ನವದೆಹಲಿ : ”ಉರ್ದು ಮಾತಾಡಲು ಬರಲಿಲ್ಲ ಎಂದ ಕಾರಣಕ್ಕಾಗಿ ಚಂದ್ರುವನ್ನು ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ” ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಸಿಎಂ ಬಸವರಾಜ್ ಬೊಮ್ಮಾಯಿ ಬುಧವಾರ ನಿರಾಕರಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ”ನನಗೆ ಗೃಹ ಸಚಿವರ ಹೇಳಿಕೆ ಕುರಿತು ಮಾಹಿತಿ ಇಲ್ಲ. ಕೂಡಲೇ ಪ್ರಕರಣದ ವಿವರವನ್ನು ಪಡೆದು ನಿಷ್ಕರ್ಷ ಮಾಡಿ ನನ್ನ ಪ್ರತಿಕ್ರಿಯೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ಜೆ.ಜೆ.ನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಎರಡು ಯುವಕರ ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಕಾಟನ್‌ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರು(22) ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಉರ್ದು ಮಾತಾಡಲು ಆತನಿಗೆ ಹೇಳಿದ್ದಾರೆ, ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂದು ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಘಟನೆಗೆ ಸಂಬಂಧಿಸಿ ಕೆಲವರ ಬಂಧನ ಮಾಡಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದರು. ಸಚಿವರ ಹೇಳಿಕೆ ಕುರಿತು ವಿಪಕ್ಷಗಳು ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಆರಗ ಗೃಹ ಸಚಿವರಾಗುವುದಕ್ಕೆ ನಾಲಾಯಕ್: ಸಿದ್ದರಾಮಯ್ಯ
ಸಿಎಂ ಅವರು ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮ ಸೇರಿ ಹಲವು ಸಚಿವರನ್ನು ಭೇಟಿಯಾಗುವ ಸಲುವಾಗಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.