ವಾಷಿಂಗ್ಟನ್:ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸುವ ಉದ್ದೇಶದಿಂದ ಇಸ್ರೋ ಕಳುಹಿಸಿದ್ದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಹಾರ್ಡ್ ಲ್ಯಾಂಡಿಂಗ್ ಆದ ಸ್ಥಳದ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಏಜೆನ್ಸಿ ನಾಸಾ ಇಂದು (ಸೆ.26) ಬಿಡುಗಡೆ ಮಾಡಿದೆ. ಆದರೆ ಸಂಪರ್ಕ ಕಡಿತಗೊಂಡಿದ್ದ ವಿಕ್ರಮ್ ಲ್ಯಾಂಡರ್ ನಿಖರವಾಗಿ ಯಾವ ಪ್ರದೇಶದಲ್ಲಿ ಬಿದ್ದಿದೆ ಎಂಬುದನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ತಿಳಿಸಿದೆ.
ವಿಕ್ರಮ್ ಲ್ಯಾಂಡರ್ ದಕ್ಷಿಣ ಧ್ರುವ ಭಾಗದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿದೆ ಎಂಬುದು ನಾಸಾ ಕಳುಹಿಸಿರುವ ಹೊಸ ಚಿತ್ರದಿಂದ ಸ್ಪಷ್ಟವಾಗಿದೆ. ಚಂದ್ರನ ಸುತ್ತ ಸುತ್ತುತ್ತಿರುವ ನಾಸಾದ ಲೂನಾರ್ ರೆಕಗ್ ನೈಸನ್ಸ್ ಆರ್ಬಿಟರ್ ಕ್ಯಾಮೆರಾ(ಎಲ್ ಆರ್ ಒಸಿ) ಕ್ಷಿಪ್ರವಾಗಿ ಅತ್ಯುತ್ತಮ ಗುಣಮಟ್ಟದ ಫೋಟೋವನ್ನು ರವಾನಿಸಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಸೆಪ್ಟೆಂಬರ್ 6ರಂದು ಕೊನೆಗಳಿಗೆಯಲ್ಲಿ ಸಂಪರ್ಕ ಕಡಿದುಕೊಂಡು ಚಂದ್ರನ ದಕ್ಷಿಣ ಧ್ರವಭಾಗದಲ್ಲಿ ಬೀಳುವ ಮೂಲಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ವಿಕ್ರಮ್ ಲ್ಯಾಂಡರ್ ನ ಪ್ರಥಮ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿತ್ತು.
ಇದೀಗ ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿಲೋ ಮೀಟರ್ (370 ಮೈಲಿ)ನಷ್ಟು ದೂರದಲ್ಲಿ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿದೆ ಎಂದು ನಾಸಾ ತಿಳಿಸಿದೆ.