Advertisement
ಮೊನ್ನೆ ಬೇಕರಿಗೆ ಬ್ರೆಡ್ ಖರೀದಿಸಲು ಹೋಗಿದ್ದೆ. ಅಲ್ಲಿದ್ದ ಹುಡುಗರು ಪ್ರತಿಯೊಬ್ಬರಿಗೂ ಅವರವರಿಗೆ ಬೇಕಾದ ವಸ್ತು ನೀಡುವಾಗ ಬಳಸುತ್ತಿದ್ದ ಪದ “ಮೇಡಂ’ ಅಥವಾ “ಅಕ್ಕ’. ಬೇಕರಿಯ ಮಾಲೀಕನನ್ನು ವಿಚಾರಿಸಿದೆ. “ಏನ್ರೀ ನಿಮ್ಮ ಹುಡುಗರನ್ನು ಚೆನ್ನಾಗಿ ತಯಾರು ಮಾಡಿದ್ದೀರಾ?!’. ಅದಕ್ಕೆ ಆತ ನಕ್ಕು ಹೇಳಿದ್ದು: “ನೋಡಿ ಮೇಡಂ, ಈಗ ಕಾಂಪಿಟೇಷನ್ ಭಾಳ. ನಮ್ಮ ಕಸ್ಟಮರ್ನ್ನು ನಾವು ಕಾಪಾಡ್ಕೊಬೇಕು ಎಂದರೆ ಅವರಿಗೆ ಬೇಕಾದ ಹಾಗೆ ನಡ್ಕೊಬೇಕು. ಈಗಿನ ಹುಡುಗಿಯರಿಗೆ- ಹೆಂಗಸರಿಗೆ “ಆಂಟಿ’ ಅಂದ್ರೆ ಆಗಲ್ಲ. ಹಿಂದೆ ಬೇಜಾರಾಗಿದ್ರೂ ಸುಮ್ಮನೆಯಾದ್ರೂ ಇರೋವ್ರು, ಆದರೆ ಈಗ ಹಾಗಲ್ಲ, ಆಂಟಿ ಅಂತ ಕರೆದ್ರೆ ಸಾಕು, ಸಿಡಾರನೆ ನಮನ್ನು ಅಂಕಲ್ಲೋ, ಅಜ್ಜಾನೋ ಅಂತ ಕರೆದುಬಿಡ್ತಾರೆ. ಒಬ್ರು ಹಾಗೆ ಮಾಡಿದ್ರೆ ಉಳಿದವ್ರಿಗೂ ಧೈರ್ಯ ಬಂದ್ಬಿಟ್ಟು ಅವರೂ ಹಾಗೇ ಬೈತಾರೆ. ನಮಗೇನು ಅವರನ್ನು “ಮೇಡಂ’, “ಅಕ್ಕ’ ಅಂತ ಕರೆಯೋಕ್ಕೆ? ಸರಿ, ನಮ್ಮ ಎಲ್ಲಾ ಹುಡುಗರಿಗೂ ತಾಕೀತು ಮಾಡ್ಬಿಟ್ಟಿದ್ದೀನಿ. ಯಾರನ್ನೂ “ಆಂಟಿ’ ಅನ್ನಕೂಡ್ದು ಅಂತ!’.
Related Articles
Advertisement
“ನಿಮ್ಮನ್ನು ಅಪರಿಚಿತರೊಬ್ಬರು ಬಂದು, ಆಂಟಿ ಎಂದು ಕರೆದರೆ ನೀವೇನು ಮಾಡುತ್ತೀರಿ?’ ಎಂಬ ಪ್ರಶ್ನೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಹೆಚ್ಚಿನ ಹುಡುಗಿಯರು ಹೇಳಿದ್ದೇನು ಗೊತ್ತೆ? “ಕೆನ್ನೆಗೆ ಬಾರಿಸುತ್ತೇವೆ!’ ಎಂದು. ಅಂದರೆ, ಹಿಂದಿನ ತಲೆಮಾರಿನ ಮಹಿಳೆಯರು ಆಂಟಿಯನ್ನು ಒಪ್ಪಿಕೊಂಡ, ಅಥವಾ “ಅಜ್ಜಿ/ಪಾಟಿ’ ಎನಿಸಿಕೊಳ್ಳುವುದರ ಬದಲು ಆಂಟಿ ಎಷ್ಟೋ ಮೇಲು ಎಂದು ಸಮಾಧಾನ ಪಡುವ ಬದಲು, “ಆಂಟಿ’ಯನ್ನೂ ಗೌರವಸೂಚಕ ಎಂದು ಸ್ವೀಕರಿಸುವ ಬದಲು, ಇಂದಿನ ಹುಡುಗಿಯರು- ಮಹಿಳೆಯರು “ಅಕ್ಕ’ನಾಗಲು ಅಥವಾ ಹೆಸರು ಹಿಡಿದೇ ಕರೆಸಿಕೊಳ್ಳಲು ಕಾತರರಾಗಿದ್ದಾರೆ. ಇಂದಿನ ತಲೆಮಾರಿನ ಹುಡುಗರು- ಪುರುಷರೂ ಅಷ್ಟೇ, ಮಹಿಳೆಯರ ಮನಸ್ಸಿನ ಭಾವನೆಗಳಿಗೆ ಬೆಲೆ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ!
