ಬೆಂಗಳೂರು/ಹೊಸದಿಲ್ಲಿ: “ಚಂದ್ರ ಯಾನ-2′ ಯೋಜನೆಯಡಿ ಚಂದ್ರನ ಮೇಲ್ಮೆ„ ಮೇಲೆ ಇಳಿಯಲಿರುವ “ವಿಕ್ರಮ್’ ಹೆಸರಿನ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಯಿಂದ ಯಶಸ್ವಿಯಾಗಿ ಹೊರತರಲಾಗಿದೆ.
ಇತ್ತೀಚೆಗೆ, ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ್ದ “ಚಂದ್ರಯಾನ-2′ ಆಕಾಶಕಾಯದಲ್ಲಿದ್ದ ಲ್ಯಾಂಡರ್ ಹಾಗೂ ಆರ್ಬಿಟರ್‌ಗಳನ್ನು ಸೋಮವಾರವಷ್ಟೇ ಬೇರ್ಪಡಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ 3:42ರ ಸುಮಾರಿಗೆ ಕಕ್ಷೆಯಿಂದ ಲ್ಯಾಂಡರ್ ಕಳಚಿಕೊಂಡು ಚಂದ್ರನತ್ತ ಧಾವಿಸುವಂತೆ ಮಾಡಲಾಯಿತು. ಮುಂದಿನ ಹಂತದಲ್ಲಿ, ಸೆ. 6ರ ಮಧ್ಯರಾತ್ರಿ 1.30ರಿಂದ 2:30ರ ನಡುವೆ ಅದು ಚಂದ್ರನ ದಕ್ಷಿಣ ಧ್ರುವದ ಮೇಲೆ “ಸಾಫ್ಟ್ ಲ್ಯಾಂಡಿಂಗ್’ ಆಗಲಿದೆ. ಸೆ. 7ರ ಬೆಳಗಿನ ಜಾವ 5:30ರಿಂದ 6:30ರ ಅವಧಿಯಲ್ಲಿ ಲ್ಯಾಂಡರ್‌ನ ಒಳಗಿನಿಂದ ರೋವರ್ ಆಚೆ ಬಂದು ಚಂದ್ರನ ಅಧ್ಯಯನಕ್ಕೆ ತೊಡಗುತ್ತದೆ.
ಪಿಎಂ ಜತೆಗೆ 60 ವಿದ್ಯಾರ್ಥಿಗಳು: ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲ್ಮೆ„ ಮೇಲೆ ಇಳಿಯಲಿರುವ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ, ನಾನಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸುಮಾರು 60 ವಿದ್ಯಾರ್ಥಿಗಳ ಜತೆಗೆ ಕಣ್ತುಂಬಿಕೊಳ್ಳಲಿದ್ದಾರೆ. ಇದಕ್ಕಾಗಿ, ತಾನು ಆಯೋಜಿಸಿದ್ದ ಆನ್‌ಲೈನ್ ಕ್ವಿಜ್‌ನಲ್ಲಿ ಉತ್ತಮ ಸಾಧನೆ ತೋರಿದ 60 ವಿದ್ಯಾರ್ಥಿಗಳಿಗೆ ಇಸ್ರೋ ಆಮಂತ್ರಣ ನೀಡಿದೆ.
ಇದರಿಂದ ವಿದ್ಯಾರ್ಥಿಗಳು, ರೋಮಾಂಚನಗೊಂಡಿದ್ದಾರೆ. ಈ ಕುರಿತು ಮಾತನಾಡಿದ ದೆಹಲಿಯ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿರುವ ಮನೋಗ್ಯ ಸಿಂಗ್ ಸುಯಂಶ್ ಎಂಬ 9ನೇ ತರಗತಿ ವಿದ್ಯಾರ್ಥಿ, ಇಸ್ರೋ ಸಂಸ್ಥೆಯಲ್ಲೇ ಖುದ್ದಾಗಿ ಕುಳಿತು ಲ್ಯಾಂಡಿಂಗ್ ನೋಡುವುದು ವಿಶೇಷ ಅನುಭೂತಿ ತರಲಿದೆ ಎಂದಿದ್ದಾರೆ.
ಆಂಧ್ರಪ್ರದೇಶದ 10ನೇ ತರಗತಿ ವಿದ್ಯಾರ್ಥಿನಿ ಪ್ರಗಾದ ಕಾಂಚನ ಬಾಲಶ್ರೀ ವಾಸವಿ, ಐತಿಹಾಸಿಕ ಕ್ಷಣವೊಂದನ್ನು ಪ್ರಧಾನಿ ಜತೆ ಕಳೆಯುವುದೂ ಒಂದು ರೋಮಾಂಚಕ ಎಂದಿದ್ದಾರೆ. ಇನ್ನು, ಒಡಿಶಾದ ಚಿನ್ಮಯ ಚೌಧರಿ ಎಂಬ ವಿದ್ಯಾರ್ಥಿ, “ಇಸ್ರೋದ ಆಮಂತ್ರಣ ನೋಡಿದ ಕೂಡಲೇ ರೋಮಾಂಚನವಾಯಿತು. ನನ್ನ ತಂದೆಯೊಡನೆ ನಾನು ಇಸ್ರೋ ಕಚೇರಿಗೆ ಹೋಗಲಿದ್ದೇನೆ’ ಎಂದಿದ್ದಾರೆ.
ಅನ್ಯ ಗ್ರಹದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿಸುವುದು ಇಸ್ರೋ ಪಾಲಿಗೆ ಅತ್ಯಂತ ಭಯಾನಕ ಕೆಲಸ. ಇಂಥ ಕೆಲಸವನ್ನು ಇಸ್ರೋ ಹಿಂದೆಂದೂ ಮಾಡಿರಲಿಲ್ಲ. ಹಾಗಾಗಿ, ನಮ್ಮಲ್ಲಿ ಒತ್ತಡ ಹೆಚ್ಚಿದೆ.
ಕೆ. ಶಿವನ್, ಇಸ್ರೋ ಅಧ್ಯಕ್ಷ