ಚನ್ನಗಿರಿ: ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರಿ ಇರಲ್ಲ. ಅಲ್ಲಿ ಸರಿಯಾದ ಚಿಕಿತ್ಸೆ ಸಿಗೊಲ್ಲ, ಮೂಲ ಸೌಕರ್ಯಗಳು ಇರಲ್ಲ ಎನ್ನುವವರೇ ಹೆಚ್ಚು. ಕೆಲ ಆಸ್ಪತ್ರೆಗಳು ಹೀಗೆ ಇರುವುದೂ ಸತ್ಯ. ಆದರೆ ಚನ್ನಗಿರಿ ತಾಲೂಕಿನ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದಕ್ಕೆ ಅಪವಾದ ಎಂಬಂತಿದೆ.
Advertisement
ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್ಸಿ) ಸ್ವಚ್ಛತೆ, ಗುಣಮಟ್ಟದ ಚಿಕಿತ್ಸೆ ಅಗತ್ಯ ಮೂಲ ಸೌಲಭ್ಯ ಹೀಗೆ ಯಾವುದಕ್ಕೂ ಕೊರತೆ ಇಲ್ಲ. ಹೀಗಾಗಿ ಈ ಆರೋಗ್ಯ ಕೇಂದ್ರಕ್ಕೆ ಈ ಬಾರಿ ರಾಷ್ಟ್ರಮಟ್ಟದ ಸ್ವಚ್ಛ ಮಹೋತ್ಸವ ಪ್ರಶಸ್ತಿಯೂ ಲಭಿಸಿದೆ.
Related Articles
Advertisement
ಸಿಬ್ಬಂದಿ ಶ್ರಮಕ್ಕೆ ಪ್ರಶಸ್ತಿ ಫಲ: ಡಾ| ಎಸ್. ದೇವರಾಜ್ ಅವರ ಶ್ರಮ, ಕಾರ್ಯಕ್ಷಮತೆಯಿಂದ ಆರೋಗ್ಯ ಕೇಂದ್ರ ವರ್ಷದಿಂದ ವರ್ಷಕ್ಕೆ ಮೇಲ್ದರ್ಜೆ ಗೇರುತ್ತಿದ್ದು, ಜನರಿಗೆ ಹತ್ತಿರವಾಗುತ್ತಿದೆ. ತಾವರೆಕೆರೆ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಆರೋಗ್ಯ ಕೇಂದ್ರ ಹತ್ತಿರದಲ್ಲಿದ್ದು, 24 ಗಂಟೆಗಳ ಕಾಲ ಚಿಕಿತ್ಸೆ ನೀಡಲಾಗುತ್ತಿದೆ.
ಡಾ| ದೇವರಾಜ್ ಹಾಗೂ ಸಿಬ್ಬಂದಿ ಪರಿಶ್ರಮದಿಂದ 2017ರಿಂದ ಸತತ ಮೂರು ವರ್ಷ ರಾಜ್ಯ ಮಟ್ಟದಲ್ಲಿ ನೀಡುವ ಕಾಯಕಲ್ಪ ಪ್ರಶಸ್ತಿ ಈ ಪಿಎಚ್ಸಿಗೆ ದೊರಕಿದೆ. 2016ರಲ್ಲಿ ಕಾಯಕಲ್ಪ ಪ್ರಶಸ್ತಿ ಸಮಾಧಾನಕರ ಬಹುಮಾನದಿಂದ 50 ಸಾವಿರ ರೂ. ಬಂದಿದ್ದರೆ ಕಳೆದ ಸಾಲಿನಲ್ಲಿ ಮೊದಲ ಬಹುಮಾನದಿಂದ 2 ಲಕ್ಷ ರೂ. ನಗದು ಬಂದಿತ್ತು, ಈ ವರ್ಷದ ಬಹುಮಾನದ ಹಣ ಇನ್ನೂ ಆಸ್ಪತ್ರೆಗೆ ಸಿಕ್ಕಿಲ್ಲ.