ಸಂಬಂಧಗಳಲ್ಲಿ ಆಯಾ ಸಂಬಂಧವನ್ನು ಗುರುತಿಸಿ ಕರೆಯುವುದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಸಂಬಂಧಗಳನ್ನು ಕಳೆದುಕೊಳ್ಳುವ ಪ್ರಥಮ ಹಂತ, ಅವುಗಳ ಹೆಸರುಗಳನ್ನು ಬಿಡುವುದು! ಪಾಶ್ಚಾತ್ಯರ ಎಷ್ಟೋ ಕ್ರಮಗಳನ್ನು ಥಟ್ಟನೆ ಗುರುತಿಸಿ, ನಮ್ಮದಾಗಿಸಿಕೊಳ್ಳುವ ನಾವು, ಅವರ ಸಂಬೋಧನಾ ಕ್ರಮದ ಬಗೆಗೆ ಖಂಡಿತ ಗಮನಿಸಬೇಕಿದೆ. ವೃತ್ತಿಪರ ಸಂಬಂಧಗಳಲ್ಲಿ ಸರ್ ಅಥವಾ ಮೇಡಂ ಬಳಕೆ, ಆತ್ಮೀಯತೆಯಿದ್ದಾಗ- ವಯಸ್ಸು ಕೆಲವೇ ವರ್ಷಗಳ ಅಂತರದಲ್ಲಿದ್ದಾಗ ಹೆಸರು ಹಿಡಿದು ಮಾತನಾಡಿಸುವುದು ಮತ್ತು ಆತ್ಮೀಯತೆಯಿದ್ದು, ವಯಸ್ಸಿನ ಅಂತರ ಹೆಚ್ಚಿದ್ದಾಗ “ಅಕ್ಕ-ಅಣ್ಣ’ಂದಿರ ಬಳಕೆ ಸೂಕ್ತ ಎನಿಸಬಲ್ಲದು.
“ಆಂಟಿ’ಯ ಬಗ್ಗೆ ಇಷ್ಟೆಲ್ಲಾ ತಲೆಯಲ್ಲಿ ಹರಿದಾಡುತ್ತಿರುವಾಗಲೇ ಬೇಕರಿಯ ಹುಡುಗ “ತೊಗೊಳ್ಳಿ ಮೇಡಂ, ನಿಮ್ಮ ಐಟಂ ಎಲ್ಲಾ ಪ್ಯಾಕ್ ಆಗಿದೆ’ ಎಂದಿದ್ದ. ಮಗಳು ಭೂಮಿ ಆ ಹುಡುಗನಿಗೆ “ಅಂಕಲ್ ಅಂಕಲ್ ಕಾಲು ಕೆಜಿ ರಸ್ಕ್ ಕೊಡಿ’ ಎಂದಿದ್ದಳು! ತಕ್ಷಣ ನಾನು ಗದರಿಸಿ “ಅಣ್ಣ ಅಂತ ಕರಿ, ಅಂಕಲ್ ಅಲ್ಲ’ ಎಂದೆ. ಆ ಹುಡುಗ ನಕ್ಕು ಕಣ್ಣರಳಿಸಿದ!
