ಗಂಗಾವತಿ: ಎಳ್ಳ ಅಮವಾಸ್ಯೆಯಂದು ಭೂಮಿ ತಾಯಿಗೆ ಚರಗಚೆಲ್ಲಿ ಕೃಷಿಕರು ಸಂಭ್ರಮಿಸುವ ಪವಿತ್ರವಾದ ದಿನವಾಗಿದೆ. ಭೂಮಿ ಸೇರಿ ಪರಿಸರ ಮಾಲಿನ್ಯ ಮಾಡದಂತೆ ಜೀವಿಸಂಕುಲಕ್ಕೆ ಪರಿಸರವನ್ನು ಸ್ವಚ್ಛವಾಗಿಡುವ ಸಂದೇಶ ಚರಗಚೆಲ್ಲುವ ಪದ್ಧತಿಯಾಗಿದೆ ಎಂದು ಹಾಲುಮತ ಮಹಿಳಾ ಮಂಡಲದ ಮುಖಂಡರಾದ ಕೆ.ವರಲಕ್ಷ್ಮಿ ಹೇಳಿದರು.
ಅವರು ತಾಲೂಕಿನ ಕುಂಟೋಜಿ ಗ್ರಾಮದ ರೈತರ ಹೊಲದಲ್ಲಿ ಎಳ್ಳ ಅಮವಾಸ್ಯೆಯಂದು ಭೂಮಿ ತಾಯಿಗೆ ಪೂಜೆ ಚರಗ ಚೆಲ್ಲುವ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ಉತ್ತಮ ಇಳುವರಿ ಕೊಟ್ಟ ಭೂಮಿ ತಾಯಿಗೆ ಧನ್ಯವಾದ ಹೇಳುವ ದಿನವಾಗಿ ಎಳ್ಳಮಾವಾಸ್ಯೆಯನ್ನು ಆಚರಿಸುತ್ತಾರೆ. ಇಂದು ರೈತರು ತಮ್ಮ ಜಮೀನಿನಲ್ಲಿ ಎಲ್ಲೆಡೆ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಈ ಎಳ್ಳು ಹಾಗೂ ಬೆಲ್ಲವು ಜಮೀನಿನಲ್ಲಿರುವ ಹುಳಗಳಿಗೆ ಆಹಾರ ಎಂದೂ ಹೇಳಲಾಗುತ್ತದೆ. ಎರೆಹುಳದಂತವು ಭೂತಾಯಿಯ ಫಲವತ್ತತೆಯನ್ನು ಕಾಪಾಡುತ್ತವೆ. ಅವುಗಳಿಗೆ ಆಹಾರದಂತೆ ಕೂಡಾ ಇದನ್ನು ಚಿಮ್ಮಲಾಗುತ್ತದೆ. ಕೆಲವು ಗದ್ದೆಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ.
ಮತ್ತೆ ಕೆಲವೆಡೆ ಹೊಲದಲ್ಲಿ ನಿಂತಿರುವ ಪೈರುಗಳ ಮಧ್ಯೆ ಬನ್ನಿ ಮರಕ್ಕೆ ಪೂಜೆ ಮಾಡಿ ಭೂಮಿ ತಾಯಿಗೆ ಚೆರಗ ಚೆಲ್ಲಾಗುತ್ತದೆ. ನಂತರ ಬೇಳೆಕಾಳುಗಳು ಹಾಗೂ ಹಸಿರು ಸೊಪ್ಪುಗಳನ್ನು ಬಳಸಿ ಸಸ್ಯಾಹಾರದ ಅಡುಗೆ ತಯಾರಿಸಲಾಗುತ್ತದೆ. ಭಜ್ಜಿ, ಪುಂಡಿ, ಚಿಕ್ಕಿ, ಬರ್ತಾ, ಜೋವರ್ ಕಡುಬು, ಸಜ್ಜೆ ಕಡುಬು, ಪಾಲಕ್ ಮೆಂತ್ಯೆ ಬಳಸಿದ ತಿಂಡಿಗಳು, ನಾನಾ ಬಗೆಯ ಚಟ್ನಿಗಳು ಎಳ್ಳಮಾವಾಸ್ಯೆಗೆ ವಿಶೇಷವಾಗಿ ತಯಾರಾಗುತ್ತವೆ. ನಂತರ ಎಲ್ಲ ರೈತಾಪಿ ವರ್ಗದವರು ಕುಟುಂಬ ಸಮೇತರಾಗಿ ಬಂಡಿಗಳಲ್ಲಿ ಸಂಭ್ರಮದಿಂದ ಹೊಲ ಗದ್ದೆ ತೋಟಗಳಿಗೆ ಹೋಗಿ ಒಟ್ಟಾಗಿ ಊಟ ಸವಿಯುತ್ತಾರೆಂದರು.
ಈ ಸಂದರ್ಭದಲ್ಲಿ ಕೃಷಿಕರಾದ ಕೆ.ಲಕ್ಷ್ಮಿಗೌಡರ್, ಅಶೋಕಗೌಡ, ನೀಲಕಂಠಪ್ಪ, ಪರಶುರಾಮ ಇಟಗಿ ಸೇರಿ ಕುಂಟೋಜಿ ಗ್ರಾಮದ ರೈತರಿದ್ದರು.