Advertisement
ಜ್ಞಾನಿಗಳು, ವಿಜ್ಞಾನಿಗಳು, ವಿದ್ವಾಂಸರು, ನಾಯಕರು, ನೌಕರರು, ಸಾಮಾನ್ಯರು ಸೇರಿದಂತೆ ಭಾರತದ ಬಹುತೇಕರು ಒಂದೇ ಪ್ರಾರ್ಥನೆಯೊಂದಿಗೆ ಒಟ್ಟಿಗೆ ಕಾಯುತ್ತಿದ್ದದು ಆ ಒಂದು ಕ್ಷಣಕ್ಕಾಗಿ, ಆ ಚಮತ್ಕಾರಕ್ಕಾಗಿ. ಚಂದಾ ಮಾಮಾ ಓಡಿ ಬಾ ಎಂದು ಕರೆಯುವ ಕಾಲ ಕಳೆದು, ಚಂದಿರನೇ ಖುದ್ದಾಗಿ ತನ್ನ ಅಂಗಳವನ್ನು ಭಾರತಕ್ಕಾಗಿ ತೆರೆದಿಟ್ಟಿದ್ದಾನೆ. ಚಂದ್ರಯಾನ-2ರ ವೈಫಲ್ಯದಿಂದ ಚೇತರಿಸಿಕೊಂಡು ಇಸ್ರೋ ಕೈಗೊಂಡ ಚಂದ್ರನೆಡೆಗಿನ ಮೂರನೇ ಯಾನವು ಸಫಲವಾಗಿದ್ದು, ಶಶಿಯ ದಕ್ಷಿಣ ಧ್ರುವದ ಮೇಲಿಳಿದ ಪ್ರಥಮ ರಾಷ್ಟ್ರವಾಗಿ ಭಾರತವು ಹೊರಹೊಮ್ಮಿದೆ.
Related Articles
Advertisement
ವಿಕ್ರಮ್ ರೋವರ್ ಚಂದ್ರನ ಅಂಗಳಕ್ಕಿಳಿಯುವ ಸಂದರ್ಭವನ್ನು ಬೆಂಗಳೂರಿನಲ್ಲಿ ಸಾವಿರಾರು ಮಂದಿ ಒಟ್ಟಿಗೆ ವೀಕ್ಷಿಸಿದರು. ಕೆಲವರು ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜ ಮತ್ತು ಇಸ್ರೋದ ಲೋಗೋ ಚಿತ್ರಿಸಿಕೊಂಡಿದ್ದರೆ, ಹಲವರ ಕೈಯಲ್ಲಿ ತ್ರಿವರ್ಣ ಧ್ವಜವಿತ್ತು. ತಮಿಳುನಾಡಿನ ಕೆಲವು ಕಡೆಗಳಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಒಂದೆಡೆ ಸೇರಿ ಇಸ್ರೋದ ನೇರಪ್ರಸಾರವನ್ನು ವೀಕ್ಷಿಸಿದರು. ಪ್ರಯಾಗರಾಜದಲ್ಲಿ ಪಟಾಕಿಗಳನ್ನು ಸಿಡಿಸುವ ಮೂಲಕ ಈ ಯಶಸ್ಸನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಇದಕ್ಕೆ ಪುಷ್ಟಿ ಕೊಡುವಂತೆ ಹಲವೆಡೆ ಚಂದ್ರಯಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನಗಳನ್ನು ಏರ್ಪಡಿಸಿ ಜನಸಾಮಾನ್ಯರಿಗೆ ಅದರ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಕೈಗೊಳ್ಳಲಾಗಿತ್ತು.
ಅಮುಲ್ ತನ್ನ ಜಾಹಿರಾತಿಗೂ ಚಂದ್ರಯಾನದ ಸಿಹಿ ಬೆರೆಸಿದರೆ, ಗೂಗಲ್ ತನ್ನ ಡೂಡಲ್ ಬದಲಾಯಿಸಿ ಸಂಭ್ರಮಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ, ರಷ್ಯಾದ ಅಧ್ಯಕ್ಷ ವಾಲ್ಡಿಮಿರ್ ಪುಟಿನ್, ಯು.ಎ.ಇ.ಯ ಶೇಕ್ ಮೊಹಮ್ಮದ್, ಬಾಂಗ್ಲಾದ ಪ್ರಧಾನಿ ಶೇಕ್ ಹಸೀನಾ, ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ, ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ಬಹುಕಡೆಗಳಿಂದ ಶುಭಹಾರೈಕೆಗಳು ಹರಿದುಬಂದಿದೆ. ಪಕ್ಕದ ಪಾಕಿಸ್ಥಾನವೂ ಭಾರತದ ಸಾಧನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ ಹಾಗೂ ವಿಚಿತ್ರ.
ಇದು ಕಥೆಯ ಕೊನೆಯಲ್ಲ. ಇಲ್ಲಿಂದಲೇ ಹೊಸದೊಂದು ಅಧ್ಯಾಯ ಶುರುವಾಗಲಿದೆ. ಅಂಗಳದಲ್ಲಿ ನಿಂತು ನೋಡಿದರೆ ಅಂಗೈ ಅಗಲ ಕಾಣುವ ಚಂದ್ರನ ಅಗಾಧವಾದ ಅಂಗಳದಲ್ಲಿ ಅನೇಕ ಸಂಶೋಧನೆಗಳು ಬಾಕಿ ಇವೆ. ಗೂಡಿನಿಂದ ಹೊರಬಂದ ಪ್ರಗ್ಯಾನ್ ರೋವರ್ ಚಂದಿರನ ನೆಲದಲ್ಲಿ ರಾಷ್ಟ್ರದ ಲಾಂಛನ ಮತ್ತು ಇಸ್ರೋದ ಚಿಹ್ನೆಯನ್ನು ಅಚ್ಚೊತ್ತಿದೆ. ಜತೆಗಿರುವ ಉಪಕರಣಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತ ಕಾರ್ಯಸನ್ನದ್ಧವಾಗುತ್ತಿವೆ. ತನ್ನ ಸಹೋದರನ ನೆಲದಿಂದ ಬರಲಿರುವ ರೋಚಕ ಮಾಹಿತಿಗಳಿಗಾಗಿ ಇತ್ತ ಭೂರಮೆ ಕಾಯುತ್ತಿದ್ದಾಳೆ.
-ಮೈತ್ರಿ ಎಸ್. ಅಶ್ವತ್ಥಪುರ,
ಸಂತ ಅಲೋಶಿಯಸ್ ಕಾಲೇಜು,
ಮಂಗಳೂರು