ಅಮರಾವತಿ: ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ನಿಗಮ ಹಗರಣ ಆರೋಪದಲ್ಲಿ ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ. ಮುಂದಿನ ವರ್ಷ ಲೋಕಸಭೆಯ ಚುನಾವಣೆಯ ಜತೆಗೆ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು “ಚೆನ್ನಾಗಿ ಬಳಸಿಕೊಳ್ಳಲು’ ಟಿಡಿಪಿ ಮತ್ತು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಮುಂದಾಗಿವೆ.
ಸದ್ಯದ ಆಂಧ್ರ ರಾಜಕೀಯದಲ್ಲಿ ಪ್ರಮುಖ ನಾಯಕರೆಂದರೆ ಚಂದ್ರಬಾಬು ನಾಯ್ಡು ಮತ್ತು ವೈ.ಎಸ್. ಜಗನ್ಮೋಹನ ರೆಡ್ಡಿ. ಇಬ್ಬರು ಕೂಡ ಪ್ರತಿಪಕ್ಷ ನಾಯಕರಾಗಿದ್ದವರು. ಜಗನ್ಮೋಹನ ರೆಡ್ಡಿ ಪ್ರತಿಪಕ್ಷ ನಾಯಕರಾಗಿ, ಈಗ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕೂಡ ಹಿಂದೊಮ್ಮೆ ಜೈಲು ಶಿಕ್ಷೆ ಅನುಭವಿಸಿದವರೇ.
ಕೇವಲ ದ್ವೇಷ ರಾಜಕೀಯದ ಕಾರಣಕ್ಕಾಗಿಯೇ ಸಿಎಂ ಜಗನ್ ಅವರು ನಾಯ್ಡು ಬಂಧನಕ್ಕೆ ಆದೇಶಿಸಿದ್ದಾರೆ ಎನ್ನುವುದು ಟಿಡಿಪಿಯ ವಾದ.
ಹಿಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಈಗ ಈ ಪ್ರಕರಣವನ್ನೇ “ವರದಾನ’ವನ್ನಾಗಿ ಮಾರ್ಪಡಿಸಲು ಮುಂದಾಗಿದೆ. ಸೋಮವಾರದ ಬಂದ್ ಕರೆಯೂ ಈ ತಂತ್ರದಲ್ಲಿ ಒಂದು. ಸದರಿ ಪ್ರಕರಣದ ಕಾವನ್ನು ಒಂದಷ್ಟು ಸಮಯದವರೆಗೆ ಕಾಯ್ದುಕೊಳ್ಳಲು ನಾಯ್ಡು ನಿರ್ಧರಿಸಿದ್ದಾರೆ.
2019ರಲ್ಲಿ ನಾಯ್ಡು ಅವರನ್ನು ಸ್ವಕ್ಷೇತ್ರ ಕುಪ್ಪಂನಲ್ಲಿ ಸೋಲಿಸಿದ ಬಳಿಕ ವೈಎಸ್‌ಆರ್‌ಸಿಪಿ ವಿಶ್ವಾಸ ಇಮ್ಮಡಿಯಾಗಿದೆ. 1989ರಿಂದ ಚಂದ್ರಬಾಬು ಸತತವಾಗಿ ಗೆಲ್ಲುತ್ತಾ ಬರುತ್ತಿದ್ದರು. ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಬಿಜೆಪಿಯ ವೋಟ್‌ಬ್ಯಾಂಕ್ ಅನ್ನು ವಿಭಜಿಸಿದ್ದರಿಂದ ನಾಯ್ಡು ಅವರ ಮತ ಪ್ರಮಾಣ ಶೇ.60ರಿಂದ ಶೇ.55.18ಕ್ಕೆ ಕುಸಿದಿತ್ತು.
ಇನ್ನು ಹಾಲಿ ಸಿಎಂ ಜಗನ್‌ಗೆ ಸದ್ಯದ ಮಟ್ಟಿಗೆ ಜನಬೆಂಬಲ ಇದ್ದರೂ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಅರಿವು ಅವರಿಗಿದೆ. ಅದೇ ಕಾರಣಕ್ಕಾಗಿ ನಾಯ್ಡು ಅವರನ್ನು ಈ ಪ್ರಕರಣದ ಮೂಲಕ ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನ ನಡೆಸಿದ್ದಾರೆ. ಅವರು ಜನಸೇನಾ ಪಕ್ಷ ಹಾಗೂ ಬಿಜೆಪಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಮುಂದಿನ ಚುನಾವಣೆಗೆ ಈ ಎರಡು ಪಕ್ಷಗಳ ಜತೆ ಮೈತ್ರಿಗೂ ಮುಂದಾಗುತ್ತಿದ್ದಾರೆ.