ಬಾದಾಮಿ: ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳ ಜತೆಗೆ ನಗರದಲ್ಲಿ ಸ್ವತ್ಛತೆ ಹಾಗೂ ರುಚಿಕರ ಊಟ ಉಪಹಾರ ಒದಗಿಸುವ ಹೊಟೇಲ್ ಉದ್ಯಮದಲ್ಲಿಯೂ ಬದಲಾವಣೆಯಾಗಬೇಕಿದೆ ಎಂದು ವೀರಪುಲಿಕೇಶಿ ವಿದ್ಯಾ ಸಂಸ್ಥೆ ಚೇರಮನ್ ಎ.ಸಿ.ಪಟ್ಟಣದ ಹೇಳಿದರು.
ಇಲ್ಲಿಯ ಖಾಸಗಿ ರಾಜಸಂಗಮ ಹೊಟೇಲ್‌ನಲ್ಲಿ ಆಯೋಜಿಸಿದ್ದ ಬಾದಾಮಿ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘದ ಆಶ್ರಯದಲ್ಲಿ ನೂತನ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭ ಬಾದಾಮಿ ಪುರಸಭೆ ಸರ್ವಸದಸ್ಯರಿಗೆ, ಬಾಗಲಕೋಟೆ ನಗರಸಭೆಗೆ ಆಯ್ಕೆಯಾದ ಸಂಘದ ಸದಸ್ಯರಿಗೆ ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಮೂಲಕ ಕೋಟಿ ಕೋಟಿ ಅನುದಾನದ ತೀವ್ರಗತಿಯಲ್ಲಿ ಪರಿಪೂರ್ಣ ಕಾಮಗಾರಿಗಳು ಮುಕ್ತಾಯಗೊಳಿಸಿ ಸ್ಥಳೀಯ ವ್ಯಾಪಾರ ವಹಿವಾಟು ಹೆಚ್ಚಿಸಬೇಕು. ಅಂದಾಗ ಮಾತ್ರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಸದಸ್ಯರು ಪಕ್ಷಾತೀತವಾಗಿ ಬಾದಾಮಿ ಅಭಿವೃದ್ಧಿಗೆ ಪಣ ತೊಡಬೇಕು ಎಂದು ಸಲಹೆ ನೀಡಿದರು. ಮಾಜಿ ಅಧ್ಯಕ್ಷ ಹಾಲಿ ಸದಸ್ಯರ ರಾಜಮಹ್ಮದ ಬಾಗವಾನ ಮಾತನಾಡಿ, ಹೊಟೇಲ್ ಮಾಲೀಕರ ಸಂಘದಿಂದ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ. ಅಲ್ಲದೆ ಮಾಲೀಕರು ಬಾದಾಮಿ ಸೇರಿದಂತೆ ಮಹಾಕೂಟ, ಪಟ್ಟದಕಲ್ಲು, ಐಹೊಳೆ ಹಾಗೂ ಧಾರ್ಮಿಕ ತಾಣಗಳಾದ ಶಿವಯೋಗ ಮಂದಿರ, ಬನಶಂಕರಿಗೆ ನಿತ್ಯವೂ ಸಾಕಷ್ಟು ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಾರೆ. ಆಗಮಿಸಿದ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಉತ್ತಮ ಊಟ ಉಪಹಾರ ನೀಡುವುದರ ಜತೆಗೆ ಸ್ವತ್ಛತೆಗೆ ಆದ್ಯತೆ ನೀಡಬೇಕು. ಮಹಿಳೆಯರಿಗೆ ಹಾಗೂ ಕುಟುಂಬ ವರ್ಗಕ್ಕೆ ಪ್ರತ್ಯೇಕತೆ ಸೌಲಭ್ಯ ಒದಗಿಸಬೇಕು ಎಂದ ಅವರು, ಪುರಸಭೆ ವತಿಯಿಂದ ಕಸ ನಿರ್ವಹಣೆಗೆಂದು ಪ್ರತ್ಯೇಕ ಕಸದ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ಸರಿಯಾಗಿ ಸದುಪಯೋಗ ಪಡೆದು ತಮ್ಮ ಹೊಟೇಲ್ ಸುತ್ತಮುತ್ತಲೂ ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುಬ್ರಹ್ಮಣ್ಯ ಹಾಗೂ ಸಿಬಿಕೆ ಹೆಗಡೆ ಮಾತನಾಡಿದರು. ಬಾದಾಮಿ ಪುರಸಭೆ 23 ವಾರ್ಡ್‌ನ ಸದಸ್ಯರಿಗೆ, ಬಾಗಲಕೋಟ ನಗರಸಭೆ ಸದಸ್ಯರಿಗೆ, ಸಂಘದ ಸಂಸ್ಥಾಪಕ ಅಧ್ಯಕ್ಷ ಮಾಧವರಾವ್ ನಾಯಕ ಹಾಗೂ ರಾಜ್ಯ ಕಾರ್ಯಕಾರಿಣಿಗೆ ಆಯ್ಕೆಗೊಂಡ ಸದಸ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಗುರುರಾಜ ಉಪಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನೂತನ ಅಧ್ಯಕ್ಷ ಅರುಣಕುಮಾರ ಶೆಟ್ಟಿ, ನಿಕಟಪೂರ್ವ ಗೌರವಾಧ್ಯಕ್ಷ ಎಸ್.ಪಿ. ರಾವ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ನಾಗರಾಜ ಕಾಚೆಟ್ಟಿ ಸ್ವಾಗತಿಸಿದರು. ಇಷ್ಟಲಿಂಗ ಶಿರ್ಸಿ ನಿರೂಪಿಸಿದರು. ಪ್ರವೀಣ ಪೂಜಾರಿ ವಂದಿಸಿದರು. ಈ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.