Advertisement

ಬಿತ್ತನೆ ಬೀಜ-ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಿ

05:00 PM May 29, 2020 | Naveen |

ಚನ್ನಗಿರಿ: ಮುಂಗಾರು ಪ್ರವೇಶವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಖಾಸಗಿ ಅಂಗಡಿಗಳಲ್ಲಿ ಬೀಜ-ಗೊಬ್ಬರ ಧಾರಣೆಯ ನಾಮಫಲಕ ಹಾಕಬೇಕು. ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದು ಕಂಡುಬಂದಲ್ಲಿ ಅಂಥವರ ಅಂಗಡಿ ಪರವಾನಗಿ ರದ್ದುಗೊಳಿಸುವಂತೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸೂಚಿಸಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಖಾಸಗಿ ಬೀಜ-ರಸಗೊಬ್ಬರ ಮಾರಾಟಗಾರರು ಬಿಲ್‌ ಇಲ್ಲದೇ ವ್ಯವಹಾರ ನಡೆಸುವಂತಿಲ್ಲ. ಕಳಪೆ ಬೀಜಗಳನ್ನು ಹೊರ ಜಿಲ್ಲೆಗಳಿಂದ ತಂದು ಮಾರಾಟ ಮಾಡುತ್ತಿದ್ದರೆ ಅಂತವರಲ್ಲಿ ಜಾಗೃತಿ ಮೂಡಿಸಬೇಕೆಂದರು. ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್‌ ಮಾತನಾಡಿ, ಬೀಜ-ರಸಗೊಬ್ಬರ ಪೂರೈಕೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಲೂಜ್‌ ಬಿತ್ತನೆ ಬೀಜ ಮಾರಾಟ ಕಂಡು ಬಂದರೆ ಅದನ್ನು ಸೀಜ್‌ ಮಾಡಿ ಮಾರಾಟಗಾರರ ಮೇಲೆ ದೂರು ದಾಖಲಿಸಲಾಗುತ್ತದೆ. ಸದ್ಯಕ್ಕೆ ತಾಲೂಕಿನಲ್ಲಿ ಲೂಜ್‌ ಬೀಜ ಮಾರಾಟ ಆಗುತ್ತಿಲ್ಲ ಎಂದರು.

ತಾಪಂ ಸದಸ್ಯ ಶ್ರೀಕಾಂತ್‌ ಮಾತನಾಡಿ, ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ಏಕೆಂದರೆ ಸರ್ಕಾರ ಮೆಕ್ಕೆಜೋಳಕ್ಕೆ 1750 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ ಎಂದರು. ಸರ್ಕಾರದಿಂದ ಸುತ್ತೋಲೆ ಬಂದ ನಂತರ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಕೃಷಿ ಅಧಿಕಾರಿ ಶಿವಕುಮಾರ್‌ ತಿಳಿಸಿದರು. ತಾಪಂ ಸದಸ್ಯ ಹಾಲೇಶ್‌ ನಾಯ್ಕ ಮಾತನಾಡಿ ಆಲೂರಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಡ್ರಿಪ್‌ ಫಿಲ್ಟರ್‌ ಅಳವಡಿಸುವಲ್ಲಿ ಅವ್ಯವಹಾರವನ್ನು ನಡೆಸಿದ್ದಾರೆ. ಕೆಲ ರೈತರು ಡ್ರಿಫ್‌ ಫಿಲ್ಟರ್‌ ಹಾಕಿಸುವುದಿಲ್ಲ. ಅಂತಹ ರೈತರ ತೋಟಗಳಲ್ಲಿ ತೋಟಗಾರಿಕೆ ಅಧಿಕಾರಿಗಳು ತಮ್ಮ ವಾಹನದಲ್ಲಿ ಡ್ರಿಫ್‌ ಫಿಲ್ಟರ್‌ಗಳನ್ನು ತಂದು ತೋಟದಲ್ಲಿ ಅಳವಡಿಸಿ ಜಿಪಿಎಸ್‌ ಫೋಟೋ ತೆಗೆದು ಹಣ ಮಂಜೂರು ಮಾಡಿಕೊಳ್ಳುತ್ತಿದ್ದಾರೆ. ತಕ್ಷಣ ಈ ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ರೋಹಿತ್‌, ಎಲ್ಲಿ ಆ ಘಟನೆ ನಡೆದಿದೆ ತಿಳಿಸಿ. ಅಲ್ಲಿಗೆ ಬಂದು ಪರಿಶೀಲನೆ ನಡೆಸಲಾಗುವುದು ಎಂದರು. ತಾಪಂ ಅಧ್ಯಕ್ಷೆ ಎಸ್‌.ಎಲ್‌. ಉಷಾ ಶಶಿಕುಮಾರ್‌, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೆಂಚಪ್ಪ, ಉಪಾಧ್ಯಕ್ಷೆ ಎಲ್‌. ಗಾಯತ್ರಿ ಅಣ್ಣಯ್ಯ, ಇಒ ಎಂ.ಆರ್‌ ಪ್ರಕಾಶ್‌ ಇದ್ದರು.

ಕೋವಿಡ್ ದೇಣಿಗೆ ವಿಷಯ ಪ್ರಸ್ತಾಪ
ತಾಲೂಕಿನಲ್ಲಿ ಕೋವಿಡ್ ತಡೆಗಾಗಿ ಶಾಸಕರಾದ ನೀವು ಸಾರ್ವಜನಿಕರಿಂದ ದೇಣಿಗೆ ಪಡೆದು ಆಹಾರ ಧಾನ್ಯಗಳ ಕಿಟ್‌ಗಳನ್ನು ಬಡವರಿಗೆ ವಿತರಣೆ ಮಾಡಿದ್ದೀರಿ. ಅದು ಒಳ್ಳೆಯ ಕಾರ್ಯ. ಅದರೆ ಸಾರ್ವಜನಿಕರಿಂದ ಎಷ್ಟು ದೇಣಿಗೆಯ ಹಣವನ್ನು ಸಂಗ್ರಹಿಸಿದ್ದೀರಾ ಎನ್ನುವುದರ ಬಗ್ಗೆ ಮಾಹಿತಿಯನ್ನು ಸಭೆಯಲ್ಲಿ ನೀಡಿ ಎಂದು ತಾಪಂ ಸದಸ್ಯ ಶ್ರೀಕಾಂತ್‌ ಒತ್ತಾಯಿಸಿದರು. ಈ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಶಾಸಕರು, ಇಂತಹ ಪ್ರಶ್ನೆಯನ್ನು ಸಭೆಯಲ್ಲಿ ಕೇಳುವುದು ಸೂಕ್ತವಲ್ಲ ಎಂದರಲ್ಲದೆ ಸಭೆಯಿಂದ ನಿರ್ಗಮಿಸಿದರು.

Advertisement

ಸರ್ಕಾರಿ ಶಾಲಾ ಕಟ್ಟಡ ದುರಸ್ತಿಗೊಳಿಸಿ
ತಾಪಂಗೆ ಈ ಬಾರಿ 17 ಕೋಟಿ ರೂ. ಮಂಜೂರಾಗಿದೆ. ತಾಪಂ ಸದಸ್ಯರು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿ ಅಥವಾ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಆದ್ಯೆ ನೀಡುವಂತೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಲಹೆ ನೀಡಿದರು. ನಾನು ಕೂಡ ಶಾಸಕರ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next