ಬೆಂಗಳೂರು:ರೂಪಾಂತರ ಹೊಂದಿದ ನೂತನ ಕೋವಿಡ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ 9 ದಿನಗಳ ಕಾಲ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡುವುದಾಗಿ ತಿಳಿಸಿದ್ದ ದಿನಾಂಕ ಮತ್ತು ಸಮಯವನ್ನು ಬದಲಾವಣೆ ಮಾಡಿರುವುದಾಗಿ ತಿಳಿಸಿದೆ.
ಕರ್ಫ್ಯೂ ವೇಳೆ ಜನರ ಓಡಾಟಕ್ಕೆ ಮಾತ್ರ ನಿಷೇಧ ಹೇರಲಾಗಿದೆ. ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ರಾತ್ರಿ ಪಾಳಿ ಕೆಲಸ ಮಾಡುವವರಿಗೂ ನಿರ್ಬಂಧ ವಿಧಿಸಿಲ್ಲ. ಕಂಪನಿ ಗುರುತು ಪತ್ರ ನೀಡಿ ಓಡಾಡಬಹುದು ಎಂದು ತಿಳಿಸಿದೆ.
ಡಿಸೆಂಬರ್ 24ರ ರಾತ್ರಿ 11ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸರ್ಕಾರ ಹೊರಡಿಸಿರುವ ಪರಿಷ್ಕೃತ ಸುತ್ತೋಲೆಯಲ್ಲಿ ವಿವರಿಸಿದೆ.
ಈ ಮೊದಲು ಕೋವಿಡ್ ನ ರೂಪಾಂತರ ಹೊಂದಿದ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿ.23ರ ರಾತ್ರಿ 10ರಿಂದಲೇ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದರು.
ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಜನ ಸಂಚಾರ, ಬಸ್ ಓಡಾಟ, ಹೋಟೆಲ್, ಅಂಗಡಿ, ಮುಂಗಟ್ಟು, ಓಲಾ, ಕಾರು, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ವಹಿವಾಟು ಬಂದ್ ಮಾಡುವಂತೆ ಸೂಚಿಸಿತ್ತು. ಆದರೆ ಇದಕ್ಕೆ ಹೋಟೆಲ್, ಬಸ್, ಕಾರು, ಓಲಾ ಹಾಗೂ ಬೀದಿ ಬದಿ ವ್ಯಾಪಾರಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಮಯವನ್ನು ಬದಲಾಯಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.