Advertisement

ನಗರಸಭೆಯಲ್ಲಿ ಕಾಂಚಾಣದ್ದೇ ದರ್ಬಾರು

01:16 PM Sep 12, 2022 | Team Udayavani |

ಚನ್ನಪಟ್ಟಣ: ಇಲ್ಲಿ ಅಧಿಕಾರಿಗಳು ತಾಂತ್ರಿಕ ದೋಷದ ನೆಪ ಹೇಳುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಕೊನೆಗೆ ಮಧ್ಯವರ್ತಿಗಳ ಮೂಲಕ ಕೆಲಸವಾಗುವಷ್ಟರಲ್ಲಿ ಜನರು ಹೈರಾಣಾಗಿ, ಮತ್ತೂಂದು ಬಾರಿ ಕಚೇರಿ ಮೆಟ್ಟಿಲೇರುವುದು ಬೇಡ ಎಂಬ ರಾಗ ಎಳೆಯುತ್ತಾರೆ. ಇದು ಬೊಂಬೆನಗರಿ ಚನ್ನಪಟ್ಟಣ ನಗರಸಭೆಯ ನಿತ್ಯದ ಗೋಳು.

Advertisement

ನಗರಸಭೆಯಲ್ಲಿ ಖಾತೆ, ಕಟ್ಟಡ ನಿರ್ಮಾಣ ಪರವಾನಗಿ ಸೇರಿದಂತೆ ಅಲ್ಲಿ ಲಭ್ಯವಿರುವ ಸವಲತ್ತುಗಳನ್ನು ಪಡೆಯಬೇಕೆಂದರೆ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪಾಲಿಗೆ ನಿತ್ಯದ ನರಕ ಯಾತನೆಯಾಗಿದೆ.

ನಿಯಮಾನುಸಾರ ಖಾತೆ ಸೇರಿ ಅಗತ್ಯ ದಾಖಲೆಗಳಿಗಾಗಿ ಕಚೇರಿಗೆ ಹೋಗುವ ಜನರು ಹಲವು ಬಾರಿ ಸುತ್ತಾಡಿ ಸುಸ್ತಾಗಬೇಕು. ಇಲ್ಲಿನ ನಗರಸಭೆಯಲ್ಲಿ ಮೊದಲಿನಿಂದಲೂ ಉತ್ತಮ ಸೇವೆ ಲಭಿಸುವುದು ತುಂಬಾ ಕಷ್ಟ ಎನ್ನುವುದು ಬಹುತೇಕರ ಮಾತು. ಇದರಲ್ಲಿ ಖಾತೆ, ಕಟ್ಟಡ ನಿರ್ಮಾಣ ಪರವಾನಗಿ ದಾಖಲೆಯು ತಿಂಗಳಾನುಗಟ್ಟಲೇ ಸಿಗುವುದಿಲ್ಲ. ಸರ್ಕಾರಿ ನಿಯಮಗಳಿಗಿಂತಲೂ ಇಲ್ಲಿನ ಸಿಬ್ಬಂದಿ ಹೇಳುವ ಕೆಲ ನಿಯಮಗಳಿಂದಲೇ ತಾಂತ್ರಿಕ ದೋಷ ಉಂಟಾಗಿ ಕೆಲಸಳಾಗುವುದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಇ-ಖಾತೆಯ ಕ್ಯಾತೆ: ಈಗ ಕಡ್ಡಾಯವಾಗಿ ನಿವೇಶನ ಮತ್ತು ಕಟ್ಟಡಗಳಿಗೆ ಇ-ಖಾತೆ ಹೊಂದಿರಬೇಕು. ಆದರೆ, ಇದನ್ನು ನೀಡುವಲ್ಲಿ ಇಲ್ಲಿನ ನಗರಸಭೆಯು ಆಮೆ ನಡೆಗಿಂತಲೂ ನಿಧಾನಗತಿಯ ತತ್ವವನ್ನು ಅನುಸರಿಸುತ್ತಿದೆ. ಜಿಲ್ಲೆಯ ಕೇಂದ್ರ ಸ್ಥಾನ ರಾಮನಗರ ಸ್ಥಳೀಯ ಆಡಳಿತ ಸಂಸ್ಥೆಯ ವ್ಯಾಪ್ತಿಯಲ್ಲಿ ತ್ವರಿತ ವಿತರಣೆ ವ್ಯವಸ್ಥೆ ಇದೆ. ಜತೆಗೆ ಮನೆ ಮನೆಗೆ ತೆರಳಿ ಫ‌ಲಾನುಭವಿಗಳಿಗೆ ಖಾತೆ ವಿತರಣೆಯ ಅಭಿಯಾನ ಕೈಗೊಳ್ಳಲಾಗಿದೆ. ಆದರೆ, ಇಲ್ಲಿ ಮಾತ್ರ ಪೌರಾಡಳಿತ ನಿರ್ದೇಶನಾಲಯದ ನಿಯಮದ ಅಡ್ಡಿ ನೆಪ ಹೇಳಲಾಗುತ್ತಿದೆ. ನಿಯಮಾನುಸಾರ ನಿವೇಶನಗಳಿಗೆ ಯಾವುದೇ ಅಡ್ಡಿ ಇಲ್ಲದೇ ಇ-ಖಾತೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆಯಾದರೂ ವಾಸ್ತವೇ ಬೇರೆ. ಅನುಕಂಪದ ನೌಕರಿ ಗಿಟ್ಟಿಸಿರುವ ಸಿಬ್ಬಂದಿಗಳು ಹಣ ಕೊಟ್ಟ ವರಿಗೆ ಮಾತ್ರ ದಯಪಾಲಿಸುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದೆ.

