ಮಣಿಪಾಲ: ಲಾಕ್ ಡೌನ್ ಸಮಯದಲ್ಲಿ ಎಟಿಎಂ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಎಸ್‌ಬಿಐ ಒಟಿಪಿ ಆಧಾರಿತ ಎಟಿಎಂ ನಗದು ಹಿಂಪಡೆಯುವ ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಿದೆ. 24X7 ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಲಿರುವ ಈ ಸೌಲಭ್ಯವು ಸೆಪ್ಟೆಂಬರ್ 18ರಿಂದ ದೇಶಾದ್ಯಂತದ ಎಲ್ಲ ಎಸ್‌ಬಿಐ ಎಟಿಎಂಗಳಲ್ಲಿ ಬಳಕೆಗೆ ಬರಲಿದೆ.
ಈ ನೂತನ ನಿಯಮದನ್ವಯ 10,000 ಅಥವಾ ಹೆಚ್ಚಿನ ರೂಪಾಯಿಗಳನ್ನು ಹಿಂಪಡೆಯುವ ಸಂದರ್ಭ ಒಟಿಪಿ ವಿಧಿಸಲಾಗುತ್ತದೆ. ಇದು ಹೊಸ ಕ್ರಮವಾಗಿದೆ. ಈ ಹಿಂದೆ ನೀವು ನೇರವಾಗಿ ಎಟಿಎಂಗೆ ತೆರಳಿ ನಿಮಗೆ ಬೇಕಾಗ ಹಣವನ್ನು ನಮೂದಿಸಿ ಹಿಂಪಡೆಯಬಹುದಾಗಿತ್ತು. ಇದೀಗ ಆ ಪ್ರಕ್ರಿಯೆಗೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಸೇರ್ಪಡೆಯಾಗಲಿದೆ.
ಎಟಿಎಂನಿಂದ 10 ಸಾವಿರ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನನಗದನ್ನು ಹಿಂತೆಗೆದುಕೊಳ್ಳುವ ಸಂದರ್ಭ ಒಟಿಪಿ ಬೇಕಾಗಿ ಬರುತ್ತದೆ. ಈ ಮೊದಲು ರಾತ್ರಿ ಎಂಟು ಗಂಟೆಯಿಂದ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಳ್ಳುವ ಸಂದರ್ಭ ಒಟಿಪಿ ಅಗತ್ಯ ಇತ್ತು. ಜನವರಿ 1ರಿಂದ ಬ್ಯಾಂಕ್ ಈ ನಿಯಮವನ್ನು ಜಾರಿಗೆ ತಂದಿತ್ತು. ಇದನ್ನೀಗ 24X7 ಮಾದರಿಗೆ ವಿಸ್ತರಿಸಿದೆ.
ಹೇಗೆ ನಡೆಯಲಿದೆ ಪ್ರಕ್ರಿಯೆ
ಸೆಪ್ಟೆಂಬರ್ 18 ಶುಕ್ರವಾರ, ನೀವು 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಎಟಿಎಂಗೆ ಹೋದರೆ, ಕಾರ್ಡ್ ನಮೂದಿಸಿ ಮತ್ತು ಮೊತ್ತವನ್ನು ಹಾಕಿದ ಬಳಿಕ ಬ್ಯಾಂಕ್‌ಗೆ ನೀಡಲಾದ ಅಥವ ನೋಂದಾಯಿಸಿದ ಮೊಬೈಲ್ ನಂಬರ್‌ಗೆ ಒಟಿಪಿ ಇರುತ್ತದೆ. ಈ ಒಟಿಪಿಯನ್ನು ಡೆಬಿಟ್ ಕಾರ್ಡ್‌ನ ಪಿನ್‌ನೊಂದಿಗೆ ನಮೂದಿಸಬೇಕಾಗುತ್ತದೆ. ಇವಿಷ್ಟನ್ನು ನೀವು ಮಾಡಲು ಶಕ್ತವಾದರೆ ಮಾತ್ರ ಎಸ್‌ಬಿಐ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.
Related Articles
ಒಟಿಪಿಯಿಂದಾಗಿ ಸುರಕ್ಷತೆ ಹೇಗೆ ಹೆಚ್ಚಾಗುತ್ತದೆ?
ತಾಂತ್ರಿಕ ಸುಧಾರಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಎಸ್‌ಬಿಐ ಈ ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕರ ಸುರಕ್ಷತೆಗೆ ಬಹಳ ಮೊದಲಿನಿಂದಲೂ ಎಸ್‌ಬಿಐ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಈ ವಿಶೇಷ ಅಂಶ ಭದ್ರತಾ ಮಟ್ಟವನ್ನು ಮತ್ತಷ್ಟು ಬಲಪಡಿಸುತ್ತದೆ. ಎಸ್‌ಬಿಐ ಡೆಬಿಟ್ ಕಾರ್ಡ್ ಹೊಂದಿರುವವರು ಬ್ಯಾಂಕ್ ವಂಚನೆಗಳು, ಅನಧಿಕೃತ ಹಿಂಪಡೆಯುವಿಕೆ, ಕಾರ್ಡ್ ಸ್ಕಿಮ್ಮಿಂಗ್ ಮೊದಲಾದ ಅಪಾಯಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ದೇಶಾದ್ಯಂತ 22,000ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳು
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ದೇಶಾದ್ಯಂತ 22 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಎಸ್‌ಬಿಐ 30ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವದಲ್ಲಿದೆ. 6.6 ಕೋಟಿಗೂ ಹೆಚ್ಚು ಎಸ್‌ಬಿಐ ಗ್ರಾಹಕರು ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯಗಳನ್ನು ಬಳಸುತ್ತಾರೆ.