ಶಿವಮೊಗ್ಗ: ಯಶಸ್ವಿ ಚಂದ್ರಯಾನ ನಮ್ಮ ಕಣ್ಣಿಂದ ನೋಡುವ ಸೌಭಾಗ್ಯ ಭಾರತಕ್ಕೆ ಸಿಕ್ಕಿರುವುದು ಎಲ್ಲರ ಪುಣ್ಯ. ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಪ್ರಪಂಚದ ಮೊದಲ ರಾಷ್ಟ್ರ ಎಂದು ಇಡೀ ಪ್ರಪಂಚ ಕೊಂಡಾಡುತ್ತಿದೆ. ನಮ್ಮೆಲ್ಲ ವಿಜ್ಞಾನಿಗಳಿಗೆ ಎಲ್ಲರ ಪರವಾಗಿ ಸಾಷ್ಟಾಂಗ ನಮಸ್ಕಾರಗಳು ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ. ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಒಂದು ದೇಶ -ಒಂದು ಪ್ರಪಂಚ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆ ದಿಕ್ಕಿನಲ್ಲಿ ನಾವು ಯಶಸ್ವಿಯಾಗಿ ಸಾಗುವಲ್ಲಿ ವಿಜ್ಞಾನಿಗಳು ಸ್ಫೂರ್ತಿಯಾಗಿದ್ದಾರೆ. ಚಂದ್ರನಲ್ಲಿ ಹೋಗಿರುವುದು ನಮಗೆಲ್ಲ ಹೆಮ್ಮೆ. ವಿಶ್ವದಲ್ಲೇ ನಾವು ಮೊದಲನೇ ಸ್ಥಾನದಲ್ಲಿದ್ದೇವೆ ಎಂಬ ಗರ್ವ’ ಎಂದರು.
‘ಈ ದೇಶದ ವಿಜ್ಞಾನಿಗಳು ಕೂಡ ದೇವರನ್ನು ನಂಬುತ್ತಾರೆ. ಆ ನಂಬಿಕೆ ಇಟ್ಟುಕೊಂಡು ಪೂಜೆ ಮಾಡಿ ಹೋಗಿದ್ದಾರೆ, ಅದು ಕೂಡ ಅವರನ್ನು ಕಾಪಾಡಿದೆ’ ಎಂದರು.
‘ರಷ್ಯಾ 1700 ಕೋಟಿ ರೂ. ಖರ್ಚು ಮಾಡಿದರೂ ಯಶ ಸಿಗಲಿಲ್ಲ, ಭಾರತ ಕೇವಲ 650 ಕೋಟಿ ರೂ ಖರ್ಚು ಮಾಡಿ ಯಶಸ್ವಿಯಾಗಿದೆ. ನಮ್ಮ ವಿಜ್ಞಾನಿಗಳ ವಿಶೇಷ ಸಾಧನೆ ಮೆಚ್ಚಿದಷ್ಟೂ ಕಡಿಮೆಯೇ’ಎಂದರು.
ಚಂದ್ರಯಾನ ಬಗ್ಗೆ ನಟ ಪ್ರಕಾಶ ರಾಜ್ ವ್ಯಂಗ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಪ್ರಕಾಶ್ ರಾಜ್ ಬಗ್ಗೆ ನಾನು ಮಾತನಾಡಲು ಇಷ್ಟ ಪಡೊಲ್ಲ. ಚಂದ್ರಯಾನ ಯಶಸ್ವಿಯಾಗಿ ರುವ ಸಂದರ್ಭದಲ್ಲಿ ಅವರು ದೇಶಕ್ಕೆ, ವಿಜ್ಞಾನಿಗಳಿಗೆ ಅಪಮಾನ ಮಾಡಿದ್ದಾರೆ. ಅವರು ದೊಡ್ಡವರಾಗಿ ಕ್ಷಮೆ ಕೇಳಬೇಕು. ಮುಂದಿನದ್ದು ಅವರಿಗೆ ಬಿಟ್ಟ ವಿಚಾರ’ ಎಂದರು.