Advertisement

ಅಮರಾವತಿ? ಧರೆಗಿಳಿಯುತ್ತಾ; ಚಂದ್ರಬಾಬು ನಾಯ್ಡು ಕನಸಿನ ಆಂಧ್ರ ರಾಜಧಾನಿಗೆ ಮತ್ತೆ ಚಾಲನೆ

11:21 PM Jun 12, 2024 | Team Udayavani |

ಎನ್‌. ಚಂದ್ರಬಾಬು ನಾಯ್ಡು ಅವರ “ಅಮರಾವತಿ ಕನಸು’ಗಳು ಮತ್ತೆ ಗರಿಗೆದರಿವೆ. 5 ವರ್ಷ ಶೈತ್ಯಾಗಾರದಲ್ಲಿದ್ದ ಆಂಧ್ರ ಪ್ರದೇಶ ರಾಜಧಾನಿ “ಅಮರಾವತಿ’ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದ್ದು, ಆ ಕುರಿತು ಮಾಹಿತಿ.

Advertisement

“ಭವಿಷ್ಯದ ನಗರ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಆಂಧ್ರ ಪ್ರದೇಶದ ರಾಜಧಾನಿ “ಅಮರಾವತಿ’ ಯ ಭವಿಷ್ಯ ಕಳೆದ 5 ವರ್ಷದಿಂದ ಅಂಧಾಕಾರದಲ್ಲಿತ್ತು! ಈಗ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅಮರಾವತಿ ಕನಸುಗಳು ಮತ್ತೆ ಗರಿಗೆದರಿವೆ. ಇದಕ್ಕೆ ಪುಷ್ಟಿಯಾಗಿ ನೂತನ ಸಿಎಂ ಚಂದ್ರಬಾಬು ನಾಯ್ಡು ಅವರೇ ಆಂಧ್ರದ ರಾಜಧಾನಿ ಅಮರಾವತಿಯೇ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ನಗರವನ್ನಾಗಿ ರೂಪಿಸುವ ನಾಯ್ಡು ಅವರ ಕನಸಿಗೆ, ವೈಎಸ್‌ಆರ್‌ಪಿ ನಾಯಕ ಜಗನ್‌ ಮೋಹನ್‌ ರೆಡ್ಡಿ ಆಡಳಿತದಲ್ಲಿ ಯಾವುದೇ ಬೆಲೆ ಇರಲಿಲ್ಲ. ರಾಜಕೀಯ ಕಾರಣಕ್ಕಾಗಿ ಅಮರಾವತಿ ದಿಕ್ಕಿಲ್ಲದ ಪರದೇಶಿಯಂತಾಗಿತ್ತು!

ಕೃಷ್ಣಾ ನದಿಯ ದಡದಲ್ಲಿರುವ ಅಮರಾವತಿ ನಿರ್ಮಾಣಕ್ಕೆ ಹೊಸ ಅಂದಾಜು ಪ್ರಕಾರ 40ರಿಂದ 50 ಸಾವಿರ ಕೋಟಿ ರೂ.ಬೇಕು!. ನಗರದ ನಾನಾ ಮೂಲ ಸೌಕರ್ಯ ಹಾಗೂ ಹಲವು ಸರಕಾರಿ ಕಟ್ಟಡಗಳ ನಿರ್ಮಾಣ ಅಗತ್ಯವಿದೆ. ಆರಂಭದಲ್ಲಿ ನಗರ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂ. ಬೇಕಾಗಬಹುದು ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಎಪಿಸಿಆರ್‌ಡಿಎ) ಅಂದಾಜಿಸಿತ್ತು.