ಬಹುಮಾನದಿಂದ ಬಂದ ಹಣದವನ್ನೂ ಇಲಾಖೆ ಮಾರ್ಗಸೂಚಿಯಂತೆ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಇದರಿಂದ ಆಸ್ಪತ್ರೆ ಪ್ರವೇಶ ದ್ವಾರ ಹಾಗೂ ಎಲ್ಲಾ ಕಿಟಕಿಗಳಿಗೂ ಸೊಳ್ಳೆಪರದೆಗಳನ್ನು ಹಾಕಿ, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಖಾಸಗಿ ಆಸ್ಪತ್ರೆಗೇನೂ ಕಮ್ಮಿ ಇಲ್ಲ: ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆ ಎಂಬುದನ್ನು ತಾವರೆಕೆರೆ ಪಿಹೆಚ್ಸಿ ಕೇಂದ್ರ ಸುಳ್ಳಾಗಿಸಿದೆ. ನೈರ್ಮಲ್ಯ, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯಗಳನ್ನು ಹೊಂದಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಆಧುನಿಕ ಸೌಲಭ್ಯಗಳು: ಸ್ಕಾ ್ಯನಿಂಗ್ ವ್ಯವಸ್ಥೆ ಹೊರತುಪಡಿಸಿ ಪಿಹೆಚ್ಸಿಯಲ್ಲಿ ಇರಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೆರಿಗೆ ಮಾಡಿಸಲಾಗುತ್ತಿದೆ. ಮೈನರ್ ಓಟಿ, ಸ್ಟಿಚಿಂಗ್ ಸೌಲಭ್ಯಗಳಿವೆ. ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ರಕ್ತದ ಕೊರತೆ ಆಗದಂತೆ ರಕ್ತ ಸಂಗ್ರಹಾಲಯಕ್ಕೆ ರಕ್ತವನ್ನು ಸಂಗ್ರಹಿಸಲಾಗುತ್ತದೆ.
ಒಟ್ಟಾರೆ ತಾವರಕೆರೆ ಪಿಎಚ್ಸಿ ವೈದ್ಯರು ಮತ್ತು ಸಿಬ್ಬಂದಿ ಇತರೆ ಪಿಎಚ್ಸಿಗಳಿಗೆ ಮಾದರಿ ಆಗಿದ್ದಾರೆ.
ಪಿಎಚ್ಸಿಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ಈ ಹಿಂದೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ಕಾರಿಗನೂರು ಪಿಎಚ್ಸಿ ಪಡೆದು ಬೇರೆ ಪಿಎಚ್ಸಿಗಳಿಗೆ ಮಾದರಿ ಆಗಿತ್ತು. ಆ ಮಾರ್ಗದಲ್ಲಿಯೇ ತಾವರೆಕೆರೆ ಪಿಎಚ್ಸಿ ಮುನ್ನಡೆದಿದ್ದು, ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ.•ಡಾ| ಬಿ.ಎಂ. ಪ್ರಭು,
ತಾಲೂಕು ವೈದ್ಯಾಧಿಕಾರಿ. ಆಸ್ಪತ್ರೆಯಲ್ಲಿ ನೈರ್ಮಲ್ಯ, ಸ್ವಚ್ಛತೆ ಸೇರಿ ಗುಣಮಟ್ಟದ ಚಿಕಿತ್ಸೆ ಮತ್ತು ಸೋಂಕು ಹರಡುವಿಕೆ ತಡೆಯಲು ಪಿಎಚ್ಸಿಯಲ್ಲಿ ಜಾಗೃತಿ ವಹಿಸಿದ್ದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. •ಡಾ| ಎಸ್. ದೇವರಾಜ್,
ಆಡಳಿತ ವೈದ್ಯಾಧಿಕಾರಿ,
ತಾವರಕೆರೆ ಪಿಎಚ್ಸಿ