Advertisement

ಚ.ಪಟ್ಟಣ ಪುರಸಭೆ ಅಧ್ಯಕ್ಷ ಮೋಹನ್‌?

04:38 PM Nov 08, 2020 | Suhan S |

ಚನ್ನರಾಯಪಟ್ಟಣ: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನ.9ರಂದು ಚುನಾವಣೆ ನಡೆಯಲಿದ್ದು, ಸ್ಪಷ್ಟ ಬಹುಮತ ಹೊಂದಿರುವ ಜೆಡಿ ಎಸ್‌ ಪಕ್ಷ ಮತ್ತೂಮ್ಮೆ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಅಧ್ಯಕ್ಷ ಸ್ಥಾನ ಬಿಸಿಎಂ ಬಿಗೆ ಮೀಸಲಾಗಿರುವ ಕಾರಣ, ಸದಸ್ಯರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

Advertisement

ಸೋಮವಾರ ಬೆಳಗ್ಗೆ 10 ರಿಂದ 12 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, 2 ಗಂಟೆ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. 2 ರಿಂದ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಅಗತ್ಯ ಇದ್ದಲ್ಲಿ ಮೂರು ಗಂಟೆ ನಂತರ ಚುನಾವಣೆ ನಡೆಯಲಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದರೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ತಹಶೀಲ್ದಾರ್‌ ಜೆ.ಬಿ. ಮಾರುತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಿದ್ದಾರೆ.

3 ಬಾರಿ ಮೀಸಲಾತಿ ಬದಲಾವಣೆ: ಪುರಸಭೆ ಸದಸ್ಯರ ಚುನಾವಣೆ ನಡೆದ ಎರಡು ವರ್ಷದಲ್ಲಿ ಮೂರು ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬದಲಾವಣೆ ಮಾಡಲಾಗಿದೆ. 2018ರ ಸೆ.3 ರಂದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಬಿ)ಗೆ ಮೀಸಲಾತಿ ಘೋಷಣೆ ಮಾಡಲಾಗಿತ್ತು. ಇದು ನ್ಯಾಯಾಲಯದ ಮೆಟ್ಟಿಲೇರಿ 2020 ಮಾರ್ಚ್‌ ತಿಂಗಳಲ್ಲಿ ಪುನಃಬದಲಾಯಿತು.

ಆಗ ಅಧ್ಯಕ್ಷ ಸ್ಥಾನ ಬಿಸಿಎಂ ಎ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಮೀಸಲಾಯಿತು, ಬಳಿಕ ಸಿಂದಗಿ ಪುರಸಭೆ ಮೀಸಲಾತಿಯಲ್ಲಿ ಲೋಪ ಆಗಿದೆ ಎಂದು ನ್ಯಾಯಾಲಯಕ್ಕೆ ಮೋರೆ ಹೋದ ಮೇಲೆ ಅಂತಿಮವಾಗಿ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ), ಉಪಾಧ್ಯಕ್ಷ ಸ್ಥಾನವು ಪರಿ ಶಿಷ್ಟ ಜಾತಿಗೆ ಮೀಸಲಾಗಿ, ಈಗ ಚುನಾವಣೆ ನಡೆಸಲು ಆಯೋಗವು ಸಕಲ ತಯಾರಿ ಮಾಡಿಕೊಂಡಿದೆ

ಪುನಃ ಜೆಡಿಎಸ್‌ ಅಧಿಕಾರ: ಕಳೆದ ಸಾಲಿನಲ್ಲಿ ಅಧಿಕಾರ ಅನುಭವಿಸಿದ್ದ ಜೆಡಿಎಸ್‌ ಪಕ್ಷ, ಪ್ರಸ್ತುತ ಪುರ ಸಭೆಯ ಒಟ್ಟು 23 ಸದಸ್ಯರ ಪೈಕಿ 15 ಸ್ಥಾನ, ಕಾಂಗ್ರೆಸ್‌ ಎಂಟು ಸ್ಥಾನ ಪಡೆದಿದೆ. ಸ್ಪಷ್ಟ ಬಹುಮತ ಮತ್ತು ಅಧ್ಯಕ್ಷ ಸ್ಥಾನದ ಮೀಸಲಾತಿಯಡಿ ಗೆದ್ದಿರುವ ಸದಸ್ಯರು ಜೆಡಿಎಸ್‌ ಪಕ್ಷ ದಲ್ಲಿ ಇರುವ ಕಾರಣ, ಪುನಃ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಜೆಡಿಎಸ್‌ನಿಂದ ಬಿಸಿಎಂ ಬಿ ಮೀಸಲಾತಿ ಅಡಿಯಲ್ಲಿ ಮೋಹನ್‌ ಒಬ್ಬರೇ ಆಯ್ಕೆಯಾಗಿದ್ದರೂ, ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಅರ್ಹರಿರುವ ಸದ ಸ್ಯರು ಸಾಮಾನ್ಯ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ.

