ಒಂದಾನೊಂದು ಊರಿನಲ್ಲಿ ಬಸವಯ್ಯ ಎಂಬ ಯುವಕ ವಾಸಿಸುತ್ತಿದ್ದನು. ಅವನು ತುಂಬಾ ಸೋಮಾರಿಯಾಗಿದ್ದನು. ತಂದೆ ತಾಯಿಗಳು ಎಷ್ಟೇ ಹೇಳಿದರೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ದಿನವಿಡೀ ಕಾಲಹರಣ ಮಾಡಿಕೊಂಡೇ ಇರುತ್ತಿದ್ದ. ತಂದೆ ತಾಯಿಗೆ ಇದು ಇಷ್ಟವಾಗುತ್ತಿರಲಿಲ್ಲ. ಊರ ಮಂದಿ ತಮ್ಮ ಮಗನನ್ನು ಹೀಯಾಳಿಸುವುದನ್ನು ಕೇಳಿ ಅವರು ಒಳಗೊಳಗೇ ದುಃಖೀಸುತ್ತಿದ್ದರು. ಒಂದು ದಿನ ಅವರು ಏನಾದರೂ ಮಾಡಿ ಬಸವಯ್ಯನನ್ನು ಯಾವುದಾದರೂ ಒಂದು ಕೆಲಸಕ್ಕೆ ಸೇರಿಸಬೇಕೆಂದು ನಿರ್ಧರಿಸಿದರು. “ನೀನು ಹೀಗೆ ಯಾವುದೇ ಕೆಲಸವನ್ನು ಮಾಡದೆ ಎಷ್ಟು ಕಾಲ ಇರುತ್ತೀಯ? ನಾವು ಇರುವಷ್ಟು ಕಾಲ ನಿನ್ನನ್ನು ಹೇಗೋ ಪೋಷಿಸುತ್ತೀವಿ. ನಾವೂ ವೃದ್ಧರಾಗಿದ್ದೇವೆ. ನಾವಿಲ್ಲದೇ ಹೋದರೆ ನೀನು ಹೇಗೆ ಬದುಕುತ್ತೀಯ?’ ಎಂದು ಬುದ್ಧಿ ಹೇಳಿದರು. ತಂದೆ ತಾಯಿಯ ಒತ್ತಡಕ್ಕೆ ಮಣಿದ ಬಸವಯ್ಯ “ಸರಿ, ನೀವೆ ಹೇಳಿ ನಾನು ಯಾವ ಕೆಲಸ ಮಾಡಬೇಕು ಎಂದು’ ಎಂದು ಕೇಳಿದ. ಸಂತಸಗೊಂಡ ಅವನ ತಂದೆ “ಅಡವಿಗೆ ಹೋಗಿ ಕಟ್ಟಿಗೆಗಳನ್ನು ಕಡಿದು ತೆಗೆದುಕೊಂಡು ಬಾ’ ಎಂದು ಹೇಳಿದರು.