ಅದೀಗ ಆಲ್ಮೋಸ್ಟ್‌ ದುಪ್ಪಟ್ಟಾಗಿದೆ. ನಾಯ್ಡು ಸಿಎಂ ಆಗಿದ್ದಾಗ 10,500 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಕಟ್ಟಡಗಳ ನಿರ್ಮಾಣಕ್ಕೆ 10ರಿಂದ 12 ಸಾವಿರ ಕೋಟಿ ರೂ. ಬೇಕಾಗಿತ್ತು. ಆದರೆ ಅಷ್ಟರಲ್ಲೇ ಅವರು ಅಧಿಕಾರ ಕಳೆದುಕೊಂಡರು. ರೈತರಿಂದ 33,000 ಎಕ್ರೆ ಜಮೀನು ಸ್ವಾಧೀನ ಮಾಡಿಕೊಂಡರೇ ಸರಕಾರದ್ದೇ 4000 ಎಕ್ರೆ ಜಮೀನು ಈ ನಗರಕ್ಕೆ ಬಳಕೆಯಾಗಿದೆ. ಮೊದಲಿನ ಯೋಜನೆ ಪ್ರಕಾರ ಈ ನಗರವು 217 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 1600 ಎಕರೆಯಲ್ಲಿ Óರಕಾರಿ ಕಟ್ಟಡಗಳು ಇರಲಿವೆ. ನವೀಕರಿಸಬಹುದಾದ ಇಂಧನ ಆಧರಿತ 12ಕ್ಕೂ ಹೆಚ್ಚು ಸಿವಿಕ್‌ ಕ್ಲಸ್ಟರ್‌ಗಳಿವೆ. ಸಿಂಗಾಪುರದಿಂದ ಪ್ರೇರಿತಗೊಂಡು, ವಿದ್ಯುನ್ಮಾನ ಬಸ್‌ಗಳು, ವಾಟರ್‌ ಟ್ಯಾಕ್ಸಿಗಳು, ಮೆಟ್ರೋ ಮತ್ತು ಸೈಕಲ್‌ಗ‌ಳ ಸಂಪರ್ಕ ಮೂಲಕ ಅಮರಾವತಿಯನ್ನು “ಸುಸ್ಥಿರ ನಗರ’ವನ್ನಾಗಿ ರೂಪಿಸುವ ಯೋಜನೆ ಇತ್ತು.

ನಾಯ್ಡು “ಕನಸಿನ’ ಯೋಜನೆ
ರಾಜಧಾನಿ ಅಮರಾವತಿ ಚಂದ್ರಬಾಬು ನಾಯ್ಡು ಅವರ ಕನಸಿನ ಯೋಜನೆ. ಇದು ಅವರಿಗೆ ಕೇವಲ ನಗರವಾಗಿರಲಿಲ್ಲ. ಬದಲಿಗೆ ದೂರದೃಷ್ಟಿ ಮತ್ತು ಪ್ರಗತಿಯ ಸಂಕೇತವಾಗಿತ್ತು. ತಮ್ಮ ಅಭಿವೃದ್ಧಿ ಕಾರ್ಯ ಹಾಗೂ ಆಡಳಿತದ ಅನುಭವಕ್ಕೆ ಹೆಸರುವಾಸಿಯಾಗಿದ್ದ ಚಂದ್ರಬಾಬು ಅಮರಾವತಿಯನ್ನು ಅಂತಾರಾಷ್ಟ್ರೀಯ ಮಟ್ಟದ ನಗರವನ್ನಾಗಿ ರೂಪಿಸುವ ಕನಸು ಕಂಡಿದ್ದರು. ಆದರೆ, ಈಗಾಗಲೇ ಸಾಕಷ್ಟು ಹೂಡಿಕೆ ನಷ್ಟ, ರೈತರು ಮತ್ತು ನಾಗರಿಕ ದ್ರೋಹವಾಗಿದೆ. ಇದನ್ನೆಲ್ಲ ಸರಿದೂಗಿಸುವ ಪ್ರಯತ್ನವು ನಾಯ್ಡು ಅವರಿಗೆ ಕೇವಲ ರಾಜಕೀಯ ಅಜೆಂಡಾ ಮಾತ್ರವಲ್ಲ. ಅದು ಅವರಿಗೆ ವೈಯಕ್ತಿಕ ಮತ್ತು ರಾಜಕೀಯ ಪ್ರತಿಷ್ಠೆಯಾಗಿದೆ.

