Advertisement

ಟಗರು ಸವಾಲು ಗೆದ್ದ ಚರಣ್‌ರಾಜ್‌

11:51 AM Jun 03, 2018 | |

ಶಿವರಾಜಕುಮಾರ್‌ ಅವರ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇಂದು ಚಿತ್ರತಂಡ ಸಂತೋಷ್‌ ಚಿತ್ರಮಂದಿರದಲ್ಲಿ ಶತದಿನವನ್ನು ಸಂಭ್ರಮಿಸುತ್ತಿದೆ. ಚಿತ್ರದ ಗೆಲುವಿನಲ್ಲಿ ಹಾಡುಗಳ ಪಾತ್ರ ಕೂಡಾ ಮಹತ್ವದ್ದಾಗಿದೆ. “ಟಗರು’ ಚಿತ್ರದ ಹಾಡುಗಳು ಇನ್ನಿಲ್ಲದಂತೆ ಹಿಟ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಚಿತ್ರಕ್ಕೆ ಸಂಗೀತ ನೀಡಿದವರು ಚರಣ್‌ರಾಜ್‌.  

Advertisement

ಚರಣ್‌ರಾಜ್‌ಗೂ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಆದರೆ, ಈ ಚಿತ್ರಕ್ಕೆ ಸಂಗೀತ ನೀಡೋದು ಒಂದು ಸವಾಲಿನ ಕೆಲಸವಾಗಿತ್ತಂತೆ. “ಟಗರು ಚಿತ್ರ ನನಗೆ ಒಳ್ಳೆಯ ಅನುಭವ ನೀಡಿತು. ಸೂರಿಯವರೊಂದಿಗೆ ಕೆಲಸ ಮಾಡಿದ ಕ್ಷಣಗಳು ಕೂಡಾ ಅದ್ಭುತ. ಅವರ ಆಲೋಚನೆಗಳು, ಸಂಗೀತದ ಬಗೆಗಿನ ಅವರ ಪ್ರೀತಿ, ಅವರು ಬೆಂಬಲಿಸುವ ರೀತಿಯಿಂದ ಒಳ್ಳೆಯ ಹಾಡುಗಳನ್ನು ನೀಡಲು ಸಾಧ್ಯವಾಯಿತು’ ಎಂದು “ಟಗರು’ ಕ್ಷಣಗಳನ್ನು ಮೆಲುಕು ಹಾಕುತ್ತಾರೆ ಚರಣ್‌ರಾಜ್‌.

ಮೊದಲೇ ಹೇಳಿದಂತೆ “ಟಗರು’ ಒಂದು ಸವಾಲಿನ ಕೆಲಸ ಎನ್ನಲು ಚರಣ್‌ರಾಜ್‌ ಮರೆಯುವುದಿಲ್ಲ. “ಸಾಮಾನ್ಯವಾಗಿ ಒಂದು ಸಂದರ್ಭ ಹೇಳಿ, ಅದಕ್ಕೆ ಹಾಡು ಮಾಡಲು ಹೇಳುತ್ತಾರೆ. ಆದರೆ, ಸೂರಿಯವರ ಶೈಲಿ ತುಂಬಾ ವಿಭಿನ್ನ. ಅವರು ಸಿಚುವೇಶನ್‌ ಹೇಳುತ್ತಿರಲಿಲ್ಲ. ಅದರ ಬದಲಾಗಿ ಮನುಷ್ಯ ಭಾವನೆಗಳನ್ನು ಹೇಳಿ, ಅದಕ್ಕೆ ಟ್ಯೂನ್‌ ಮಾಡಲು ಹೇಳುತ್ತಿದ್ದರು.

ಕೋಪ, ಪ್ರೀತಿ, ಬೇಸರ … ಹೀಗೆ ಭಾವನೆಗಳನ್ನು ಹೇಳುತ್ತಿದ್ದರು. ನಿಜಕ್ಕೂ ಅದೊಂದು ಸವಾಲಿನ ಕೆಲಸವಾಗಿತ್ತು. ಕಂಪೋಸ್‌ ಸಮಯದಲ್ಲಿ ಸೂರಿ ಹಾಗೂ ಜಯಂತ್‌ ಕಾಯ್ಕಿಣಿ ಇಬ್ಬರೂ ಜೊತೆಗೇ ಇರುತ್ತಿದ್ದರು. ಇಬ್ಬರು ದಿಗ್ಗಜರ ಮಧ್ಯೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು’ ಎಂದು ಖುಷಿಯಿಂದ ಹೇಳುತ್ತಾರೆ ಚರಣ್‌. ಚರಣ್‌ರಾಜ್‌ ಎಂದರೆ ತುಂಬಾ ಸಾಫ್ಟ್. ಅವರ ಗುಣಕ್ಕೆ ತಕ್ಕಂತೆ ಅವರ ಸಂಗೀತ ಕೂಡಾ ಹೆಚ್ಚು ಮೆಲೋಡಿಯಾಗಿರುತ್ತದೆ,

