Advertisement

ಮೊಬೈಲ್‌ ಗೀಳಿನಿಂದ ಅಕ್ಷರ ಸಂಸ್ಕೃತಿ ನಾಶ

06:43 AM Jan 29, 2019 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಕಂಪ್ಯೂಟರ್‌,ಟಿ.ವಿ. ಹಾಗೂ ಮೊಬೈಲ್‌ ಸಂಸ್ಕೃತಿಯಲ್ಲಿ ಮುಳುಗಿ ಹೋಗಿದು,ª ಅಕ್ಷರ ಸಂಸ್ಕೃತಿಯಿಂದ ದೂರವಾಗುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್‌ ನಿಸಾರ್‌ ಅಹಮದ್‌ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ನಯನ ಸಭಾಂಗಣದಲ್ಲಿ ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದ್ದ “ವಾರ್ಷಿಕ ಪ್ರಶಸ್ತಿ ಮತ್ತು ಬಹುಮಾನ’, ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊಬೈಲ್‌ ಸಂಸ್ಕೃತಿಯಿಂದ ಹೊರ ಬರುವಂತೆ ಯುವ ಸಮುದಾಯದಲ್ಲಿ ಮನವಿ ಮಾಡಿದರು. ಕನ್ನಡ ಲಿಪಿ ವಿಶ್ವದಲ್ಲೇ ಶ್ರೇಷ್ಠ ಲಿಪಿಯಾಗಿದ್ದು, ಈ ಲಿಪಿಯಿಂದ ಮತ್ತಷ್ಟು ಉತ್ಕೃಷ್ಟ ಪುಸ್ತಕಗಳು ಹೊರಹೊಮ್ಮಲಿ.

ಆ ಮೂಲಕ ಕನ್ನಡ ಸಾಹಿತ್ಯ ಓದುಗರ ಸಂಖ್ಯೆಯು ಮತ್ತಷ್ಟು ಅಧಿಕಗೊಳ್ಳಲಿ ಎಂದು ಆಶಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಒಂದು ಪುಸ್ತಕ ಅತ್ಯುತ್ತಮವಾಗಿ ಮೂಡಿ ಬರುವಲ್ಲಿ ಮುದ್ರಕರ ಪಾತ್ರವೂ ಹಿರಿದಾಗಿದ್ದು, ಅವರನ್ನು ಪ್ರಾಧಿಕಾರ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಖುಷಿ ಪಡುವ ವಿಚಾರ.ಇಂತಹ ಕಾರ್ಯಗಳು ಮತ್ತಷ್ಟು ನಡೆಯಲಿ ಎಂದರು.

ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರ ಭೂಪತಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಾಶಕರು, ಲೇಖಕರಿಗೆ ಸೇತುವೆ ಯಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಸುಮಾರು 542 ಪುಸ್ತಕ ಮುದ್ರಣ ಮಾಡಲಾಗಿದ್ದು, ಮಾರಾಟಕ್ಕೆ ಲಭ್ಯವಿದೆ. ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಚೊಚ್ಚಲ ಪುಸ್ತಕ ಪ್ರಕಟಣೆ ಮಾಡುತ್ತಾ. ಯುವ ಲೇಖಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಾಧಿಕಾರದ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹೊರನಾಡಿನ ಲೇಖಕರಿಗೆ ಮತ್ತು ಪ್ರಕಾಶಕರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಜತಗೆ ಪ್ರಾಧಿಕಾರದ ಜಾಲತಾಣ ಉನ್ನತಿಕರಿಸಲಾಗಿದೆ ಎಂದು ತಿಳಿಸಿದರು. ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಮರಳಸಿದ್ಧಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

ವಾರ್ಷಿಕ ಬಹುಮಾನ: ಛಾಯಾಗ್ರಹಕ ವಿಶ್ವನಾಥ್‌ ಸುವರ್ಣ ಅವರ “ಕರುನಾಡ ಕೋಟೆಗಳ ಸುವರ್ಣ ನೋಟ’ ಪುಸ್ತಕ ಕ್ಕೆ ಪುಸ್ತಕ ಸೊಗಸು ಮೊದಲ ಬಹುಮಾನ, ಡಾ. ಎಸ್‌.ಗುರುಮೂರ್ತಿ ಅವರ “ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌’ ಪುಸ್ತಕಕ್ಕೆ ಎರಡನೇ ಬಹುಮಾನ, ಡಾ.ಚೆನ್ನವೀರೇಗೌಡ ಅವರ “ಬಾಬಾ ಸಾಹೇಬರೆಡೆಗೆ ಖರ್ಗೆ ಜೀವನ ಕಥನ’ಕ್ಕೆ ಮೂರನೇ ಬಹುಮಾನ, ಶ್ರೀ ಬಾಗೂರು ಮಾರ್ಕಂಡೇಯ ಅವರ “ಪುಟ್ಟಿಯ ಗಿರಗಟ್ಟೆ’ ಪುಸ್ತಕಕ್ಕೆ “ಮಕ್ಕಳ ಪುಸ್ತಕ ಸೊಗಸು’ ಬಹುಮಾನ ನೀಡಲಾಯಿತು.

ಸ್ವಾನ್‌ ಪ್ರಿಂಟರ್ನ ಎಂ.ಕೃಷ್ಣ ಮೂರ್ತಿ ಅವರಿಗೆ ಡಾ.ಶಿವಮೂರ್ತಿ ಮುರುಘಾ ಶರಣರ ಸಂಪಾದನೆಯ ವಚನ ಮಾರ್ಗ ಕೃತಿಗೆ “ಮುದ್ರಣ ಸೊಗಸು’ ಬಹುಮಾನ, ಕಾದಂಬಿನಿ ಅವರ “ಹಲಗೆ ಮತ್ತು ಮೆದುಬೆರಳು’ ಕೃತಿಗೆ ಕಲಾವಿದ ಗಿರಿಧರ ಕಾರ್ಕಳ ಅವರಿಗೆ “ಮುಖಪುಟ ಚಿತ್ರಕಲೆ’ ಬಹುಮಾನ ಹಾಗೂ ಡಾ.ಎಚ್‌.ಎಸ್‌.ಅನುಪಮಾ ಅವರ “ಕರಿ ಕಣಗಿಲ’ ಕೃತಿಗೆ’ ಅರುಣ್‌ ಕುಮಾರ್‌ ಹಾಗೂ ಡಾ.ಕೃಷ್ಣ ಗಿಳಿಯಾರ್‌ಗೆ “ಮುಖಪುಟ ಚಿತ್ರ ವಿನ್ಯಾಸ’ ಬಹುಮಾನ ಪ್ರದಾನ ಮಾಡಲಾಯಿತು.

2017ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಜಯದೇವ ಮೈ ಮೆಣಸಗಿ ಅವರಿಗೆ, ಷ.ಶೆಟ್ಟರ್‌ಗೆ “ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’, ನ.ರವಿಕುಮಾರ್‌ ಅವರಿಗೆ “ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’, ಡಾ. ಎಚ್‌.ಗಿರಿಜಮ್ಮ ಅವರಿಗೆ “ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next