ನಿಮ್ಮನ್ನು “ಆಂಟಿ’ ಅಂತ ಕರೆದಾಗ…– “ಆಂಟಿ’ ಎಂದು ಯಾರಾದರೂ ಕರೆದಾಗ ಕೋಪಗೊಳ್ಳಬೇಕಿಲ್ಲ, ಕೆನ್ನೆಗೆ ಹೊಡೆಯಬೇಕಾಗಿಲ್ಲ, ನಿಜ! ಆದರೆ ಅವರನ್ನು ತಿದ್ದಬೇಕು. ಕುಹಕ- ವ್ಯಂಗ್ಯಗಳಿಂದ “ಆಂಟಿ’ ಎಂದು ಕರೆದಾಗ ನಾವೇ ಮುಜುಗರದಿಂದ ಸುಮ್ಮನಿರಬೇಕಾಗಿಲ್ಲ. ಬದಲಾಗಿ ನೇರವಾಗಿ “ಹಾಗೆ ಕರೆಯಬೇಡಿ’ ಎಂದು ಹೇಳುವುದು, “ನಮಗೆ ಹೇಗೆ ಬೇಕೋ ಹಾಗೆ ಕರೆಸಿಕೊಳ್ಳುವುದು ನಮ್ಮ ಹಕ್ಕು’ ಎಂದು ಸ್ವಷ್ಟಪಡಿಸುವುದು ಉತ್ತಮ. – ಸ್ವತಃ ತಾಯಂದಿರು ತಮಗೆ “ಆಂಟಿ’ ಎಂದು ಕರೆದಾಗ ಆದ ಮುಜುಗರವನ್ನು ನೆನಪಿಟ್ಟು, ಚಿಕ್ಕ ಮಕ್ಕಳು ಆಂಟಿ- ಅಂಕಲ್‌ಗಳನ್ನು ಎಲ್ಲೆಂದರಲ್ಲಿ ಪ್ರಯೋಗಿಸಿದಾಗ ಅದನ್ನು ತಿದ್ದುವುದು ಮುಖ್ಯ. – ಮಕ್ಕಳು “ಅಕ್ಕ- ಅಣ್ಣ’ ಎನ್ನಲು ಅನುಮಾನಿಸಿದಾಗ ಅವರನ್ನು ಹಾಗೆ ಕರೆಯಲು ಪ್ರೋತ್ಸಾಹಿಸುವುದು, ಮಕ್ಕಳು 14 ವರ್ಷ ದಾಟುತ್ತಿದ್ದಂತೆ “ಆಂಟಿ-ಅಂಕಲ್’ ಗಳನ್ನು ಸಂಪೂರ್ಣವಾಗಿ ಕೈಬಿಡುವಂತೆ ಹೇಳುವುದು ಮುಖ್ಯ. – ಒಂದೊಮ್ಮೆ ಹಾಗೆ ಕರೆಸಿಕೊಳ್ಳುತ್ತಿದ್ದ ವ್ಯಕ್ತಿ “ತನ್ನನ್ನು ಹಾಗೆಯೇ ಸಂಬೋಧಿಸಬೇಕು, ತನಗೆ ಸಂತಸ’ ಎಂದು ಸ್ಪಷ್ಟಪಡಿಸಿದಾಗ ಮಾತ್ರ ಹಾಗೆ ಕರೆಯುವುದನ್ನು ಆ ವ್ಯಕ್ತಿಗೆ ಸಂಬಂಧಿಸಿದಂತೆ ಮುಂದುವರಿಸುವುದು, ಇವುಗಳನ್ನು ಮಕ್ಕಳ ಬೆಳವಣಿಗೆಯ ಭಾಗವಾಗಿ ಕಲಿಸಬೇಕು. – ಆಸ್ಪತ್ರೆ, ನರ್ಸರಿ ಶಾಲೆಗಳಲ್ಲಿಯೂ ಅಷ್ಟೆ: “ಆಯಾ’ ಎಂಬ ಪದಕ್ಕೆ ಅಂಟಿರುವ ಕೀಳರಿಮೆಯನ್ನು ಬದಲಿಸಲು “ಆಂಟಿ’ ಎಂಬ ಪದದ ಪ್ರಯೋಗವೇ ಆಗಬೇಕಿಲ್ಲ. ಆಯಾಗಳನ್ನು ಅಮ್ಮ, ಅಕ್ಕ ಎಂದೂ ಕರೆದು ಅವರಿಗೆ ವಿಶೇಷ ಗೌರವ ನೀಡಬಹುದು. – ಡಾ. ಕೆ.ಎಸ್. ಪವಿತ್ರ