Advertisement

ದಸರಾ ಬಳಿಕ ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ

11:56 AM Sep 13, 2017 | Team Udayavani |

ಮೈಸೂರು: ಎರಡೂವರೆ ದಶಕಗಳ ನಂತರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಅಕ್ಷರ ಜಾತ್ರೆ ಮೇಳೈಸಲಿದೆ. 2016ರ ಡಿಸೆಂಬರ್‌ನಲ್ಲಿ ರಾಯಚೂರಿನಲ್ಲಿ ನಡೆದ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಮಲ್ಲಿಗೆ ನಗರಿ ಮೈಸೂರಿನಲ್ಲಿ ಎಂದು ನಿರ್ಣಯ ಕೈಗೊಳ್ಳಲಾಗಿತ್ತು.

Advertisement

ಅದರ ಬೆನ್ನಲ್ಲೇ ನಾಡಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ಮೈಸೂರಿನಲ್ಲಿ 83ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್‌ನ ಮೈಸೂರು ಜಿಲ್ಲಾ ಘಟಕ ಉತ್ಸುಕವಾಗಿತ್ತು. ಒಂದೆರಡು ಬಾರಿ ಪೂರ್ವಭಾವಿ ಸಭೆಯನ್ನೂ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರೊಂದಿಗೂ ಚರ್ಚಿಸಿದ್ದಲ್ಲದೆ, ನಗರದಲ್ಲಿರುವ ಹಿರಿಯ ಸಾಹಿತಿಗಳು ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರೊಂದಿಗೂ ಚರ್ಚಿಸಿ ಅವರ ಅಭಿಪ್ರಾಯ ಕಲೆಹಾಕಲಾಗಿತ್ತು.

ಇದಕ್ಕೆ ಪೂರಕವಾಗಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರೂ ಒಂದೆರಡು ಬಾರಿ ಮೈಸೂರಿಗೆ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಆದರೆ, ದಸರೆಗೂ ಮುಂಚೆ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದರೆ ಮಳೆಗಾಲ ಜತೆಗೆ ನವೆಂಬರ್‌ನಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಹಲವು ಕಾರಣಗಳಿಂದಾಗಿ ದಸರೆ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು.

ಇದೀಗ ದಸರಾ ಮುಗಿದ ಬೆನ್ನಲ್ಲೇ ನವೆಂಬರ್‌ 24,25,26 ಈ ಮೂರು ದಿನಗಳ ಕಾಲ ಮೈಸೂರಿನಲ್ಲಿ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಸಮಿತಿ ದಿನಾಂಕ ನಿಗದಿಪಡಿಸಲಾಗಿದೆ. ಹೀಗಾಗಿ ಕಸಾಪ ಜಿಲ್ಲಾ ಘಟಕದಲ್ಲಿ ಚಟುವಟಿಕೆಗಳು ಗರಿಗೆದರಿವೆ.

Advertisement

Udayavani is now on Telegram. Click here to join our channel and stay updated with the latest news.

Next