Advertisement

Andhra Pradesh: ಕೊನೆಗೂ 31 ತಿಂಗಳ ಬಳಿಕ ಸಿಎಂ “ಶಪಥ” ಪೂರೈಸಿದ ಚಂದ್ರಬಾಬು ನಾಯ್ದು!

04:04 PM Jun 21, 2024 | Team Udayavani |

ಅಮರಾವತಿ:  ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ‘ತನ್ನ ಕುಟುಂಬಕ್ಕೆ ಅವಮಾನವಾಗಿದೆ’ಎಂದು ಸದನದಿಂದ ಹೊರಬಂದ 31 ತಿಂಗಳ ನಂತರ ಇಂದು (ಶುಕ್ರವಾರ) ಆಂಧ್ರ ಪ್ರದೇಶ ವಿಧಾನಸಭೆಗೆ ಮುಖ್ಯಮಂತ್ರಿಯಾಗಿ ಮರಳಿದ್ದಾರೆ. ನಾಯ್ಡು ನವೆಂಬರ್ 2021ರಲ್ಲಿ ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಹಿಂತಿರುಗುವುದಾಗಿ ಶಪಥ ಮಾಡಿದ್ದರು, ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಪ್ರಚಂಡ ಗೆಲುವು ದಾಖಲಿಸಿ ಪ್ರತಿಜ್ಞೆಯನ್ನು ಪಾಲಿಸಿದ್ದಾರೆ.

Advertisement

ಆಂಧ್ರ ವಿಧಾನಸಭೆಯಲ್ಲಿ ಶುಕ್ರವಾರ ನೂತನ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ 135 ಸ್ಥಾನಗಳ ಗೆದ್ದರೆ, ಅವರ ಮಿತ್ರಪಕ್ಷಗಳಾದ ಜನಸೇನಾ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಸ್ಥಾನಗಳ ಗೆದ್ದಿವೆ. ನಾಯ್ಡು ಅವರು ಶುಕ್ರವಾರ ಮುಖ್ಯಮಂತ್ರಿಯಾಗಿ ಕಾಲಿಡುತ್ತಿದ್ದಂತೆ ಅವರಿಗೆ ಆತ್ಮೀಯ ಸ್ವಾಗತ ನೀಡಲು ಇಡೀ ಸದನ ಎದ್ದು ನಿಂತಿದೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇದು ನಾಲ್ಕನೇ ಅವಧಿಯಾಗಿದೆ.

ಆಂಧ್ರ ವಿಧಾನಸಭೆಯಲ್ಲಿ ಅಂದು ಏನಾಗಿತ್ತು?:  

ನವೆಂಬರ್ 19, 2021 ರಂದು, ಆಗಿನ ಆಡಳಿತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರು ತಮ್ಮ ಪತ್ನಿಯ ಬಗ್ಗೆ ಮಾಡಿದ ನಿಂದನೀಯ ಹೇಳಿಕೆಗಳಿಂದ ನೊಂದು ನಾಯ್ಡು ಸದನ ತೊರೆದಿದ್ದರು. ಮಹಿಳಾ ಸಬಲೀಕರಣದ ಕುರಿತು ನಡೆದ ಚರ್ಚೆಯಲ್ಲಿ ಕೈ ಮುಗಿದು ಕಣ್ಣೀರು ಹಾಕಿ ನಾಯ್ಡು ಸದನದಿಂದ ಹೊರ ನಡೆದಿದ್ದರು. ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಎಂದು ಹೇಳಿದ ನಾಯ್ಡು, ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನಿಸಿದ ಸಭಾಂಗಣವನ್ನು ಉಲ್ಲೇಖಿಸಿ ಈ ಸಭೆಯು ‘ಕೌರವ ಸಭೆ’ಯಾಗಿದೆ ಎಂದು ಹೇಳಿ ಜರಿದಿದ್ದರು.

2019 ರ ರಾಜ್ಯ ಚುನಾವಣೆಯಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷ 175 ರಲ್ಲಿ 151 ಸ್ಥಾನಗಳ ಗೆದ್ದು ಅಧಿಕಾರ ಹಿಡಿದಿತ್ತು. ಈ ಮಧ್ಯೆ, ಟಿಡಿಪಿ ಕೇವಲ 23 ಸ್ಥಾನಗಳ ಗಳಿಸಿ ವಿಪಕ್ಷ ಸ್ಥಾನದಲ್ಲಿತ್ತು.

Advertisement

2024ರಲ್ಲಿ ನಾಯ್ಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಆಂಧ್ರಪ್ರದೇಶದ ಸಿಎಂ ಆಗಿ ಮರಳಿದರು.  ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಅವರು ದೊಡ್ಡ ಗೆಲುವು ಸಾಧಿಸಿದರು, ಮುಖ್ಯಮಂತ್ರಿ ಗದ್ದುಗೆಗೇರಿದ ಅವರು ಕೇಂದ್ರದಲ್ಲಿ ದಾಖಲೆಯ ಮೂರನೇ ಅವಧಿಯನ್ನು ಗೆದ್ದ ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next