Advertisement

ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬುದು ಜೆಡಿಎಸ್‌ ವರಿಷ್ಠರಿಗೆ ತೀವ್ರ ತಲೆ ನೋವಾಗಿದೆ. ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಶಾಸಕರ ತೀರ್ಮಾನವೇ ಅಂತಿಮ: ತಾಲೂಕಿನಲ್ಲಿ ಜೆಡಿಎಸ್‌ ಪಕ್ಷದ ಸರ್ವಾಧಿಕಾರಿ ಆಗಿರುವ ಶಾಸಕ ಸಿ.ಎನ್‌.ಬಾಲಕೃಷ್ಣ ಯಾರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಕುರ್ಚಿ ಮೇಲೆ ಕೂರಿಸಬೇಕು ಎನ್ನುವ ದನ್ನು ನಿರ್ಧರಿಸಲಿದ್ದಾರೆ. ಜೆಡಿಎಸ್‌ ತಾಲೂಕು ಅಧ್ಯಕ್ಷ ನೆಪಮಾತ್ರವಾಗಿದ್ದು, ಪಕ್ಷದ ಎಲ್ಲಾ ಆಗು ಹೋಗುಗಳನ್ನು ಶಾಸಕರೇ ತೀರ್ಮಾನ ಮಾಡಲಿದ್ದಾರೆ. ಇನ್ನು ಶಾಸಕರ ಪತ್ನಿ ಮಾತು ಕೂಡ ಇಲ್ಲಿ ಗಣನೆಗೆ ಬರುತ್ತದೆ. ಹಲವು ಆಕಾಂಕ್ಷಿಗಳು ಅವರ ಮೂಲಕವೂ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗುತ್ತಿದ್ದಾರೆ.

ಮೋಹನ್‌ ಆಯ್ಕೆ ಬಹುತೇಕ ಖಚಿತ: ಜೆಡಿಎಸ್‌ ಮೂಲಗಳ ಪ್ರಕಾರ ಬಿಸಿಎಂ(ಬಿ) ಕ್ಷೇತ್ರದಿಂದ ಆಯ್ಕೆಯಾಗಿರುವ ಮೋಹನ್‌ ಅವರಿಗೆ ಅಧ್ಯಕ್ಷ ಸ್ಥಾನ ಬಹತೇಕ ಖಚಿತವಾಗಿದೆ. ಇನ್ನು ಉಪಾಧ್ಯಕ್ಷಸ್ಥಾನಕ್ಕೆ ಇಬ್ಬುರು ಮಾತ್ರ ಇರುವುದರಿಂದ ಅವರಲ್ಲಿ ಯಾರು ಮೊದಲ ಸುತ್ತಿನಲ್ಲಿಕುರ್ಚಿ ಮೇಲೆಕುಳಿತುಕೊಳ್ಳುತ್ತಾರೆ ಎನ್ನುವುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಎನ್ನುವುದು ಪಕ್ಷದ ನಾಯಕರಲ್ಲಿ ಚರ್ಚೆಯಾಗಿದೆ ಎಂದು ಜೆಡಿಎಸ್‌ ಮೂಲದಿಂದ ಉದಯವಾಣಿಗೆ ತಿಳಿದು ಬಂದಿದೆ.

