ನಿರ್ದೇಶಕ ಆರ್.ಚಂದ್ರು “ಕನಕ’ ಚಿತ್ರದ ಬಳಿಕ ಯಾವ ಚಿತ್ರ ಮಾಡಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಆ ಪ್ರಶ್ನೆಗೆ ಸ್ವತಃ ಚಂದ್ರು ಅವರೇ ಉತ್ತರವಾಗಿದ್ದಾರೆ. ಹೌದು, ಆರ್.ಚಂದ್ರು ಈಗ ಮತ್ತೂಂದು ಲವ್‌ಸ್ಟೋರಿ ಹಿಂದೆ ಬಂದಿದ್ದಾರೆ. ತಮ್ಮ ನಿರ್ದೇಶನದ ಹೊಸ ಚಿತ್ರಕ್ಕೆ ಅವರು ಇಟ್ಟುಕೊಂಡ ಹೆಸರು “ಐ ಲವ್ ಯೂ’. ಶೀರ್ಷಿಕೆಯೇ ಹೇಳುವಂತೆ ಇದೊಂದು ಪಕ್ಕಾ ಔಟ್ ಅಂಡ್ ಔಟ್ ಲವ್‌ಸ್ಟೋರಿ ಚಿತ್ರ ಮಾಡಲು ಹೊರಟಿದ್ದಾರೆ ಚಂದ್ರು.
ಹಾಗೆ ನೋಡಿದರೆ, ಚಂದ್ರು ಅವರಿಗೆ ಈ ಲವ್‌ಸ್ಟೋರಿಗಳು ಹೊಸದೇನಲ್ಲ. ಈ ಹಿಂದೆ “ತಾಜ್ ಮಹಲ್’, “ಪ್ರೇಮ್ ಕಹಾನಿ’, “ಚಾರ್‌ಮಿನಾರ್’ನಂತರ ಅಪ್ಪಟ ಪ್ರೀತಿಯ ಕಥೆಗಳನ್ನು ಕಟ್ಟಿಕೊಡುವ ಮೂಲಕ ಒಂದಷ್ಟು ಯುವ ಮನಸ್ಸುಗಳನ್ನು ಗೆದ್ದಿದ್ದ ಚಂದ್ರು ಇದೀಗ ಅಂಥದ್ದೇ ಕಥೆ ಹೆಣೆದು, ಯುವ ಮನಸ್ಸುಗಳನ್ನು ಸೆಳೆಯುವಂತಹ ಚಿತ್ರ ಕೊಡಲು ಅಣಿಯಾಗುತ್ತಿದ್ದಾರೆ.
ಅಂದಹಾಗೆ, ಅವರ “ಐ ಲವ್ ಯೂ’ ಚಿತ್ರಕ್ಕೆ ನಾಯಕ ಯಾರೆಂಬುದು ಗೌಪ್ಯ. ಸದ್ಯಕ್ಕೆ ಕೆಲ ಹೀರೋಗಳ ಜತೆ ಮಾತುಕತೆ ನಡೆಯುತ್ತಿದ್ದು, ಇಷ್ಟರಲ್ಲೇ ಒಬ್ಬ ಹೀರೋನನ್ನು ಆಯ್ಕೆ ಮಾಡುವ ಮೂಲಕ ಚಿತ್ರ ಶುರುಮಾಡುವ ಯೋಚನೆಯಲ್ಲಿದ್ದಾರೆ ಚಂದ್ರು. ಚಿತ್ರಕ್ಕೆ ಅಪ್ಪಟ ಕನ್ನಡದ ನಾಯಕಿಯೇ ಇರಲಿದ್ದು, ಅವರ ಆಯ್ಕೆ ಪ್ರಕ್ರಿಯೆ ಕೂಡ ಈಗಾಗಲೇ ಶುರುವಾಗಿದೆ ಎನ್ನುತ್ತಾರೆ ಆರ್.ಚಂದ್ರು. ಎಲ್ಲಾ ಸರಿ, ಈ ಚಿತ್ರಕ್ಕೆ ನಿರ್ಮಾಣದ ಜವಾಬ್ದಾರಿಯನ್ನೂ ಸ್ವತಃ ಆರ್.ಚಂದ್ರು ಅವರೇ ವಹಿಸಿಕೊಂಡಿದ್ದಾರಾ?
ಇದಕ್ಕೆ ಉತ್ತರ ರಾಜ್ ಪ್ರಭಾಕರ್. ಹೌದು, ತೆಲುಗು ಚಿತ್ರರಂಗದ ರಾಜ್‌ಪ್ರಭಾಕರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಥೆ ಕೇಳಿದ ರಾಜ್‌ಪ್ರಭಾಕರ್ ಅವರಿಗೆ ಕನ್ನಡದಲ್ಲಿ ಒಳ್ಳೆಯ ಸಿನಿಮಾ ಮಾಡುವ ಮನಸ್ಸಾಗಿ, ಅವರೀಗ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಚಿತ್ರದಲ್ಲಿ ಇನ್ನು ಯಾರೆಲ್ಲಾ ಇರುತ್ತಾರೆ, ತಂತ್ರಜ್ಞರು ಯಾರು ಎಂಬಿತ್ಯಾದಿ ವಿಷಯಗಳನ್ನು ಸದ್ಯದಲ್ಲೇ ಹೇಳಲಿರುವ ಚಂದ್ರು, ಏಪ್ರಿಲ್ 1ರಂದು ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಏಪ್ರಿಲ್ 20 ರಿಂದ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದಾರೆ.