸಾಯ ಮಾಡುವ ಜಮೀನುಗಳು ಇವೆ.ಈ ಆಳಹೆಚ್ಚಾದಂತೆ ಇಲ್ಲಿನ ಅಂತರ್ಜಲವೂ ಕುಸಿಯಲಿದೆ.ಕ್ವಾರಿಗಳಲ್ಲಿನ ಆಳ ಹೆಚ್ಚಿದಂತೆ ಅಕ್ಕಪಕ್ಕದ ಕೊಳವೆ ಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಇಲ್ಲಿನ ರೈತರ ದೂರಾಗಿದೆ.

ಇದನ್ನೂ ಓದಿ:ಬಾಲಿವುಡ್‍ಗೆ ಬಸ್ರೂರ್ : ‍‘ಗರುಡ’ ಚಿತ್ರಕ್ಕೆ ರವಿ ಸಂಗೀತ

ನಿಯಮಗಳ ಉಲ್ಲಂಘನೆ: ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ವತಿಯಿಂದ ಓಬಿರಾಯನ ಕಾಲದಲ್ಲಿ ತೆಗೆದುಕೊಂಡಿದ್ದ ಪರವಾನಗಿಯಲ್ಲೇ ಇಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಷರತ್ತು ಬದ್ಧ ನಿಯಮಗಳ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಆದರೆ, ಯಾವ ಗಣಿಯಲ್ಲೂ ಇದರ ಪಾಲನೆಯಾಗುತ್ತಿಲ್ಲ. ನ್ಪೋಟಕಗಳನ್ನು ಬಳಸಿ ಕಲ್ಲನ್ನು ಸಿಡಿಸಲಾಗುತ್ತಿದೆ. ಇದರ ಬಳಕೆಗೆ ಮಾನ್ಯತೆಯನ್ನು ಇಲಾಖೆ ನೀಡಿಲ್ಲ. ಈ ಬಗ್ಗೆ ಹಲವಾರು ಬಾರಿ ಇದು

Advertisement

ಇಲಾಖೆಯ ಗಮನಕ್ಕೆ ಬಂದಿದ್ದರೂ ಇದರ ಬಗ್ಗೆ ಇಲಾಖೆ ನಿರ್ಲಕ್ಷ್ಯ ತಳೆದಿದೆ. ಹುಲಿ ರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿ: ಕಲ್ಲುಗಣಿಗಾರಿಕೆ ನಡೆಸುವ ಸ್ಥಳವು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಅನತಿ ದೂರದಲ್ಲೇ ಇದೆ. ಅರಣ್ಯದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು ಎಂಬ ನಿಯಮವಿದೆ. ಇದು ಹಸಿರು ಪಟ್ಟಿ ವಲಯಕ್ಕೆ ಸೇರಿದ್ದರೂ ಕರಿಕಲ್ಲಿನ ಗಣಿಗಾರಿಕೆ ಇಲ್ಲಿ ನಿಂತಿಲ್ಲ. ಕೆಲವು ಕ್ವಾರಿಗಳ ಬಳಿಯಲ್ಲೇ ಗುಡ್ಡವೂ ಇದೆ. ಸ್ಮಶಾನದ ಜಾಗವೂ ಇದೆ. ಇದನ್ನೂ ಸಹ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳ ಸಾಥ್‌ ಇದೆ ಎಂಬ ಗುಮಾನಿ ಇದ್ದು, ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಈ ಗಣಿಗಾರಿಕೆ ಪ್ರದೇಶದ ಸುತ್ತಲೂ ಕಬಿನಿ ನಾಲೆ, ಗುಂಬಳ್ಳಿ ಕೆರೆ, ಶಾಲೆ, ವಸತಿ, ಹಾಲಿನ ಶೀತಲ ಘಟಕವಿರುವ ವೃತ್ತದ ಮಧ್ಯದಲ್ಲಿ ನಡೆಯು ತ್ತಿರುವುದರಿಂದ ಭವಿಷ್ಯದ ದೃಷ್ಟಿಯಲ್ಲಿ ಗಂಡಾಂತರ ಎಡೆ ಮಾಡಿಕೊಡುತ್ತಿದೆ.

