Advertisement
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ದಳಪತಿಗಳು ಕಾಂಗ್ರೆಸ್‌ಗೆ ಶಾಕ್ ನೀಡಿದ್ದು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಬೇಕಿದ್ದ ಪ್ರಬಲ ಟಿಕೆಟ್ ಆಕಾಂಕ್ಷಿ, ಸಂಭಾವ್ಯ ಅಭ್ಯರ್ಥಿಯನ್ನು ಹೈಜಾಕ್ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಡಿ.ಕೆ. ಸಹೋದರರ ಲೆಕ್ಕಾಚಾರ ಉಲ್ಟಾಪಲ್ಟಾ ಮಾಡಿರುವ ಹಿನ್ನೆಲೆ, ಇದೀಗ ಚನ್ನಪಟ್ಟಣ ಕಾಂಗ್ರೆಸ್‌ನಲ್ಲಿ ಸೂಕ್ತ ಅಭ್ಯರ್ಥಿಯನ್ನು ಹುಡುಕುವ ಕಸರತ್ತು ನಡೆದಿದೆ.
Related Articles
Advertisement
ಮೂರು ದಿನಗಳ ಅವಧಿಯಲ್ಲಿ ಎಲ್ಲರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರವನ್ನು ಸಂಸದ ಸುರೇಶ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗೊಂದಲದ ಗೂಡಾದ ಕಾಂಗ್ರೆಸ್ ನಡೆ! : ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಯೇ ಇಲ್ಲ. ಕಳೆದ ಬಾರಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಈ ಬಾರಿ ಉದ್ಯಮಿ ಪ್ರಸನ್ನಗೌಡ ಅವರಿಗೆ ಟಿಕೆಟ್ ಬಹುತೇಕ ಖಾತ್ರಿಯಾಗಿತ್ತು. ಆದರೆ, ಅವರು ಜೆಡಿಎಸ್‌ಗೆ ಸೇರಿದ್ದರಿಂದ ಕಾಂಗ್ರೆಸ್‌ಗೆ ಚನ್ನಪಟ್ಟಣ ಮತ್ತೆ ತಲೆನೋವಾಗಿದೆ. ಈಗಲ್‌ಟನ್ ರೆರ್ಸಾಟ್‌ನಲ್ಲಿ ಮೂರು ದಿನದ ಹಿಂದಷ್ಟೆ ಗೌಪ್ಯ ಸಭೆ ನಡೆದಿತ್ತು. ಅಲ್ಲಿ ಕುಮಾರಸ್ವಾಮಿ ಅವರನ್ನು ಮಣಿಸಲು ಕಾಂಗ್ರೆಸ್‌ನಿಂದ ಗಟ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎನ್ನುವ ಪ್ಲಾನ್ ಅನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಕ್ಷೇತ್ರದಲ್ಲಿ ಹರಿದಾಡುತ್ತಿದ್ದು, ಅದೇ ಕಾರಣಕ್ಕೆ ಮೊದಲ ಪಟ್ಟಿಯಲ್ಲಿ ಚನ್ನಪಟ್ಟಣಕ್ಕೆ ಅಭ್ಯರ್ಥಿಯನ್ನು “ಕೈ’ ನಾಯಕರು ಘೋಷಿಸಿಲ್ಲ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ನಟಿ ರಮ್ಯಾ ಸಹ ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದ್ದು, ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ನಡೆ ಗೊಂದಲದ ಗೂಡಾಗಿದೆ.
ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕರಿಗೆ ಅವಕಾಶ : ಪ್ರಸನ್ನಗೌಡ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಡಿ.ಕೆ.ಸುರೇಶ್, ಇದೊಂದು ನಿರೀಕ್ಷಿತ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಅವಕಾಶ ನೀಡಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಯಾರು ಕೆಲಸ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಕೆಲವರಿಗೆ ಆತುರ ಇರುತ್ತದೆ. ಅಂತಹವರಿಗೆ ಏನು ಮಾಡಲು ಆಗಲ್ಲ. ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಇನ್ನೂ 6, 7 ಜನ ಆಕಾಂಕ್ಷಿಗಳು ಇದ್ದಾರೆ. ಕಾರ್ಯಕರ್ತರು, ಮುಖಂಡರ ಜೊತೆ ಕುಳಿತು ಮಾತನಾಡಿ ನಿರ್ಧಾರ ಮಾಡುತ್ತೇವೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಯಾರು ಕೆಲಸ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಕೆಲವರಿಗೆ ಆತುರ ಇರುತ್ತದೆ. ಅಂತಹವರಿಗೆ ಏನು ಮಾಡಲು ಆಗಲ್ಲ. ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. – ಡಿ.ಕೆ. ಸುರೇಶ್, ಸಂಸದ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಎಂಟು ಜನರ ಪೈಕಿ ನಾನೂ ಕೂಡ ಅರ್ಜಿ ಹಾಕಿದ್ದೇನೆ. ನಾನು ಒಬ್ಬ ಟಿಕೆಟ್ ಆಕಾಂಕ್ಷಿ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಟಿಕೆಟ್ ಸಿಕ್ಕರೆ ಸಂತೋಷ. ಇಲ್ಲದಿದ್ದಲ್ಲಿ ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತೋ ಅವರ ಗೆಲುವಿಗಾಗಿ ಕಾಯಾ ವಾಚಾ ಮನಸಾ ಕೆಲಸ ಮಾಡುತ್ತೇನೆ. – ಡಾ. ಡಿ.ಆರ್. ಭಗತ್ ರಾಮ್, ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಉಪಾಧ್ಯಕ್ಷ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಹಲವಾರು ಮುಖಂಡರು ಆಕಾಂಕ್ಷೆ ಹೊಂದಿದ್ದಾರೆ. ಈಗಾಗಲೇ ನನ್ನನ್ನು ಸೇರಿ ಎಂಟು ಜನರು ಅರ್ಜಿ ಹಾಕಿದ್ದೇವೆ. ಹಲವಾರು ಮುಖಂಡರು ನನ್ನ ಸ್ಪರ್ಧೆಗೆ ಆಗ್ರಹ ಪೂರ್ವ ಒತ್ತಾಯ ಮಾಡುತ್ತಿದ್ದಾರೆ. ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಲ್ಲಿ ಸಂತೋಷ. ಇಲ್ಲದಿದ್ದಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೋ ಅವರ ಗೆಲುವಿಗಾಗಿ ಕೆಲಸ ಮಾಡುತ್ತೇನೆ. – ಚಂದ್ರಸಾಗರ್, ಕಾಂಗ್ರೆಸ್ ಯುವ ಮುಖಂಡ
– ಎಂ. ಶಿವಮಾದು