Advertisement

ಚಂದ್ರವಳ್ಳಿ ಜಾಗ ಖಾಸಗಿ ಪಾಲಾಗಲು ಬಿಡಲ್ಲ

12:29 PM Jul 11, 2020 | Suhan S |

ಚಿತ್ರದುರ್ಗ: ನಗರದ ಚಂದ್ರವಳ್ಳಿ ಮುಂಭಾಗದಲ್ಲಿರುವ 38 ಎಕರೆ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಲು ಬಿಡುವುದಿಲ್ಲ. ಅಧಿಕಾರಿಗಳು ಅಳತೆ ಮಾಡಿ ಹದ್ದುಬಸ್ತು ಮಾಡಿ ಅಭಿವೃದ್ಧಿ ಕಾರ್ಯ ಆರಂಭಿಸಬೇಕು ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದರು.

Advertisement

ಭೂಮಾಪನಾ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಚಂದ್ರವಳ್ಳಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಉತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸಲು ಪ್ರವಾಸೋದ್ಯಮ ಇಲಾಖೆಯಿಂದ 10 ಕೋಟಿ ರೂ. ಅನುದಾನ ನೀಡಲು ಸಿದ್ಧವಿದ್ದಾರೆ. ಈ ನಿಟ್ಟಿನಲ್ಲಿ ಚಂದ್ರವಳ್ಳಿ ಮುಂಭಾಗದ 38 ಎಕರೆಯನ್ನೂ ಅಳತೆ ಮಾಡಿ ಬಾಂದ್‌ ಹಾಕಿ ಉದ್ಯಾನವನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ಚಂದ್ರವಳ್ಳಿ ಮುಂಭಾಗದಲ್ಲಿ ಸರ್ಕಾರ ಹಾಗೂ ಮುರುಘಾ ಮಠಕ್ಕೆ ಸೇರಿದ ಜಮೀನಿದೆ. ಕೋಟೆಗೆ ಸೇರಿದ ಬೆಟ್ಟಕ್ಕೆ ಕೇಂದ್ರ ಪುರಾತತ್ವ ಇಲಾಖೆ ಬೇಲಿ ಹಾಕಿದೆ. ಬೇಲಿ ಸಮೀಪದಲ್ಲಿರುವ ಸರ್ಕಾರಿ ಭೂಮಿಯನ್ನು ಕೆಲ ವ್ಯಕ್ತಿಗಳು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದರು. ಉದ್ಯಾನ ನಿರ್ಮಾಣಕ್ಕೆ ಮುಂದಾದಾಗ ಭೂ ಕಬಳಿಕೆ ವಿಚಾರ ಸಂಸದರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಭೂಮಿಯನ್ನು ಆಳತೆ ಮಾಡಿ ಸ್ವಾಧೀನಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಂದ್ರವಳ್ಳಿ ಕೆರೆ ಮುಂಭಾಗದಲ್ಲಿ 38 ಎಕರೆ ಹಾಗೂ ಹಿಂಭಾಗದಲ್ಲಿ 19 ಎಕರೆ ಸರ್ಕಾರಿ ಖರಾಬು ಇದೆ. ಇದನ್ನು ಸ್ವಾಧೀನಕ್ಕೆ ಪಡೆಯಲು ಯಾರನ್ನೂ ಕೇಳಬೇಕಾಗಿಲ್ಲ. ಖಾಸಗಿ ವ್ಯಕ್ತಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇದನ್ನು ಸಂಪೂರ್ಣ ಸ್ವಾಧೀನಕ್ಕೆ ಪಡೆದು ಉದ್ಯಾನ ನಿರ್ಮಾಣ ಮಾಡಲಾಗುವುದು ಎಂದು ಸಂಸದರು ಸುದ್ದಿಗಾರರಿಗೆ ತಿಳಿಸಿದರು.

ಹುಲುಗುಂದೆ ಹಾಗೂ ನೇರಲಗುಂದೆ ಗ್ರಾಮಕ್ಕೆ ಸೇರಿದ ಸರ್ಕಾರಿ ಖರಾಬು ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗಲು ಬಿಡುವುದಿಲ್ಲ. ಕಾನೂನು ಪ್ರಕಾರವೇ ಇದನ್ನು ಸ್ವಾಧಿಧೀನಕ್ಕೆ ಪಡೆಯಲಾಗುತ್ತದೆ. ಎರಡು ಬಾರಿ ಅಳತೆ ಮಾಡಲಾಗಿದ್ದು, ವಾರದಲ್ಲಿ ಕಲ್ಲು, ಬಾಂದ್‌ ಹಾಕಲಾಗುವುದು. ಕೇಂದ್ರ ಪುರಾತತ್ವ ಇಲಾಖೆ ಕೂಡ ಐದಾರು ಎಕರೆ ಒತ್ತುವರಿ ಮಾಡಿ ಬೇಲಿ ಹಾಕಿದೆ. ಈಗ ಇದನ್ನು ಪ್ರಶ್ನಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಚಂದ್ರವಳ್ಳಿ ಕರೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರ ಜತೆ ಹಲವು ಸುತ್ತಿನ ಸಭೆ ನಡೆಸಿದ್ದೇನೆ. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರೊಂದಿಗೂ ಚರ್ಚಿಸಿದ್ದೇನೆ. ಕೆರೆಯನ್ನು ಇನ್ನಷ್ಟು ವಿಸ್ತರಿಸಿ ಬೋಟಿಂಗ್‌ ವ್ಯವಸ್ಥೆ ಮಾಡಲಾಗುವುದು, ವಾಯುವಿಹಾರಕ್ಕೆ ಪಥ ನಿರ್ಮಾಣ, ಕಾರಂಜಿ, 100 ಅಡಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಈ ವೇಳೆ ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next