ಬಂಟ್ವಾಳ: ಬಿ.ಸಿ. ರೋಡ್ ನಗರದ ಬಸ್ ಸಂಚಾರದಲ್ಲಿ ಪೊಲೀಸ್ ವ್ಯವಸ್ಥೆಯಿಂದ ಆಗಿರುವ ಬದಲಾವಣೆ ಬಗ್ಗೆ ಆಂತರಿಕ ವಿಮರ್ಶೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ| ಅಮಾತೆ ವಿಕ್ರಂ ಹೇಳಿದರು.
ಅವರು ಮಾ. 14ರಂದು ಬಿ.ಸಿ. ರೋಡ್ ತಾ.ಪಂ. ಸಭಾಂಗಣದಲ್ಲಿ ಬಸ್ ಸಂಚಾರ ಬದಲಾವಣೆ ಬಳಿಕದ ಸಮಸ್ಯೆ ಸಾರ್ವಜನಿಕ ಅಭಿಪ್ರಾಯ ಸ್ವೀಕರಿಸಿ ಮಾತನಾಡಿದರು.
ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಸಾಮಾಜಿಕ ನೇತಾರರಾದ ಸದಾಶಿವ ಬಂಗೇರ, ಪ್ರಭಾಕರ ದೈವಗುಡ್ಡೆ, ಲೋಕೇಶ್, ಕೇಶವ ದೈಪಲ, ವಾಲ್ಟರ್ ಮೊದಲಾದವರು ಮಾತನಾಡಿ, ಬಿ.ಸಿ. ರೋಡ್ ಸರ್ವಿಸ್ ರಸ್ತೆಗೆ ಬಸ್ ಬಾರದೆ ಫ್ಲೈ ಓವರ್ ಮೇಲಿಂದ ಹೋಗುವುದರಿಂದ ಸರ್ವಿಸ್ ಬಸ್ ನಿಲ್ದಾಣ ಅಥವಾ ವಿವಿಧ ಸರಕಾರಿ ಕಚೇರಿಗಳಿಗೆ ಬರುವವರು ನಡೆದೇ ಬರಬೇಕು ಅಥವಾ ಅಟೋದಲ್ಲಿ ಬರಬೇಕು. ನಡೆದು ಬರುವುದಕ್ಕೆ ಸೂಕ್ತ ಫುಟ್‌ಪಾತ್ ಇಲ್ಲ. ಕಿರಿದಾದ ರಸ್ತೆ, ವೇಗವಾಗಿ ಬರುವಂತಹ ವಾಹನಗಳು, ರಸ್ತೆಯಲ್ಲಿ ನಡೆಯುವಾಗ ಹಿಂದೆ ನೋಡಿ ನಡೆಯಬೇಕಾದ ಸಮಸ್ಯೆ ಇಲ್ಲಿದೆ ಎಂದು ಬಸ್ ಸಂಚಾರ ಬದಲಾವಣೆಯ ಅನಂತರದ ಸಮಸ್ಯೆ ವಿವರಿಸಿದರು.
ಆಟೋ ಚಾಲಕರ ಸಮಸ್ಯೆ ಬಗ್ಗೆ ವಿವಿಧ ಸಂಘಟನೆಗಳ ನೇತಾರರಾದ ವಸಂತ್, ಯಾಕೂಬ್, ಸಂಶುದ್ದೀನ್ ಮಾತನಾಡಿ, ನಗರ ಗ್ರಾಮಾಂತರ ಎಂಬ ಆಟೋ ಪರ್ಮಿಟ್ ವಿಂಗಡಿಸಿ ನೀಡಬೇಕೆಂದು ಆಗ್ರಹಿಸಿದರು. ಆಟೋಗಳಿಗೆ ಬಿ.ಸಿ. ರೋಡ್ ನಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಅನುಕೂಲ ಮಾಡಿ ಕೊಡುವಂತೆ ಅಭಿಪ್ರಾಯ ನೀಡಿದರು.
ಬಂಟ್ವಾಳ ಉಪ ವಿಭಾಗ ಎಎಸ್‌ಪಿ ಸೈದುಲ್ ಅಡಾವತ್ ಮಾತನಾಡಿ ಮಂಗಳೂರು – ಬೆಂಗಳೂರು, ಧರ್ಮಸ್ಥಳ- ಮಂಗಳೂರು, ಪುತ್ತೂರು -ಮಂಗಳೂರು ನೇರ ಸಂಚಾರದ ಬಸ್ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಅವುಗಳನ್ನು ಫ್ಲೈ ಓವರ್‌ನಲ್ಲಿ ನೇರ ಹೋಗುವಂತೆ, ಎಲ್ಲ ಸರ್ವಿಸ್, ಖಾಸಗಿ ಬಸ್‌ಗಳು ಸರ್ವಿಸ್ ರಸ್ತೆಯಲ್ಲಿ ಬರುವಂತೆ ಕ್ರಮ ಕೈಗೊಂಡಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಬದಲಾವಣೆ ತರಲಾಗಿದ್ದು, ಸಂಚಾರ ಒತ್ತಡ ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ.
ಬದಲಾವಣೆಗಳನ್ನು ಜನರು ಸ್ವಾಗತಿಸ ಬೇಕು. ಅನನುಕೂಲ ಸಂದರ್ಭ ಎದುರಾದಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಈ ಸಭೆ ಕರೆಯಲಾಗಿದೆ. ಅಭಿಪ್ರಾಯ ಸಂಗ್ರಹ ಮಾಡುವ ಮೂಲಕ ನಗರದಲ್ಲಿ ಸೌಕರ್ಯ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.
ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ ಗೌಡ, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಕುಮಾರ್, ಸಂಚಾರ ಠಾಣಾಧಿಕಾರಿ ಮಂಜುನಾಥ್, ಅಪರಾಧ ಪತ್ತೆ ವಿಭಾಗದ ಎಸ್‌ಐ ಸುಧಾಕರ ತೋನ್ಸೆ, ಕೆಎಸ್ ಆರ್‌ಟಿಸಿ, ಆರ್‌ಟಿಒ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.