Advertisement

ಉನ್ನತ ಶಿಕ್ಷಣದಲ್ಲಿ ಬದಲಾವಣೆ ಅಗತ್ಯ

09:19 AM Sep 08, 2019 | Suhan S |

ಹುಬ್ಬಳ್ಳಿ: ವಿಶ್ವವಿದ್ಯಾಲಯಗಳು ಪಿಎಚ್‌ಡಿ ಉತ್ಪಾದನೆ ಕಾರ್ಖಾನೆಗಳಾಗಿದ್ದು, ಗುಣಮಟ್ಟದ ಸಂಶೋಧನೆಗಳು ಹೊರಬರುತ್ತಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ ಎಂದು ರಾಣಿ ಚನ್ನಮ್ಮ ವಿವಿ ವಿಶ್ರಾಂತ ಕುಲಪತಿ ಪ್ರೊ| ಅನಂತನ್‌ ಕಳವಳ ವ್ಯಕ್ತಪಡಿಸಿದರು.

Advertisement

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಶನಿವಾರ ಇಲ್ಲಿನ ಬಿವಿಬಿ ಬಯೋಟೆಕ್ನಾಲಜಿ ಸಭಾಭವನದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಶಿಕ್ಷಕ-ಜ್ಞಾನಾಧಾರಿತ ಸಮಾಜ ನಿರ್ಮಾಣದ ಶಿಲ್ಪಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇಂದು ನೆಟ್-ಸ್ಲೆಟ್ ಪಾಸಾಗುವುದಕ್ಕಿಂತ ಪಿಎಚ್‌ಡಿ ಪಡೆಯುವುದು ಸುಲಭ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ. ಗುಣಮಟ್ಟದ ಸಂಶೋಧನೆಗೆ ಉತ್ತೇಜನ ದೊರೆಯಬೇಕಾಗಿದೆ. ಉನ್ನತ ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಾಗಿದೆ ಎಂದು ಹೇಳಿದರು.

ಕವಿವಿ ವಿಶ್ರಾಂತ ಕುಲಪತಿ ಡಾ| ಪ್ರಮೋದ ಗಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಬದುಕಿನ ವಿನ್ಯಾಸಗಾರ ಶಿಕ್ಷಕನಾಗಿದ್ದಾನೆ. ವಿಷಯ ಮತ್ತು ವೃತ್ತಿಯನ್ನು ಪ್ರೀತಿಸುವವರು ಉತ್ತಮ ಶಿಕ್ಷಕರಾಗಲು ಸಾಧ್ಯ. ಗುಣಮಟ್ಟದ ಶಿಕ್ಷಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾಗಿದೆ ಎಂದರು.

ಸಂಶೋಧನೆ ವಿಚಾರದಲ್ಲಿ ಕವಿವಿ ಅತ್ಯುತ್ತಮ ಮೈಲುಗಲ್ಲು ಸಾಧಿಸಿದೆ. 2015ರಲ್ಲಿ ಕವಿವಿ ಸಂಶೋಧನೆ ಸೂಚ್ಯಂಕ ಶೇ.46 ಇತ್ತು. ನಾನು ವಿವಿ ಕುಲಪತಿಯಾಗಿ ನಿವೃತ್ತಿಯಾಗುವ ವೇಳೆ ಸಂಶೋಧನೆ ಸೂಚ್ಯಂಕ ಶೇ.73ಕ್ಕೆ ಹೆಚ್ಚಿತ್ತು. ನಾನು ಅಧಿಕಾರ ವಹಿಸಿಕೊಂಡಾಗ ಕವಿವಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ 8 ಕೋಟಿ ರೂ. ಕೊರತೆ ಎದುರಿಸುತ್ತಿತ್ತು. ಇದೀಗ 43 ಕೋಟಿ ರೂ. ಮಿಗತೆ ಆರ್ಥಿಕತೆ ಹೊಂದಿದೆ ಎಂದು ವಿವರಿಸಿದರು.

Advertisement

ವಿಧಾನ ಪರಿಷತ್ತು ಸದಸ್ಯ ಅರುಣ ಶಹಾಪುರ ಮಾತನಾಡಿ, ಶಿಕ್ಷಕರ ಸಮಸ್ಯೆ-ಕುಂದುಕೊರತೆ, ಬೇಡಿಕೆಗಳ ಕುರಿತು ಒತ್ತಾಯ-ಹೋರಾಟಕ್ಕೆ ಶಿಕ್ಷಕ ಸಂಘಟನೆಗಳು ಸೀಮಿತ ಎನ್ನುವ ಮನೋಭಾವ ಹೆಚ್ಚುತ್ತಿದೆ. ವೈಯಕ್ತಿಕ ಸಮಸ್ಯೆ, ಸವಾಲುಗಳನ್ನು ಮೀರಿಯೂ ರಾಷ್ಟ್ರಹಿತ, ಸಮಾಜಹಿತ ಮುಖ್ಯ ಎಂಬ ಭಾವನೆ ಶಿಕ್ಷಕರಲ್ಲಿ ಮೂಡಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 1,200 ಸರಕಾರಿ ಪಿಯು ಕಾಲೇಜುಗಳಿದ್ದರೆ, 750ರಷ್ಟು ಅನುದಾನಿತ ಕಾಲೇಜುಗಳಿವೆ. ಸುಮಾರು 3,250 ಅನುದಾನ ರಹಿತ ಪಿಯು ಕಾಲೇಜಗಳಿವೆ. ಅನುದಾನ ರಹಿತ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರವೇಶಕ್ಕೆ ಪೈಪೋಟಿ ನಡೆದು, ಅಲ್ಲಿ ಒಂದೇ ತರಗತಿಗೆ ಹಲವಾರು ವಿಭಾಗ ಮಾಡಬೇಕಾಗಿದೆ. ಆದರೆ ಸರಕಾರಿ ಕಾಲೇಜುಗಳಿಗೆ ಪ್ರವೇಶ ಪೂರ್ಣಗೊಳ್ಳದ ಸ್ಥಿತಿ ಯಾಕೆ? ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷ ಡಾ| ರಘು ಅಕ್ಮಂಚಿ ಪ್ರಾಸ್ತಾವಿಕ ಮಾತನಾಡಿ, ಸಂಘಟನೆ ಕಳೆದ ನಾಲ್ಕು ವರ್ಷಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ನಮ್ಮ ಹಲವು ಶಿಫಾರಸುಗಳು ಸೇರ್ಪಡೆಗೊಂಡಿವೆ ಎಂದು ತಿಳಿಸಿದರು.

ನ್ಯಾಕ್‌ ಉಪ ಸಲಹೆಗಾರ ಡಾ| ದೇವೇಂದ್ರ ಕಾವಡೆ, ಆರೆಸ್ಸೆಸ್‌ ಪ್ರಚಾರಕ ರಘುನಂದನ್‌, ಡಾ| ಕೆ.ಎಸ್‌. ಶರ್ಮಾ, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕಾಳಿದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ್‌, ಡಾ| ಶ್ರೀಶೈಲ ಗಣಿ ಇನ್ನಿತರರಿದ್ದರು. ಪ್ರೊ| ಸಂದೀಪ ಬೂದಿಹಾಳ ಸ್ವಾಗತಿಸಿದರು. ಡಾ| ಜಿ.ಕೆ.ಬಡಿಗೇರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next