Advertisement

ಅಮರಾವತಿ ಈಗ ಹೇಗಿದೆ?
ಅರ್ಧಂಬರ್ಧ ನಿರ್ಮಾಣಗೊಂಡ ಬಿಲ್ಡಿಂಗ್‌ಗಳು, ಖಾಲಿ ಸೈಟ್‌ಗಳು, ಖಾಲಿ ಜಮೀನುಗಳ ದೊಡ್ಡ ಪಟ್ಟಿಗಳು… ಇದು ಸದ್ಯದ ಅಮರಾವತಿಯ ಸ್ಥಿತಿ. ಬೃಹತ್‌ ನಗರ ನಿರ್ಮಾಣಕ್ಕೆ ಮೂಲಸೌಕರ್ಯವನ್ನು ಪೂರೈಸುವುದು ಪ್ರಮುಖವಾಗುತ್ತದೆ. ಇಲ್ಲಿ ಅದೇ ಕೊರತೆಯಾಗಿದೆ. ಈಗಲೂ ಸರಕಾರಿ ಕಚೇರಿಗಳು ತಾತ್ಕಾಲಿಕ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿವೆ. ಈ ಹಿಂದೆ ಭರವಸೆ ನೀಡಿದ ಹೈ-ಸ್ಪೀಡ್‌ ರೈಲು ಸಂಪರ್ಕ, ನವೀನ ನಗರದ ವೈಶಿಷ್ಟéಗಳು ಯಾವುದರ ಕುರುಹಗಳೂ ಅಲ್ಲಿಲ್ಲ! ಇಷ್ಟಾಗಿಯೂ ಕೆಲವು ಶಿಕ್ಷಣ ಸಂಸ್ಥೆಗಳು, ಕಂಪೆನಿಗಳು ಎಲ್ಲ ಇಲ್ಲಗಳ ನಡುವೆ ಕಾರ್ಯಾರಂಭ ಮಾಡಿವೆ. ಅಮರಾವತಿಯ ಓಣಿಗಳಲ್ಲಿ ನಡೆದು ಹೋದರೆ ಭವ್ಯ ಯೋಜನೆ ಮತ್ತು ಸದ್ಯದ ವಾಸ್ತವ ಪರಿಸ್ಥಿತಿ ನಡುವಿನ ವ್ಯತ್ಯಾಸವು ಕಣ್ಣಿಗೆ ರಾಚುತ್ತದೆ. ಅರ್ಧಕ್ಕೆ ನಿಂತ ಕಟ್ಟಡಗಳು, ಖಾಲಿ ರಸ್ತೆಗಳು ನಚ್ಚುನೂರಾದ ಕನಸುಗಳು, ಕಳೆದುಕೊಂಡ ಭರವಸೆಯ ಸಂಕೇತಗಳಂತೆ ಕಾಣುತ್ತವೆ.

ಅಮರಾವತಿ ಮೇಲೇಕೆ ಜಗನ್‌ ಮುನಿಸು?
ಆಂಧ್ರದ ರಾಜಕಾರಣವೇ ವಿಚಿತ್ರ. ಇಲ್ಲಿ ಎಲ್ಲವೂ ವೈಯಕ್ತಿಕ ಮತ್ತು ದ್ವೇಷದ ನೆಲೆಯಲ್ಲೇ ನೋಡಲಾಗುತ್ತದೆ. ಇದೇ ಕಾರಣಕ್ಕೆ ಅತ್ಯಾಧುನಿಕ ನಗರವಾಗಬೇಕಿದ್ದ ಅಮರಾವತಿ ದಿಕ್ಕಿಲ್ಲದ ನೆಲೆಯಾಗಿದ್ದು. ಹೌದು, 2019ರಲ್ಲಿ ವೈಎಸ್‌ಆರ್‌ಪಿ ನಾಯಕ ಜಗನ್‌ಮೋಹನ್‌ ರೆಡ್ಡಿ ಅಧಿಕಾರಕ್ಕೆ ಬರುತ್ತಿದ್ದಂತೆ, ಈ ಹಿಂದೆ ಆಗಿದ್ದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರ ಕನಸಿನ ನಗರಕ್ಕೆ ಕೊಳ್ಳಿ ಇಟ್ಟರು. ರಾಜಧಾನಿಯಾಗಿ ಅಮರಾವತಿಯ ಆಯ್ಕೆಯನ್ನು ಪ್ರಶ್ನಿಸಿದ ಜಗನ್‌, ಅಧಿಕಾರ ವಿಕೇಂದ್ರೀಕರಣಕ್ಕಾಗಿ ಮೂರು ರಾಜಧಾನಿಗಳ ಪ್ರಸ್ತಾವವನ್ನು ಮುಂದಿಟ್ಟರು. ಅಮರಾವತಿ ಶಾಸಕಾಂಗ, ವಿಶಾಖಪಟ್ಟಣ ಕಾರ್ಯಾಂಗ ಮತ್ತು ಕರ್ನೂಲ್‌ ನ್ಯಾಯಾಂಗ ರಾಜಧಾನಿಗಳನ್ನಾಗಿ ಮಾಡಲು ಹೊರಟರು. ಜಗನ್‌ ಅವರ ಈ ಪ್ರಸ್ತಾವಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ತಂದೆ-ತಾಯಿ ಜಗಳ ಮಧ್ಯೆ ಕೂಸು ಬಡವಾಯಿತು ಎಂಬಂತೆ ನಾಯ್ಡು-ರೆಡ್ಡಿ ವೈಯಕ್ತಿಕ ಕದನ ನಡುವೆ ಅಮರಾವತಿ ಬಡವಾಯಿತು. ಎರಡೂ ಕಡೆಯಿಂದಲೂ ಅವ್ಯವಸ್ಥೆ, ವಿಶ್ವಾಸದ್ರೋಹ, ಭ್ರಷ್ಟಾಚಾರ ಆರೋಪಗಳು ಪುಂಖಾನು ಪುಂಖವಾಗಿ ಕೇಳಿ ಬಂದವು.

