ನಟ ಚರಣ್ ರಾಜ್ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ, ಮೆಚ್ಚುಗೆ ಪಡೆದಿದ್ದಾರೆ. ಈಗ ಅವರ ಪುತ್ರ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಅದು “ಶ್ರೀ ಭರತ ಬಾಹುಬಲಿ’ ಚಿತ್ರದ ಮೂಲಕ. ಹೌದು, ಮಂಜು ಮಾಂಡವ್ಯ ನಿರ್ದೇಶನದ “ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ಚರಣ್ ರಾಜ್ ಪುತ್ರ ತೇಜ್ ನಟಿಸಿದ್ದಾರೆ. ಹಾಗಂತ ಹೀರೋ ಆಗಿಯಲ್ಲ, ಬದಲಾಗಿ ಇಡೀ ಸಿನಿಮಾದಲ್ಲಿ ಹೈಲೈಟ್ ಆಗುವಂತಹ ಪಾತ್ರವೊಂದರಲ್ಲಿ.
ಅದು ಬಾಹುಬಲಿ ಪಾತ್ರ. ಚಿತ್ರದಲ್ಲಿ ಬರುವ ಬಾಹುಬಲಿ ಎಂಬ ಪಾತ್ರಕ್ಕೆ ಕಟ್ಟುಮಸ್ತಾದ ನಟನೊಬ್ಬನನ್ನು ಹುಡುಕುತ್ತಿದ್ದ ಮಂಜು ಮಾಂಡವ್ಯ ಅವರಿಗೆ ತೇಜ್ ಕಣ್ಣಿಗೆ ಬಿದ್ದಿದ್ದಾರೆ. ನೇರವಾಗಿ ಚರಣ್ ರಾಜ್ ಅವರನ್ನು ಕೇಳಿದ್ದಾರೆ. ಚರಣ್ ರಾಜ್ ಕೂಡಾ ಖುಷಿಯಿಂದ ಮಗನನ್ನು ಸೆಟ್‌ಗೆ ಕಳುಹಿಸಿದ್ದಾರೆ. ತೇಜ್ ಈಗಾಗಲೇ ತಮಿಳಿನಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅನೇಕ ದಿನಗಳಿಂದ ಕನ್ನಡದಲ್ಲಿ ಲಾಂಚ್ ಆಗುತ್ತಿದ್ದಾರೆಂಬ ಸುದ್ದಿ ಇತ್ತಾದರೂ ಅದು ಸಾಧ್ಯವಾಗಿರಲಿಲ್ಲ.
ಈಗ “ಶ್ರೀ ಭರತ ಬಾಹುಬಲಿ’ ಸಿನಿಮಾ ಮೂಲಕ ಲಾಂಚ್ ಆಗಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಮಂಜು ಮಾಂಡವ್ಯ, “ಚಿತ್ರದಲ್ಲಿ ತೇಜ್ ಅವರ ಪಾತ್ರ ಕೆಲವೇ ನಿಮಿಷ ಬಂದರೂ ತುಂಬಾ ಪವರ್‌ಫುಲ್ ಆಗಿದೆ. ಆ ಪಾತ್ರಕ್ಕೆ ಸಾಕಷ್ಟು ಸಿದ್ಧತೆ ಬೇಕಿತ್ತು. ಅದನ್ನು ತೇಜ್ ಮಾಡಿದ್ದಾರೆ. ಸಿನಿಮಾ ನೋಡಿದ ಮೇಲೆ ಅವರ ಪಾತ್ರದ ಮಹತ್ವ ಗೊತ್ತಾಗುತ್ತದೆ’ ಎನ್ನುತ್ತಾರೆ. ಚರಣ್ ರಾಜ್ ಕೂಡಾ ತಮ್ಮ ಮಗ ಕನ್ನಡದಲ್ಲಿ ಲಾಂಚ್ ಆಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ತೇಜ್, ತಮ್ಮ ತಂದೆಗೆ ನೀಡಿದ ಪ್ರೋತ್ಸಾಹವನ್ನೇ ತಮಗೆ ನೀಡುವಂತೆ ಕೇಳಿಕೊಂಡರು. ಅಂದಹಾಗೆ, ಈ ಚಿತ್ರ ಜನವರಿ 17 ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಐಶ್ವರ್ಯಾ ಫಿಲಂಸ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ಪ್ರಮೋಶನ್‌ಗೆ ಚಿತ್ರತಂಡ ಒಂದು ಕೋಟಿ ರೂಪಾಯಿ ಮೀಸಲಿರಿಸಿದೆ. ಸಿನಿಮಾ ಟಿಕೆಟ್ ಖರೀದಿಸುವವರಿಗೆ ಚಿತ್ರತಂಡ ಒಂದು ಕೂಪನ್ ನೀಡಲಿದೆ.
ಆ ಕೂಪನ್ ಅನ್ನು ಆ ನಂತರ ಲಕ್ಕಿಡ್ರಾ ಮೂಲಕ ತೆಗೆಯಲಾಗುತ್ತದೆ. ಅದರಲ್ಲಿ ಆಯ್ಕೆಯಾದವರಿಗೆ ಒಂದು ಕೋಟಿ ರೂಪಾಯಿಯ ಬಹುಮಾನ ನೀಡಲಾಗುತ್ತದೆ. ಈ ಬಹುಮಾನ ಕಾರು ಹಾಗೂ ಚಿನ್ನವನ್ನು ಒಳಗೊಂಡಿದೆ. ಅಂದಹಾಗೆ, ಈ ಆಫರ್ ಸಿನಿಮಾ ಬಿಡುಗಡೆಯಾಗಿ ಕೇವಲ ಎರಡು ವಾರಕ್ಕಷ್ಟೇ ಸೀಮಿತ. ಈಗಾಗಲೇ ಚಿತ್ರತಂಡ 80 ಲಕ್ಷ ಕೂಪನ್‌ಗಳನ್ನು ಮುದ್ರಿಸಿದೆ. ಚಿತ್ರಮಂದಿರಗಳ ಟಿಕೆಟ್ ಜೊತೆಗೆ ಇದು ದೊರೆಯಲಿದೆ.