Advertisement

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ; ನಾಳೆಯಿಂದ ಹೊಸ ನಿಯಮ ಜಾರಿ

02:43 AM Sep 30, 2020 | Hari Prasad |

ಮಣಿಪಾಲ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿ ತಂದಿದ್ದು ಈ ಮೂಲಕ ಕೆಲವೊಂದು ನಿಯಮಗಳನ್ನು ಮಾರ್ಪಾಡು ಮಾಡಿದೆ.

Advertisement

ಅಕ್ಟೋಬರ್‌ 1ರಿಂದ ದೇಶಾದ್ಯಂತ ಈ ಹೊಸ ಟ್ರಾಫಿಕ್‌ ನಿಯಮಗಳು ಜಾರಿಗೊಳ್ಳಲಿವೆ.

ಇ-ಚಲನ್‌, ಲೈಸೆನ್ಸ್‌ ನಿಯಮ ಬದಲಾವಣೆ
ತಿದ್ದುಪಡಿ ಅನ್ವಯ ಚಾಲನಾ ಪರವಾನಿಗೆ ಮತ್ತು ಇ-ಚಲನ್‌ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿ ತಂತ್ರಜ್ಞಾನ ಪೋರ್ಟಲ್‌ ಮೂಲಕ ನಿರ್ವಹಿಸಲಾಗುತ್ತದೆ. ಜತೆಗೆ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಿಗೆ (DL) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು (ಆರ್‌ಸಿ) ವಿತರಿಸಲಾಗುತ್ತದೆ. ವಾಹನ ಸವಾರರು ಚಾಲನಾ ಪರವಾನಿಗೆ ಹಾಗೂ ಆರ್‌ಸಿಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಿದೆ.

ಡಿಜಿಟಲ್‌ ಮಾದರಿ
ಚಾಲನಾ ಪರವಾನಿಗೆ, ಇ-ಚಲನ್‌ ಮತ್ತು ವಾಹನ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಮುದ್ರಿತ ಪ್ರತಿ (ಹಾರ್ಡ್‌ ಕಾಪಿ)ಗಳು ಆವಶ್ಯಕವಾಗಿರುವುದಿಲ್ಲ. ಇದರ ಹೊರತಾಗಿ ಡಿಜಿಟಲ್‌ ಮಾದರಿಯ ಮೂಲಕ ಮಾನ್ಯತೆ ಪಡೆದ ದಾಖಲೆಗಳನ್ನು ನೀಡಬಹುದಾಗಿದೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Advertisement

ಡಿಜಿಲಾಕರ್‌, ಎಂ-ಪರಿವಾಹನ್‌ ಬಳಕೆ

ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪ್ರತಿಗಳನ್ನು ಕೇಂದ್ರ ಸರಕಾರದ ಆನ್‌ಲೈನ್‌ ಪೋರ್ಟಲ್‌ ಆದ ಎಂ-ಪರಿವಾಹನ್‌ ಅಥವಾ ಡಿಜಿಲಾಕರ್‌ ಆ್ಯಪ್‌ ಗಳಿಗೆ ಅಪ್‌ಲೋಡ್‌ ಮಾಡಬಹುದು. ಅಗತ್ಯ ಸಂದರ್ಭದಲ್ಲಿ ಇವುಗಳನ್ನು ದಾಖಲೆಯಾಗಿ ಬಳಸಬಹುದು.

ಅಧಿಕಾರಿಗಳ ಬಳಿ ಮಾಹಿತಿ
ವಾಹನ ಸವಾರರ ಚಾಲನಾ ಪರವಾನಿಗೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸಂಚಾರಿ ಅಧಿಕಾರಿಗಳ ಬಳಿ ಲಭ್ಯವಾಗಲಿವೆ. ಪರವಾನಿಗೆ ಪ್ರಾಧಿಕಾರವು ಅನರ್ಹಗೊಳಿಸಿದ ಅಥವಾ ರದ್ದುಪಡಿಸಿದ ಚಾಲನಾ ಪರವಾನಿಗೆಯ ವಿವರಗಳನ್ನು ಅಧಿಕೃತ ಪೋರ್ಟಲ್‌ನಲ್ಲಿ ದಾಖಲಿಸಲಾಗುವುದಲ್ಲದೇ ಅದನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ.

ಇದು ನಿಮಗೆ ತಿಳಿದಿರಲಿ
ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಿದರೆ 1,000 ದಿಂದ 5 ಸಾವಿರ ರೂ.ಗಳ ವರೆಗೆ ದಂಡ ವಿಧಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ. ಈ ನಿಯಮವೂ ಅ. 1 ರಿಂದ ಜಾರಿಗೆ ಬರಲಿದೆ.

ಎಟಿಎಂ ಕಾರ್ಡ್‌ ಮಾದರಿ ಕಾರ್ಯಾಚರಣೆ
ಹೊಸದಾಗಿ ಬರುವ ಡಿಎಲ್‌ ಮತ್ತು ಆರ್‌ಸಿಗಳು ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿರಲಿವೆ. ಅಂದರೆ ಹೊಸ ಕಾರ್ಡ್‌ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್‌ ಇರಲಿದ್ದು, ಕ್ಯೂಆರ್‌ ಕೋಡ್‌ ಹಾಗೂ ನಿಯರ್‌ ಫೀಲ್ಡ್ ಕಮ್ಯುನಿಕೇಶನ್‌ಗಳು ಇರಲಿವೆ. ಈ ಕಾರ್ಡ್‌ ಗಳು ಎಟಿಎಂ ಕಾರ್ಡ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next