ಟಿಡಿಪಿ ನಾಯಕನ ವಿರುದ್ಧ ಎಫ್ಐಆರ್‌!
ಭವಿಷ್ಯದ ನಗರ ರೂಪಿಸಲು ಹೊರಟಿದ್ದ ಚಂದ್ರಬಾಬು ನಾಯ್ಡು ಅದೇ ಕಾರಣಕ್ಕೆ ಎಫ್ಐಆರ್‌ ಕೂಡ ಎದುರಿ ಸಬೇಕಾಯಿತು. ಅಮರಾವತಿ ವರ್ತುಲ ರಸ್ತೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಆಂಧ್ರದ ಸಿಐಡಿ, 2022 ಮೇ ತಿಂಗಳಲ್ಲಿ ಚಂದ್ರಬಾಬು ನಾಯ್ಡು ಮತ್ತು ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಪೊಂಗುರು ನಾರಾಯಣ ವಿರುದ್ಧ ಎಫ್ಐಆರ್‌ ದಾಖಲಿಸಿತ್ತು.

ಅಮರಾವತಿಯಲ್ಲಿ ಮತ್ತೆ ಗಗನಕ್ಕೇರಿದ ಬೆಲೆ
ಅಮರಾವತಿಯೇ ಆಂಧ್ರ ಪ್ರದೇಶದ ಏಕೈಕ ರಾಜಧಾನಿ ಎಂದು ಎನ್‌.ಚಂದ್ರಬಾಬು ನಾಯ್ಡು ಘೋಷಿಸುತ್ತಿದ್ದಂತೆ ರಿಯಲ್‌ ಎಸ್ಟೇಟ್‌ ದಂಧೆ ಮತ್ತೆ ಹೆಡೆ ಬಿಚ್ಚಿದೆ. ಏಕಾಏಕಿ ಸೈಟುಗಳ ಬೆಲೆಯಲ್ಲಿ ಶೇ.20ರಿಂದ 30ರಷ್ಟು ಹೆಚ್ಚಳವಾಗಿದೆ. ಹೂಡಿಕೆದಾರರಲ್ಲಿ ಹೆಚ್ಚಿರುವ ವಿಶ್ವಾಸವೇ ಇದಕ್ಕೆ ಕಾರಣ. ನಗರದ ಆರ್ಥಿಕ ಮತ್ತು ನಿರ್ಮಾಣ ಚಟುವಟಿಕೆಗಳ ಮತ್ತೆ ಹೆಚ್ಚುವ ನಿರೀಕ್ಷೆಯನ್ನು ಸ್ಥಳೀಯ ಉದ್ಯಮಿಗಳು, ವ್ಯಾಪಾರಸ್ಥರು ಹೊಂದಿದ್ದಾರೆ.

ಎಲ್ಲಿದೆ ಅಮರಾವತಿ?
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೃಷ್ಣಾ ನದಿಯ ದಡದಲ್ಲಿ ಈ ನಗರವಿದೆ. ಆದರೆ ರಾಜಧಾನಿ ಪ್ರದೇಶ ವ್ಯಾಪ್ತಿಯು ಗುಂಟೂರು ಮತ್ತು ವಿಜಯವಾಡ ಜಿಲ್ಲೆಯ 29 ಹಳ್ಳಿಗಳನ್ನು
ಒಳಗೊಂಡಿದೆ.

ಅಮರಾವತಿ “ಕನಸು’ಗಳು
-ವಿಸ್ತಾರ ರಸ್ತೆಗಳು, ಫ್ಲೈಓವರ್, ಅಂಡರ್‌ಪಾಸ್‌ಗಳು ನಿರ್ಮಾಣ
-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
-ದೇಶದ ಮಾಹಿತಿ ಮತ್ತು ತಂತ್ರಜ್ಞಾನ ಕೇಂದ್ರ
-ಇಡೀ ನಗರಕ್ಕೆ ನವೀಕರಿಸಬಹುದಾದ ಇಂಧನವೇ ಆಧಾರ
-ಇಡೀ ನಗರಕ್ಕೆ ಮೆಟ್ರೋ ಸಂಪರ್ಕ
-ಅಂತಾರಾಷ್ಟ್ರೀಯ ಮಟ್ಟದ ನಗರ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next