ಅಧಿಕಾರಿಗಳ ಸಾಥ್‌: ಕರಿಕಲ್ಲಿನ ಗಣಿಗಾರಿಕೆ ನಡೆಸುವ ವ್ಯಕ್ತಿಗಳು ಪ್ರಭಾವಿಗಳಾಗಿದ್ದಾರೆ. ಇವರು ಸ್ಥಳೀಯ ಜಿಲ್ಲಾ, ತಾಲೂಕು ಕಚೇರಿಗಳಲ್ಲಿ ಹೆಚ್ಚು ಪ್ರಭಾವವುಳ್ಳವರಾಗಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆಯರಗಂಬಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಬಳಿಯ ನೀರಿನ ಕಾಲುವೆ 60 ಮೀಟರ್‌ ಇದೆ ಎಂದು ಸರ್ಕಾರಿ ಲೆಕ್ಕದಲ್ಲಿ ತೋರಿಸಲಾಗಿದೆ. ಆದರೆ, ಹೈಕೋಟ್‌ ನೇಮಿಸಿದ್ದ ಕಮಿಷನರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇದು ಕೇವಲ 20 ಮೀಟರ್‌ ದೂರದಲ್ಲಿದೆ ಎಂಬುದು ಸಾಬೀತಾಗಿದೆ. ಇಲ್ಲಿ ಅಧಿಕಾರಿಗಳು ಹಾಗೂ ಇಲಾಖೆಗಳು ಯಾವ ಮಟ್ಟಿಗೆ ಕ್ವಾರಿಯ ಮಾಲೀಕರ ಪರವಾಗಿ ನಿಂತಿವೆ ಎಂಬುದು ಎದ್ದುಕಾಣುತ್ತದೆ.

ಗಣಿ ಬಗ್ಗೆಸ್ಪಷ್ಟನೆ ನೀಡಲು
ನಿರಾಕರಿಸಿದ ಅಧಿಕಾರಿಗಳು
ಈ ಕುರಿತು ಪ್ರತಿಕ್ರಿಯಿಸಿರುವ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ನಾಗಭೂಷಣ್‌,ಯರಗಂಬಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದಕಾರಣದಿಂದ ಇದು ಸ್ಥಗಿತಗೊಂಡಿದೆ. ತಾಲೂಕಿ ನಲ್ಲಿ ನಡೆಯುತ್ತಿರುವ ಇತರೆ ಕರಿಕಲ್ಲಿನ ಕ್ವಾರಿಗಳ ಬಗ್ಗೆ ಮಾಹಿತಿ ನೀಡಲು ಇವರು ನಿರಾಕರಿಸಿದರು

ಗಣಿಗಾರಿಕೆ ಬಗ್ಗೆ ದೂರು
ನೀಡಿದರೆ ಬೆದರಿಕೆ
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ ವ್ಯಕ್ತಿಗಳನ್ನುಕೂಡಲೇ ಮಾಲಿಕರು ದೂರು ನೀಡಿದ ವ್ಯಕ್ತಿಯನ್ನು ಪತ್ತೆ ಮಾಡಿ ತಕ್ಷಣ ಬೆದರಿಕೆ ಹಾಕುತ್ತಾರೆ. ಇಲ್ಲವೇ ಆ ಗ್ರಾಮದಲ್ಲಿ ಸಮುದಾಯದ ಯಜಮಾನರಿಗೆ ವಿಷಯವನ್ನು ತಿಳಿಸಿ ನ್ಯಾಯ ಪಂಚಾಯಿಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಈ ಅಕ್ರಮ ಗಣಿಗಾರಿಕೆ ನಡೆಯುವ ಬಗ್ಗೆ ಯಾರು ದೂರು ನೀಡಲು ಬರಲು ಹಿಂದೇಟು ಹಾಕುತ್ತಾರೆ. ಬಂದರೆ ದೂರು ನೀಡಿದ ವ್ಯಕ್ತಿ ಮೇಲೆ ಗೊಬೆಕುರಿಸುತ್ತಾರೆ. ಇಲ್ಲಿ ನಡೆಯುವ ಗಣಿಗಾರಿಕೆಗಳು ಪ್ರಭಾವಿ ಮಾಲಿಕರು ಇರುವುದರಿಂದ ಇಲಾಖೆ ಅಧಿಕಾರಿಗಳು ಸಹ ಮಾಲಿಕರ ಪರವಾಗಿ ಕೆಲಸವನ್ನು ಮಾಡುತ್ತಾರೆ ಎಂಬುದು ಸ್ಥಳೀಯರ ವಾದ.

– ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next