Advertisement

ಆಯುರ್ವೇದ ಪಠ್ಯಕ್ರಮದಲ್ಲಿ ಬದಲಾವಣೆ ಅಗತ್ಯ

01:25 AM Apr 09, 2022 | Team Udayavani |

ಕಟಪಾಡಿ: ಆಯುರ್ವೇದ ಪಠ್ಯಕ್ರಮದಲ್ಲಿ ಸಾಂದರ್ಭಿಕವಾಗಿ ಬದಲಾವಣೆ ತರಬೇಕಾಗಿದೆ ಮತ್ತು ತಾಂತ್ರಿಕ ಶಬ್ದಗಳನ್ನು ಮೂಲ ರೂಪದಲ್ಲೇ ಬಳಸಿ ಜನರಲ್ಲಿ ಚಾಲ್ತಿಗೆ ತರಬೇಕಾಗಿದೆ ಎಂದು ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷ ವೈದ್ಯ ಜಯಂತ್‌ ದೇವ್‌ ಪೂಜಾರಿ ಹೇಳಿದರು.

Advertisement

ಉದ್ಯಾವರ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಗದತಂತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥ ಶುಕ್ರವಾರ ನಡೆದ “ತ್ವಿಷ-2022 ಗರದೂಷಿ ವಿಷದ ಪರಿಣಾಮಗಳು ಮತ್ತು ಚಿಕಿತ್ಸೆ’ ವಿಷಯದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿ ಹಂತದ ಪಠ್ಯದ ಮುಂದುವರಿದ ಭಾಗವಾಗಿ ಸ್ನಾತಕೋತ್ತರ ಅಧ್ಯಯನದಲ್ಲಿ ಕಲಿಯುವಂತಾಗಬೇಕು. ಪ್ರಸ್ತುತ ಮೊದಲ ವರ್ಷದಲ್ಲಿ ಪಠ್ಯಕ್ರಮದ ಬದಲಾವಣೆ ಜಾರಿಗೆ ತಂದಿದ್ದು 2, 3ನೇ ವರ್ಷದಲ್ಲಿಯೂ ಜಾರಿಯಾಗ‌ಬೇಕಾಗಿದೆ ಎಂದುಅವರು ಹೇಳಿದರು.

ಇದನ್ನೂ ಓದಿ:ಡಿಆರ್‌ಡಿಒದ ಕ್ಷಿಪಣಿ ಛೇದನ ಪರೀಕ್ಷೆ ಯಶಸ್ವಿ : ರಕ್ಷಣ ಸಚಿವರಿಂದ ಅಭಿನಂದನೆ 

ಸ್ಮರಣ ಸಂಚಿಕೆಯನ್ನು ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಸನ್ನ ಎನ್‌.ರಾವ್‌ ಬಿಡುಗಡೆಗೊಳಿಸಿದರು. ಕಾಲೇಜು ಪ್ರಾಂಶುಪಾಲೆ ಡಾ| ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಅಧೀಕ್ಷಕ ಡಾ| ನಾಗರಾಜ್‌ ಎಸ್‌. ಸ್ವಾಗತಿಸಿ, ಸಮ್ಮೇಳನದ ಮುಖ್ಯ ಕಾರ್ಯದರ್ಶಿ ಡಾ| ಚೈತ್ರಾ ಹೆಬ್ಟಾರ್‌ ವಂದಿಸಿದರು. ಡಾ| ಅರುಣ್‌ ಕುಮಾರ್‌, ಡಾ| ನಾಗರತ್ನ ಎಸ್‌.ಜೆ. ನಿರೂಪಿಸಿದರು. ವಿವಿಧ ರಾಜ್ಯಗಳ 300 ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

“ಡಾಕ್ಟರ್‌’ ಅಲ್ಲ “ವೈದ್ಯ’!
ಉತ್ತರ ಭಾರತದಲ್ಲಿ ಆಯುರ್ವೇದ ವೈದ್ಯರು “ಡಾಕ್ಟರ್‌’ ಶಬ್ದವನ್ನು ಬಳಸುವುದಿಲ್ಲ. ಪರಂಪರಾಗತವಾಗಿ ಬಂದ “ವೈದ್ಯ’ ಶಬ್ದವನ್ನೇ ಬಳಸುತ್ತಾರೆ. ಜಯಂತ್‌ ದೇವ್‌ ಪೂಜಾರಿ ಅವರು ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದರೂ “ಡಾಕ್ಟರ್‌’ ವಿಶೇಷಣವನ್ನು ಬಳಸದೆ “ವೈದ್ಯ’ ಶಬ್ದವನ್ನೇ ಬಳಸುತ್ತಾರೆ. “ಜ್ವರ’ ಶಬ್ದ ಆಯುರ್ವೇದ ಮೂಲವಾಗಿದ್ದು “ಫೀವರ್‌’ ಎಂದು ಕರೆಯಬಾರದು. ತುರಿಕೆಗೆ “ಕಂಡು’ ಎಂಬ ಶಬ್ದವಿದ್ದು ಅದನ್ನೇ ಬಳಕೆಗೆ ತರಬೇಕು. ಹೀಗಾದರೆ ಮಾತ್ರ ವೈದ್ಯರಲ್ಲಿ ಆ ಕಾಯಿಲೆಯ ಎಲ್ಲ ಸ್ವರೂಪ, ಲಕ್ಷಣಗಳು ಜಾಗೃತಿಗೆ ಬರುತ್ತವೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next