ಮಾಸ್‌ ಸಾಂಗ್‌ಗಳನ್ನು ಅವರು ಮಾಡೋದಿಲ್ಲ ಎಂಬ ಭಾವನೆ ಅನೇಕರಲ್ಲಿತ್ತಂತೆ. ಆದರೆ, “ಟಗರು’ ಮೂಲಕ ಆ ಬ್ರಾಂಡ್‌ನಿಂದ ಹೊರಬಂದರಂತೆ. ಚರಣ್‌ರಾಜ್‌ ಕೂಡಾ ಪಕ್ಕಾ ಮಾಸ್‌, ಟಪ್ಪಾಂಗುಚ್ಚಿ ಹಾಡುಗಳನ್ನು ಮಾಡುತ್ತಾರೆಂಬುದನ್ನು “ಟಗರು’ ತೋರಿಸಿಕೊಡುವ ಮೂಲಕ ಬ್ರಾಂಡ್‌ ಆಗುವ ಅಪಾಯದಿಂದ ತಪ್ಪಿದರಂತೆ ಚರಣ್‌ರಾಜ್‌.

Advertisement

ಇನ್ನು, “ಟಗರು’ ಚಿತ್ರದ ಹಾಡುಗಳನ್ನು ಶಿವರಾಜಕುಮಾರ್‌ ಕೂಡಾ ಮೆಚ್ಚುವ ಜೊತೆಗೆ ಚರಣ್‌ರಾಜ್‌ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರಂತೆ. ಇದು ಅವರ ವಿಶ್ವಾಸವನ್ನು ಮತ್ತಷ್ಟು ಹೆಚ್ಚುಗೊಳಿಸಿದ್ದು ಸುಳ್ಳಲ್ಲ. “ಟಗರು’ ನಂತರ ಅದೆಷ್ಟೋ ಸಿನಿಮಂದಿ ಚರಣ್‌ರಾಜ್‌ರಿಂದ ಸಂಗೀತ ಕೊಡಿಸಬೇಕು ಎಂದು ಪ್ರಯತ್ನಿಸಿದ್ದರು. ಆದರೆ, ಚರಣ್‌ರಾಜ್‌ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ. ತಮ್ಮ ಪಾಡಿಗೆ ತಾವು ಒಪ್ಪಿಕೊಂಡ ಸಿನಿಮಾಗಳ ಕೆಲಸದಲ್ಲಿ ಬಿಝಿಯಾಗಿದ್ದರು.

ಹಾಗಾದರೆ ಚರಣ್‌ಗೆ ಹೆಚ್ಚು ಸಿನಿಮಾ ಮಾಡುವ ಆಸೆ ಇಲ್ಲವೇ ಎಂದು ನೀವು ಕೇಳಬಹುದು. “ನನಗೆ ನಾಲ್ಕು ದಿನಕ್ಕೊಂದರಂತೆ ಅವಕಾಶಗಳು ಬರುತ್ತಲೇ ಇರುತ್ತವೆ. ಅವಕಾಶಗಳು ಬಂತೆಂಬ ಕಾರಣಕ್ಕೆ ಎಲ್ಲವನ್ನು ಒಪ್ಪಿಕೊಂಡರೆ ಯಾವ ಸಿನಿಮಾಕ್ಕೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ನನಗೆ ತುಂಬಾ ತುರ್ತಾಗಿ ಸಂಗೀತ ಮಾಡಿಕೊಡಲು ಬರೋದಿಲ್ಲ. ಸ್ವಲ್ಪ ತಡವಾದರೂ ನಾನು ಗುಣಮಟ್ಟದ ಹಾಡುಗಳನ್ನು ಕೊಡಬೇಕೆಂದುಕೊಂಡಿದ್ದೇನೆ’ ಎನ್ನುವುದು ಚರಣ್‌ರಾಜ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next