ಯಾವುದಕ್ಕೂ ಕಿಮ್ಮತ್ತಿಲ್ಲ: ಖಾತೆ ಸೇರಿದಂತೆ ಇನ್ನಿತರ ಸೇವೆಗಾಗಿ ಬರುವ ಜನರು ಇಲ್ಲಿನ ಕೆಲ ಸಿಬ್ಬಂದಿ ಹಣ ನೀಡದವರು ಎಂದು ಸತಾಯಿಸುತ್ತಿದ್ದಾರೆ. ಇನ್ನೂ ಅನೇಕರು ನಗರಸಭೆ ಸದಸ್ಯರು, ಪ್ರಭಾವಿ ನಾಯಕರ ಶಿಫಾರಸ್ಸಿನ ಮೊರೆ ಹೋದರೂ ಪ್ರಯೋಜನವಾಗುತ್ತಿಲ್ಲ. ಮತ್ತೂಂದೆಡೆ ಇ-ಖಾತೆ ಇಲ್ಲದೇ ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಬ್ಯಾಂಕುಗಳಲ್ಲಿ ಸಾಲ ಸಿಗುತ್ತಿಲ್ಲ. ಜತೆಗೆ ನಿಯಮಾನುಸಾರ ನಿವೇಶನಗಳನ್ನು ಮಾರಲು ಸಾಧ್ಯವಾಗುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಸಭೆಯಲ್ಲೂ ಗದ್ದಲ: ಪ್ರತಿ ಸಾಮಾನ್ಯ ಸಭೆಯಲ್ಲಿ ಮುಖ್ಯವಾಗಿ ಇ-ಖಾತೆ ಗೊಂದಲದ ಗಲಾಟೆಯೇ ಹೆಚ್ಚು. ಸ್ವಯಂ ಸದಸ್ಯರೇ ಬಹಿರಂಗವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮೊದಲಿನಿಂದಲೂ ನಗರಸಭೆಯ ಖಾತಾ ಪುಸ್ತಕದಲ್ಲಿ ನಮೂದು, ಆಸ್ತಿಗೆ ಸಾಮಾನ್ಯ ಖಾತೆ ಹೊಂದಿರುವ ಮತ್ತು ತೆರಿಗೆ ಪಾವತಿಸುತ್ತಿರುವವರಿಗೆ ಇ-ಖಾತೆ ವಿತರಿಸಬೇಕು. ಒಂದು ವೇಳೆ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಪೌರಾಯುಕ್ತರು ಜಿಲ್ಲಾ ಯೋಜನಾಧಿಕಾರಿಗಳ ಮೂಲಕ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಅಧಿಕಾರಿ ವರ್ಗ ನಿರ್ಲಕ್ಷ್ಯ: ಖಾತೆ ವಿತರಣೆಗೆ ಸಂಬಂಧಿಸಿದಂತೆ ಅವ್ಯವಸ್ಥೆಗೆ  ಅಸಮಾಧಾನ ವಾಗುತ್ತಿದ್ದರೂ, ಸಹ ಇಲ್ಲಿನ ಪೌರಾಯುಕ್ತರಾಗಲೀ, ಜಿಲ್ಲಾ ಯೋಜನಾಧಿಕಾರಿಗಳಾಗಲೀ, ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಇ-ಖಾತೆ ಆದ್ವಾನದ ಕುರಿತು ಗಮನ ಸೆಳೆಯದಿರುವುದು ಅನುಮಾನ. ನೆರೆಯ ರಾಮನಗರ ಸ್ಥಳೀಯ ಸಂಸ್ಥೆಯು ಮನೆ ಮನೆಗೂ ಇ-ಖಾತೆ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯೋನ್ಮುಖವಾಗಿ, ಜನರ ಅಲೆದಾಟ ತಪ್ಪಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಜನಸ್ನೇಹಿ ಸೇವೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸವನ್ನು 2019ರಲ್ಲಿ ಮಾಡಿರುವುದನ್ನಾದರೂ ಚನ್ನಪಟ್ಟಣ ನಗರಸಭೆ ಪಾಲಿಸುತ್ತಿಲ್ಲ ಎನ್ನುವುದು ಜನರ ಆಕ್ರೋಶಕ್ಕೆ ಮತ್ತೂಂದು ಕಾರಣವಾಗಿದೆ.

ನಗರಸಭೆಯಲ್ಲಿ ಖಾತೆಗಳ ಸಮಸ್ಯೆಗಳ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ. ಶಾಸಕರು ಸೂಚಿಸಿದ್ದರೂ, ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ಜನರನ್ನು ಅಲೆದಾಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು. – ಸಿ.ಜೆ.ಲೋಕೇಶ್‌, ನಗರಸಭೆ ಸದಸ್ಯ

ನಗರಸಭೆಯ ಖಾತಾ ಪುಸ್ತಕದಲ್ಲಿ ನಮೂದು, ಆಸ್ತಿಗೆ ಸಾಮಾನ್ಯ ಖಾತೆ ಹೊಂದಿರುವ ಮತ್ತು ತೆರಿಗೆ ಪಾವತಿಸುತ್ತಿರುವವರಿಗೆ ಇ-ಖಾತೆ ವಿತರಿಸಬೇಕು. ಒಂದು ವೇಳೆ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಪೌರಾಯುಕ್ತರು ಜಿಲ್ಲಾ ಯೋಜನಾಧಿಕಾರಿಗಳ ಮೂಲಕ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. -ವಿವೇಕ್‌ ವೆಂಕಟೇಶ್‌, ಕಾಂಗ್ರೆಸ್‌ ಮುಖಂಡ, ನಗರಸಭೆ ಪರಾಜಿತ ಅಭ್ಯರ್ಥಿ

 

– ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next