ಕಾಂಗ್ರೆಸ್‌ ಗೌಪ್ಯ ಸಭೆ: ಜೆಡಿಎಸ್‌ನಲ್ಲಿ ಅಧ್ಯಕ್ಷ ಕುರ್ಚಿಗೆ ಪೈಪೋಟಿ ಆಗುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್‌ ಪಕ್ಷ ಈಗಾಗಲೆ ಗೌಪ್ಯವಾಗಿ ಸಭೆ ನಡೆಸಿದ್ದು,23ನೇ ವಾರ್ಡ್‌ನ ಸದಸ್ಯ ಪ್ರಕಾಶ್‌ ಅವರನ್ನು ಕಣಕ್ಕೆ ಇಳಿಸಲು ಸಕಲ ತಯಾರಿ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಸೋಮವಾರ3 ಗಂಟೆ ನಂತರ ತಿಳಿಯಲಿದೆ.

ಜೆಡಿಎಸ್‌ ಸದಸ್ಯರೊಂದಿಗೆ ಶಾಸಕ ಸಭೆ :  ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಬಾಲಕೃಷ್ಣ ಶನಿವಾರ ರಾತ್ರಿ ಚನ್ನರಾಯಪಟ್ಟಣದಲ್ಲಿ ಜೆಡಿಎಸ್‌ ಸದಸ್ಯರೊಂದಿಗೆ ಸಭೆ ನಡೆಸಿದರು. ಅಧ್ಯಕ್ಷ ಸ್ಥಾನದ ಮೇಲೆ ಐದು ಮಂದಿ ಕಣ್ಣಿಟ್ಟಿದ್ದು, ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಆಕಾಂಕ್ಷಿಗಳಾದ ವಾರ್ಡ್ 1ರ ಸುರೇಶ್‌, ನಾಲ್ಕನೇ ವಾರ್ಡ್‌ನ ಮೋಹನ್‌,10ನೇ ವಾರ್ಡ್‌ನ ರೇಖಾ, 11ನೇ ವಾರ್ಡ್‌ನ ಎಚ್‌.ಎನ್‌.ನವೀನ್‌,20ನೇ ವಾರ್ಡ್‌ನ ರಾಧಾ ತಮಗೆ ಅಧಿಕಾರ ನೀಡಬೇಕು ಎಂದು ಸಭೆಯ ಮುಂದಿಟ್ಟಿದ್ದರು.ಈ ವೇಳೆ ಶಾಸಕ ಬಾಲಕೃಷ್ಣ,2ನೇ ಅವಧಿಯಲ್ಲಿ ಅವಕಾಶ ಸಿಕ್ಕರೆ ಮಹಿಳಾ ಸದಸ್ಯರಿಗೆ ಅವಕಾಶ ನೀಡುವ ಭರವಸೆ ನೀಡಿದರು. ಒಂದು ವೇಳೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾದರೆ ಸ್ಥಾಯಿ ಸಮಿತಿಯಲ್ಲಿ ಸ್ಥಾನಕಲ್ಪಿಸುವುದಾಗಿ ಹೇಳಿ ಅಧ್ಯಕ್ಷ ಸ್ಥಾನದ ಮೇಲೆಕಣ್ಣಿಟ್ಟಿದ್ದ ಸದಸ್ಯರಾದ ರೇಖಾ, ರಾಧಾ ಅವರನ್ನು ಸಮಾಧಾನ ಪಡಿಸಿದರು. ನಂತರ ಉಳಿದ ಮೂವರು ಆಕಾಂಕ್ಷಿಗಳಿಗೆ ಅಧಿಕಾರಾವಧಿ ಹಂಚಿಕೆ ಮಾಡಿ ನಿರ್ಧಾರ ಪ್ರಕಟಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ13ನೇ ವಾರ್ಡ್‌ ಯೋಗೇಶ್‌,18ನೇ ವಾರ್ಡ್‌ನ ಧರಣೇಶ್‌ಗೆ ಅಧಿಕಾರ ಹಂಚಿಕೆ ಮಾಡಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನಾ ಯಾರು ಮೊದಲು ಉಪಾಧ್ಯಕ್ಷರಾಗುತ್ತಾರೆ ಎಂಬುದು ನಿರ್ಧಾರಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಶಾಸಕರು ತಿಳಿಸಿದ್ದಾರೆ ಎನ್ನಲಾಗಿದೆ.

 

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next