ನಿರ್ದೇಶಕ ಆರ್.ಚಂದ್ರುಗೆ ನೈಸ್ ರಸ್ತೆ ಮೇಲೆ ಏನೋ ವಿಪರೀತ ಪ್ರೀತಿ. ಅವರ ಪ್ರತಿ ಸಿನಿಮಾದ ಒಂದಲ್ಲ, ಒಂದು ದೃಶ್ಯವನ್ನು ನೈಸ್ ರಸ್ತೆಯಲ್ಲಿ ಚಿತ್ರೀಕರಣ ಮಾಡಿಯೇ ಮಾಡುತ್ತಾರೆ. ಈ ಬಾರಿ “ಕನಕ’ದಲ್ಲೂ ಅದು ಮುಂದುವರೆದಿದ್ದು, ಚಿತ್ರದ ಫೈಟಿಂಗ್ ದೃಶ್ಯಗಳನ್ನು ಚಂದ್ರು ನೈಸ್ ರಸ್ತೆಯಲ್ಲಿ ಚಿತ್ರೀಕರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಆಟೋ ಚೇಸಿಂಗ್ ದೃಶ್ಯವನ್ನು ನೈಸ್ ರಸ್ತೆಯಲ್ಲಿ ಚಿತ್ರೀಕರಿಸಿಕೊಂಡಿದ್ದ ಚಂದ್ರು, ಈ ಬಾರಿ ಜಾತ್ರೆಯ ಹಿನ್ನೆಲೆಯಲ್ಲಿ ನಡೆಯುವ ಫೈಟ್ ಸನ್ನಿವೇಶವನ್ನೂ ನೈಸ್ ರಸ್ತೆಯಲ್ಲೇ ಚಿತ್ರೀಕರಿಸಿದ್ದಾರೆ ಚಂದ್ರು. ದೇಸಿ ಗೆಟಪ್‌ನಲ್ಲಿದ್ದ ವಿಜಯ್, ದಢೂತಿ ರೌಡಿಗಳನ್ನು ಹೊಡೆದುರುಳಿಸಿಕೊಂಡು ಮುಂದೆ ಸಾಗುತ್ತಿದ್ದರು. ಊಟದ ಬ್ರೇಕ್‌ನಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಹಾಗೆ ನೋಡಿದರೆ ಚಿತ್ರತಂಡಕ್ಕೆ ಹೇಳಿಕೊಳ್ಳಲು ಹೆಚ್ಚೇನು ವಿಷಯವಿರಲಿಲ್ಲ.
ನಿರ್ದೇಶಕ ಚಂದ್ರುಗೆ ಅಂದುಕೊಂಡಂತೆ ಸಿನಿಮಾ ಮಾಡಿದ ಖುಷಿ. ಇಲ್ಲಿವರೆಗೆ ಸುಮಾರು 60ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಇನ್ನೂ ಸುಮಾರು 20 ದಿನಗಳ ಕಾಲ ಚಿತ್ರೀಕರಣ ಬಾಕಿ ಇದೆಯಂತೆ. ಕ್ಲೈಮ್ಯಾಕ್ಸ್ ಅನ್ನು ಕೇರಳದಲ್ಲಿ ಮಾಡುವ ಉದ್ದೇಶವಿದೆಯಂತೆ. ಚಿತ್ರದ ಸಾಹಸ ದೃಶ್ಯವನ್ನು ವಿನೋದ್ ಸಂಯೋಜಿಸಿದ್ದಾರೆ. ಅವರು ವಿಜಿಯ ಸ್ನೇಹಿತ. ಚಿಕ್ಕ ಒಂದು ಇಂಟ್ರೋಡಕ್ಷನ್ ಬಿಟ್ ಅನ್ನು ಕಂಫೋಸ್ ಮಾಡೋಕೆ ವಿನೋದ್‌ಗೆ ಕೊಟ್ಟರಂತೆ.
ಅದನ್ನು ಅವರು ಕಟ್ಟಿಕೊಟ್ಟ ರೀತಿಯಿಂದ ಖುಷಿಯಾದ ಚಂದ್ರು, ಚಿತ್ರದ ಎಲ್ಲಾ ಫೈಟ್ ಅನ್ನು ಅವರಿಗೆ ಕೊಟ್ಟಿದ್ದಾಗಿ ಹೇಳುತ್ತಾರೆ. ಉಳಿದಂತೆ ಚಿತ್ರ ಅಂದುಕೊಂಡಂತೆ ಮೂಡಿಬರುತ್ತಿರುವ ಖುಷಿ ವ್ಯಕ್ತಪಡಿಸಿದರು. ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಈಗ ನಾಯಕಿ ಹರಿಪ್ರಿಯಾ ಚಿತ್ರತಂಡ ಸೇರಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದನ್ನು “ಯುಗ’ ಚಂದ್ರು ಮಾಡುತ್ತಿದ್ದಾರೆ. ಅವರು ಕೂಡಾ ಈ ಪಾತ್ರ ಮಾಡಲು ವಿಜಯ್ ಕಾರಣವಂತೆ. ಅವರಲ್ಲಿನ ಖಡಕ್ ಲುಕ್ ನೋಡಿ, ಚಿತ್ರದಲ್ಲಿ ವಿಲನ್ ಪಾತ್ರ ಕೊಟ್ಟಿದ್ದಾರೆ. ರವಿಶಂಕರ್ ಜೊತೆ ಜೊತೆಗೆ ಸಾಗಿಬರುವ ಪಾತ್ರವಂತೆ.
ನಾಯಕ ವಿಜಯ್ ಹೆಚ್ಚೇನು ಮಾತನಾಡಲಿಲ್ಲ. “ಪ್ರತಿ ಸಿನಿಮಾದಲ್ಲೂ ಏನೋ ಹೊಸತನ ನೀಡಲು ಪ್ರಯತ್ನಿಸುತ್ತಿದ್ದೇವೆ. ಅದರಂತೆ ಇಲ್ಲೂ ಮಾಡುತ್ತಿದ್ದೇವೆ. ಖರ್ಚು ವಿಚಾರದಲ್ಲಿ ಚಂದ್ರು ತಲೆಕೆಡಿಸಿಕೊಳ್ಳುವುದಿಲ್ಲ.
ಸಿನಿಮಾಕ್ಕೇನು ಬೇಕೋ ಅದನ್ನು ಕೊಡುತ್ತಾರೆ. ಆ ವಿಚಾರದಲ್ಲಿ ಚಂದ್ರು ಅವರನ್ನು ಮೆಚ್ಚಬೇಕು’ ಎಂಬುದು ವಿಜಯ್ ಮಾತು. ಛಾಯಾಗ್ರಾಹಕ ಸತ್ಯ ಹೆಗಡೆ ಕೂಡಾ ವಿಜಿ ಮಾತನ್ನೇ ಪುನರುತ್ಛರಿಸಿದರು. ಸಾಹಸ ನಿರ್ದೇಶಕ ವಿನೋದ್ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು.