Advertisement

ಅಕ್ಷರ ಕ್ರಾಂತಿಯ ದೇಗುಲ ತರಕಾರಿ ಕೃಷಿಗೂ ಮಾದರಿ 

03:46 PM Nov 27, 2017 | |

ಬಂಟ್ವಾಳ: ಮೂಡನಡುಗೋಡು ಗ್ರಾಮ ದಡ್ಡಲಕಾಡು ಹಿ.ಪ್ರಾ.ಶಾಲೆಯಲ್ಲಿ ಅಕ್ಷರ ಕ್ರಾಂತಿಯ ದೇಗುಲವಾಗಿ, ಕೃಷಿ ಅನುಭವದ ಶಿಕ್ಷಣದ ಮೂಲಕ ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದೆ. ಇಲ್ಲಿನ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷ ಪ್ರಕಾಶ ಅಂಚನ್‌ ನೇತೃತ್ವದಲ್ಲಿ ಏಕ ರೂಪದ ಶಿಕ್ಷಣ
ಅನುಷ್ಠಾನಕ್ಕೆ ಪ್ರಯತ್ನ ನಡೆಯುತ್ತಿದೆ.

Advertisement

ಮೂರು ವರ್ಷದ ಹಿಂದೆ ಕೇವಲ 30 ಮಕ್ಕಳಷ್ಟೆ ಶಾಲೆಯಲ್ಲಿದ್ದು ಮುಚ್ಚುಗಡೆ ಭೀತಿ ಎದುರಿಸುತ್ತಿದ್ದ ಶಾಲೆ ಹೊಸ ಏಕರೂಪದ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಮೂಲಕ ದಾಖಲೆಯ 350ಕ್ಕೂ ಮಿಕ್ಕಿದ ವಿದ್ಯಾರ್ಥಿಗಳನ್ನು ಕೇವಲ 2 ವರ್ಷಗಳಲ್ಲಿ ಶಾಲೆಗೆ ಸೇರ್ಪಡೆ ಮಾಡಿಕೊಂಡಿದೆ.

ಏನಿದು ಶಿಕ್ಷಣ ಕ್ರಾಂತಿ?
ಈ ವ್ಯವಸ್ಥೆಯಲ್ಲಿ ಕೃಷಿಯನ್ನು ಕೂಡ ಅಳವಡಿಸುವ ಮೂಲಕ ಹೊಸ ಚಿಂತನೆ‌ ಮಕ್ಕಳಲ್ಲಿ ಪ್ರೇರೇಪಿಸಲಾಗುತ್ತಿದೆ. ಭಾರñದಲ್ಲಿ ಮುಂದಿನ ಕಾಲಘಟ್ಟದಲ್ಲಿ ಕೃಷಿ ಪೂರಕ ಉದ್ಯೋಗದ ದೊಡ್ಡ ಅವಕಾಶ ಕಂಡುಕೊಂಡಿರುವ ವಿದೇಶಿ ಕಂಪೆನಿಗಳು ಸದ್ದಿಲ್ಲದೆ ಬರುತ್ತಿವೆ. ಇಲ್ಲಿಯ ಮಕ್ಕಳು ಅಂತಹ ಅವಕಾಶದಿಂದ ವಂಚಿತರಾಗಬಾರದು ಎಂಬುದಕ್ಕಾಗಿ ಕೃಷಿ ಜ್ಞಾನ ಸಮ್ಮಿಳಿತ ಏಕರೂಪದ ಶಿಕ್ಷಣಕ್ಕೆ ಇಲ್ಲಿಂದ ನಾಂದಿ ಹಾಡಲಾಗಿದೆ.

ಬಿಸಿಯೂಟಕ್ಕೆ ಸ್ವಂತ ತರಕಾರಿ
ಶಾಲಾ ಮಕ್ಕಳಿಗೆ ದಿನಂಪ್ರತಿ ಬೇಕಾದ ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲಾ ಜಮೀನಿನಲ್ಲಿ ಬೆಳೆಸುತ್ತಿರುವ ಸ್ವಂತ ತರಕಾರಿಯನ್ನೇ ಬಳಸುತ್ತಿದ್ದಾರೆ. ಬಸಳೆ, ಬೆಂಡೆ, ಬದನೆ, ಅಲಸಂಡೆ, ತೊಂಡೆ ಕಾಯಿಗಳನ್ನು ಬೆಳೆಸಲಾಗುತ್ತಿದೆ. ಎಲ್ಲವನ್ನೂ ವಿದ್ಯಾರ್ಥಿಗಳ ಅಗತ್ಯಕ್ಕೆ ಬಳಸುವ ರೀತಿಯಲ್ಲಿ ಅದನ್ನು ನಿರ್ವಹಿಸಲಾಗುತ್ತದೆ.