ಬಸವಯ್ಯ ಮಾರನೇ ದಿನ ಮುಂಜಾನೆ ಬೇಗನೆ ಎದ್ದು, ಕಟ್ಟಿಗೆ ಕಡಿದು ತರಲು ಅಡವಿಗೆ ಹೋದನು. ಅವನಿಗೆ ಮರವನ್ನು ಹೇಗೆ ಕಡಿಯುವುದೆಂದು ತಿಳಿಯಲಿಲ್ಲ. ಸ್ವಲ್ಪಹೊತ್ತು ಅಡವಿಯಲ್ಲಿ ಅತ್ತಿತ್ತ ಸುತ್ತಾಡಿದನು. ಅಲ್ಲಿಯೇ ಇದ್ದ ಒಂದು ಮರ ಕಣ್ಣಿಗೆ ಬಿತ್ತು. ಅದರ ಅಡಿಯಲ್ಲಿ ಕುಳಿತು ಏನು ಮಾಡುವುದೆಂದು ಯೋಚಿಸತೊಡಗಿದನು. ಅಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದುದರಿಂದ ಅವನಿಗೆ ನಿದ್ದೆ ಬಂದಿತು. ಅವನು ಅಲ್ಲಿಯೇ ಮಲಗಿ ಬಿಟ್ಟ. ಸ್ವಲ್ಪ ಹೊತ್ತಿಗೆ ಮರದ ನೆರಳು ಹೋಗಿ ಬಿಸಿಲು ಬಂದಿತು. ಆದರೆ, ಸೋಮಾರಿ ಬಸವಯ್ಯ ಮಲಗಿದ್ದ ಜಾಗದಿಂದ ಕದಲಲೇ ಇಲ್ಲ. ಸುಡು ಬಿಸಿಲು ತನ್ನ ಮೇಲೆ ಬೀಳುತ್ತಿದ್ದರೂ ಸಹ ಮಲಗಿದ್ದಲ್ಲಿಂದ ಅಲುಗಾಡಲೇ ಇಲ್ಲ. ಬಿಸಿಲನ್ನು ತಂದ ಸೂರ್ಯ ಮತ್ತೆ ನೆರಳನ್ನು ಕೊಡುವುದಿಲ್ಲವೇ? ಎಂದುಕೊಂಡು ಕಣ್ಮುಚ್ಚಿದ. ಅಷ್ಟರಲ್ಲಿ ಗರ್ಜನೆಯೊಂದು ಕೇಳಿಸಿತು. ಬಸವಯ್ಯ ಕಣ್ಣು ಬಿಟ್ಟು ನೋಡಿದರೆ ಎದುರಿಗೆ ಸಿಂಹವೊಂದು ಅವನತ್ತಲೇ ಬರುತ್ತಿತ್ತು. ಅವನು ಕಾಡುಪ್ರಾಣಿಗಳನ್ನು ಒಮ್ಮೆಯೂ ನೋಡಿದವನಲ್ಲ. ಅವನು ಎದ್ದು ತಪ್ಪಿಸಿಕೊಳ್ಳುವುದು ಬಿಟ್ಟು ಸಿಂಹ ತನ್ನ ಪಾಡಿಗೆ ತಾನು ನಡೆದುಹೋಗುವುದಾಗಿ ತಿಳಿದು ಮತ್ತೆ ಮಲಗಿದನು.
ಅದೇ ಮಾರ್ಗವಾಗಿ ನಡೆದು ಬರುತ್ತಿದ್ದ ಬೇಟೆಗಾರ ಬಸವಯ್ಯನ ಬಳಿಗೆ ಬರುತ್ತಿರುವ ಸಿಂಹವನ್ನು ಗಮನಿಸಿದನು. ಸಿಂಹ ಮಲಗಿದ್ದ ಬಸವಯ್ಯನ ಬಳಿಗೆ ಹೋಗುತ್ತಿತ್ತು. ತಕ್ಷಣ ತನ್ನ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದಾಕ್ಷಣ ಸಿಂಹ ಅಲ್ಲಿಂದ ಓಡಿ ಹೋಯಿತು. ಕೂಡಲೆ ಎಚ್ಚೆತ್ತ ಬಸವಯ್ಯನಿಗೆ ತಾನಂಥ ಮೂರ್ಖನೆಂಬುದು ಅರ್ಥವಾಯಿತು. ಬೇಟೆಗಾರನಿಗೆ ಕೃತಜ್ಞತೆಯನ್ನರ್ಪಿಸಿ ಕಟ್ಟಿಗೆ ಕಡಿಯುವ ವಿದ್ಯೆಯನ್ನು ಕಲಿತುಕೊಂಡು ಮನೆಗೆ ಹಿಂದಿರುಗಿದನು.
– ಕೆ.ಎನ್ .ಅಕ್ರಂಪಾಷ