Advertisement
ಪಂಜಾಬ್ ನ ಪ್ರಮುಖ ಪಕ್ಷವಾಗಿದ್ದ ಶಿರೋಮಣಿ ಅಕಾಲಿದಳ ಬಿಜೆಪಿಯೊಂದಿಗೆ ಮೈತ್ರಿ ಕಳೆದುಕೊಂಡು ಭಾರಿ ಪ್ರಮಾಣದ ನಷ್ಟಕ್ಕೆ ಗುರಿಯಾಗಲಿದೆ ಎಂದು ಸಮೀಕ್ಷೆಗಳಲ್ಲಿ ಕಂಡು ಬಂದಿದ್ದು, ಬಿಜೆಪಿ ಮತ್ತು ಅಕಾಲಿದಳ ಎರಡೂ ಪಕ್ಷಗಳು ಮೈತ್ರಿ ಆಧಾರದಲ್ಲಿ ಚುನಾವಣೆ ಎದುರಿಸಿದ್ದು, ಬಿಜೆಪಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಬಲವೂ ಹೆಚ್ಚಿನ ಸ್ಥಾನಗಳನ್ನು ತಂದು ಕೊಡುವುದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.
Related Articles
Advertisement
ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಅಕಾಲಿದಳ ಎನ್ ಡಿಎ ಮೈತ್ರಿ ಕೂಟವನ್ನು ತೊರೆದಿತ್ತು. ಹರ್‌ಸಿಮ್ರತ್ ಕೌರ್ ಬಾದಲ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಹಿಂದೆಗೆದುಕೊಳ್ಳುವ ಮೂಲಕ ಬಿಜೆಪಿಯಿಂದ ದೂರವಾಗಿತ್ತು. ಈ ಚುನಾವಣೆಯಲ್ಲಿ ದಲಿತ ಮತಗಳ ಮೇಲೆ ಕಣ್ಣಿಟ್ಟು ಬಿಎಸ್ ಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಸದ್ಯ ಕೃಷಿ ಮಸೂದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಿಂಪಡೆದಿರುವುದರಿಂದ ಅಕಾಲಿ ದಳ ರಾಜಕೀಯ ಭವಿಷ್ಯಕ್ಕಾಗಿ ಮತ್ತೆ ಎನ್ ಡಿಎ ಮೈತ್ರಿಕೂಟಕ್ಕೆ ಸೇರಿಕೊಳ್ಳುವುದೇ ಎನ್ನುವ ಪ್ರಶ್ನೆ ಮೂಡಿದೆ.
ಈ ಬಾರಿ ಬಿಜೆಪಿ 65 ಸ್ಥಾನಗಳಲ್ಲಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ 37 ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿದಳ (ಸಂಯುಕ್ತ್) 15 ಸ್ಥಾನಗಳಲ್ಲಿ ಸ್ಪರ್ಧಿಸಿದೆ.ಶಿರೋಮಣಿ ಅಕಾಲಿದಳ (ಸಂಯುಕ್ತ್) ಅಕಾಲಿದಳ ದಿಂದ ಸಿಡಿದ ಒಂದು ಪಕ್ಷ.
ಮೈತ್ರಿಯಿಂದ ಪರಿಣಾಮ
2012ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಎಡಿ-ಬಿಜೆಪಿ ಮೈತ್ರಿಕೂಟ ಅಲ್ಪ ಬಹುಮತದೊಂದಿಗೆ ಗೆದ್ದಿತ್ತು. ಸಿಖ್ಖರಿಗಿಂತ ಹೆಚ್ಚು ಹಿಂದೂಗಳನ್ನು ಅಕಾಲಿದಳ ತನ್ನ ಟಿಕೆಟ್‌ನಲ್ಲಿ ಗೆಲ್ಲಿಸಿಸಿತ್ತು. ಬಿಜೆಪಿ ಸಾರ್ವತ್ರಿಕ ಚುನಾವಣೆಗಳಲ್ಲಿ ಅಮೃತಸರ ಕ್ಷೇತ್ರದಲ್ಲಿ ತನ್ನ ಇಬ್ಬರು ಉನ್ನತ ಮಂತ್ರಿಗಳಾದ ಅರುಣ್ ಜೇಟ್ಲಿ (2014) ಮತ್ತು ಹರ್ದೀಪ್ ಸಿಂಗ್ ಪುರಿ (2019) ಅವರನ್ನು ಕಣಕ್ಕಿಳಿಸಿದರೂ ಸೋಲಿನ ಅವಮಾನವನ್ನು ಅನುಭವಿಸಬೇಕಾಗಿತ್ತು. ಆ ವೇಳೆ ಅಕಾಲಿದಳದ ಮೇಲೆ ಸರಿಯಾಗಿ ಕೆಲಸ ಮಾಡದ ಆರೋಪವೂ ಕೇಳಿ ಬಂದಿತ್ತು.
2019 ರಲ್ಲಿ ಬಿಜೆಪಿಯು ಪಂಜಾಬ್‌ನಲ್ಲಿ ಸ್ಪರ್ಧಿಸಿದ ಮೂರು ಸ್ಥಾನಗಳಲ್ಲಿ ಎರಡನ್ನು ಮಾತ್ರ ಗೆದ್ದಿತ್ತು, ಆದರೆ ಅಕಾಲಿದಳವು ಉಳಿದ 10 ರಲ್ಲಿ ಸ್ಪರ್ಧಿಸಿ ಎರಡನ್ನು ಮಾತ್ರ ಗೆದ್ದಿತ್ತು. ಒಟ್ಟು 37.08% ಮತಗಳನ್ನು ಮೈತ್ರಿ ಕೂಟ ಪಡೆದಿತ್ತು.
ಕಾಂಗ್ರೆಸ್ ಭವಿಷ್ಯ ಮಂಕು
ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದಿಂದ ಸಿಡಿದು ಹೊರ ಬಂದ ಬಳಿಕ ಆಂತರಿಕ ಕಚ್ಚಾಟದಲ್ಲಿ ಮುಳುಗಿದ್ದ ಕಾಂಗ್ರೆಸ್ ಪಕ್ಷಕ್ಕೆ ನಾಯಕರು ತೇಪೆ ಹಚ್ಚಿ ಅಧಿಕಾರ ಉಳಿಸಿಕೊಂಡಿದ್ದರು. ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚೆನ್ನಿ ಮತ್ತು ಕಾಂಗ್ರೆಸ್ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನಡುವಿನ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿದ್ದವು. ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಇನ್ನಷ್ಟು ಒಡಕು ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.