ಸಾವಯವ ಗೊಬ್ಬರ
ಇಲ್ಲಿ ನೆಲಗಡಲೆ ಹಿಂಡಿ, ಸೆಗಣಿಯನ್ನು ಕಲಸಿ ಮಾಡಿದ ಸಾವಯವ ಗೊಬ್ಬರ ಬಳಸಲಾಗುತ್ತಿದೆ. ಶಾಲಾ ಮಕ್ಕಳು ಕೈಕಾಲು ಮುಖ ತೊಳೆಯುವ ನೀರನ್ನು ತರಕಾರಿ ಕೃಷಿಗೆ ಹಾಯುವಂತೆ ಮಾಡಲಾಗಿದೆ. ತರಕಾರಿಯ ಮೂರು ತಿಂಗಳ ಫಸಲನ್ನು ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಅಂಗಡಿಯಿಂದ ತರುವ ತರಕಾರಿಗಿಂತ ಸಹಸ್ರ ಪಾಲು ಹೆಚ್ಚು ಸ್ವಾದಿಷ್ಟ ಇದೆ ಎಂದು ಮುಖ್ಯ ಶಿಕ್ಷಕರು ಹೇಳುತ್ತಾರೆ.

Advertisement

ಶೈಕ್ಷಣಿಕ ಕ್ರಾಂತಿ
ದಡ್ಡಲಕಾಡು ಹಿ.ಪ್ರಾ. ಶಾಲೆ ಉನ್ನತೀಕರಿಸಿದ ಸರಕಾರಿ ಶಾಲೆಯಾಗಿದ್ದು ಇಂದು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯ,ರಾಷ್ಟದಲ್ಲೂ ತನ್ನ ಶೈಕ್ಷಣಿಕ ಕ್ರಾಂತಿ ಉದ್ದೇಶಕ್ಕಾಗಿ ಹೆಸರು ಗಳಿಸಿದೆ. ಜಿಲ್ಲೆಯಲ್ಲಿ ಅನೇಕ ಸರಕಾರಿ ಶಾಲೆಗಳು ಶಾಲಾಭಿವೃದ್ಧಿ ಸಮಿತಿ, ದತ್ತು ಸ್ವೀಕಾರ ಸಮಿತಿ ಮೂಲಕ ಸ್ವಾವಲಂಬಿಯಾಗಿ ಕೆಲಸ ಮಾಡುತ್ತಿವೆ. ಅವುಗಳಲ್ಲಿ ದಡ್ಡಲಕಾಡು ಶಾಲೆಗೆ ವಿಶೇಷವಾದ ಹೆಸರಿದೆ. ಖಾಸಗಿ ಸಹಭಾಗಿತ್ವದಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ
ಶಾಲೆಗೆ ಅತ್ಯಂತ ಆಧುನಿಕ ಮಾದರಿ, ನೆಲಕ್ಕೆ ಗ್ರಾನೈಟ್‌ ಹಾಸಿದ 20 ಸಾವಿರ ಚದರಡಿಯ ನೆಲ, ತಳ ಅಂತಸ್ತುಗಳನ್ನು, ಪ್ರಥಮ ಅಂತಸ್ತನ್ನು ಹೊಂದಿರುವ ಗ್ರಾಮಾಂತರ ಪ್ರದೇಶದ ಪ್ರಥಮ ಶಾಲೆಯಾಗಿದೆ. 

1.50 ಕೋ.ರೂ. ವೆಚ್ಚದ ಕಟ್ಟಡ
ಮೂರು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ 30ಕ್ಕೆ ಇಳಿದಿತ್ತು. ಶಾಲೆಯ ಕಟ್ಟಡ ಹಳೆಯದಾಗಿತ್ತು. ದುರ್ಗಾ ಫ್ರೆಂಡ್ಸ್‌ ಕ್ಲಬ್‌ ಶಾಲೆಯನ್ನು ದತ್ತು ಪಡೆದು 1.50 ಕೋ.ರೂ. ವೆಚ್ಚದಿಂದ ನೂತನ ಕಟ್ಟಡ ನಿರ್ಮಿಸಿದೆ. ಪ್ರಸ್ತುತ ನಮ್ಮಲ್ಲಿ 350ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಮೌರಿಸ್‌ ಡಿ’ಸೋಜಾ, ಶಾಲಾ
  ಮುಖ್ಯ ಶಿಕ್ಷಕರು

ಅನೇಕ ಸರಕಾರಿ ಶಾಲೆಗಳಲ್ಲಿ ತರಕಾರಿ ಮಾಡಲು ಸಾಕಷ್ಟು ಜಮೀನಿದೆ. ಆದರೆ ಶಿಕ್ಷಕರು,  ಆಡಳಿತ ಮಂಡಳಿಗೆ ಯೋಜನೆ ಇರುವುದಿಲ್ಲ. ನಮ್ಮಲ್ಲಿ ಶಾಲೆಗೆ ಬೇಕಾಗುವಷ್ಟು ತರಕಾರಿ ಬೆಳೆಯುತ್ತಿದ್ದೇವೆ. ಮುಂದಿನ ವರ್ಷಕ್ಕೆ ಐನೂರು ವಿದ್ಯಾರ್ಥಿಗಳನ್ನು ಹೊಂದುವ ಗುರಿ ಹೊಂದಿದ್ದೇವೆ.
–  ಪ್ರಕಾಶ್‌ ಅಂಚನ್‌, ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next